ಸಮ ಸಮಾಜದ ನಿರ್ಮಾಣಕ್ಕೆ ಶಿಕ್ಷಣ ಮತ್ತು ಸಂಘಟನೆಯಿಂದ ಸಾಧ್ಯ:ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಅಭಿಪ್ರಾಯ

ವರದಿ:-ಕೃಷ್ಣ ಸಿದ್ದಾಪುರ
ಸಿದ್ದಾಪುರ:- ಸಮ ಸಮಾಜದ ನಿರ್ಮಾಣಕ್ಕೆ ಶಿಕ್ಷಣ ಮತ್ತು ಸಂಘಟನೆಯಿಂದ ಮಾತ್ರ ಸಾಧ್ಯ ಎಂದು ವಿರಾಜಪೇಟೆ ಅರಮೇರಿ ಕಳಂಚೇರಿ ಮಠದ ಪೀಠಾಧಿಪತಿ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಅಭಿಪ್ರಾಯಪಟ್ಟರು. ಸಿದ್ದಾಪುರದಲ್ಲಿ ನಾರಾಯಣ ಧರ್ಮ ಪರಿಪಾಲನಾಯೋಗಂ (ಎಸ್.ಎನ್.ಡಿ.ಪಿ.) ಹಮ್ಮಿಕೊಂಡಿದ್ದ ಶ್ರೀ ನಾರಾಯಣ ಗುರುಗಳ 171ನೇ ಜನ್ಮದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣದಿಂದ ಶಕ್ತರಾದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಪೋಷಕರು ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನೀಡಬೇಕೆಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಾಜಿ ಶಾಸಕ ಕೆ.ಜಿ ಬೋಪಯ್ಯ ಮಾತನಾಡಿ, 50 ಶಾಖೆಗಳನ್ನು ಒಳಗೊಂಡ ಎಸ್ ಎನ್ ಡಿ ಪಿ ಸಂಘಟನೆಯು ಜಿಲ್ಲೆಯಲ್ಲಿ ಶ್ರೀ ನಾರಾಯಣ ಗುರುಗಳ ಆದರ್ಶವನ್ನು ಸಾರುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದು, ಜಿಲ್ಲೆಯಲ್ಲಿ ಬಲಿಷ್ಠ ಸಂಘಟನೆಯಾಗಿ ತಮ್ಮ ಸಮುದಾಯ ಬಾಂಧವರ ಹೇಳಿಕೆಗೆ ಶ್ರಮಿಸುತ್ತಿದೆ ಎಂದರು. ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಸನ್ಮಾನಿಸುವ ಮೂಲಕ ವಿದ್ಯೆಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿರುವ ಸಂಘಟನೆಯ ಕಾರ್ಯ ಶ್ಲಾಘನೀಯ. ವಿದ್ಯಾರ್ಥಿಗಳನ್ನು ಗೌರವಿಸುವುದರಿಂದ ಅವರಲ್ಲಿ ಕಲಿಕೆಯ ಆಸಕ್ತಿ ಹೆಚ್ಚುತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಘಟನೆ ಅಧ್ಯಕ್ಷ ವಿ. ಕೆ ಲೋಕೇಶ್ ಮಾತನಾಡಿ ಎಸ್ ಎನ್ ಡಿ ಪಿ ಸಂಘಟನೆಯು ಕಳೆದ ಹಲವಾರು ವರ್ಷಗಳಿಂದ ಜಿಲ್ಲೆಯಲ್ಲಿ ಸಮಾಜ ಬಾಂಧವರ ಏಳಿಗೆಗೆ ಶ್ರಮಿಸುತ್ತಿದ್ದು ಜಿಲ್ಲೆಯಲ್ಲಿ ತನ್ನದೇ ಹಿಡಿತವನ್ನು ಹೊಂದಿರುವ ಸಂಘಟನೆಯಾಗಿದೆ. ಸಹಕಾರ ಸಂಘದ ಮೂಲಕ ಸಮಾಜದವರಿಗೆ ವ್ಯಾಪಾರ ವ್ಯವಹಾರ ಮಾಡಲು ಆರ್ಥಿಕ ನೆರವು ಸಂಘದ ನೇತೃತ್ವದಲ್ಲಿ ಆರೋಗ್ಯ ತಪಾಸಣೆ ಶಿಬಿರ, ಅನಾರೋಗ್ಯ ಪೀಡಿತರಿಗೆ ಆರ್ಥಿಕ ನೆರವನ್ನು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಉನ್ನತ ವಿಧ್ಯಾಭ್ಯಾಸಕ್ಕೆ ನೆರವನ್ನು ನೀಡುವ ಮೂಲಕ ಶ್ರೀ ನಾರಾಯಣ ಗುರುಗಳ ತತ್ವವನ್ನು ಪಾಲಿಸುತ್ತಿದೆ ಎಂದರು. ಕಾರ್ಯಕ್ರಮದ ಧ್ವಜಾರೋಹಣವನ್ನು ಕರಡಿಗೋಡು ಗ್ರಾಮದ ಕಾಫಿ ಬೆಳೆಗಾರರಾದ ನಾರಾಯಣ (ಬೇಬಿ)ನೆರವೇರಿಸಿದರು. ಹಳೇ ಸಿದ್ದಾಪುರದ ಅಯ್ಯಪ್ಪ ದೇವಸ್ಥಾನದಿಂದ ಬ್ರಹ್ಮರ್ಶಿ ಶ್ರೀ ನಾರಾಯಣ ಗುರುಗಳ ಶೋಭಾಯಾತ್ರೆ ಮೆರವಣಿಗೆಗೆ ಎಸ್.ಎನ್.ಡಿ.ಪಿ.ಯ ಮಾಜಿ ಜಿಲ್ಲಾ ಕಾರ್ಯದರ್ಶಿ ಎಂ.ವಿ ಸಜೀವ ಚಾಲನೆ ನೀಡಿದರು. ಚಂಡೆ ವಾದ್ಯ ಮೇಳಗಳೊಂದಿಗೆ ಕೊಡಗಿನ ವಿವಿಧ ಶಾಖೆಯ ಸದಸ್ಯರು ಕೇರಳದ ಸಾಂಪ್ರದಾಯಿಕ ಉಡುಗೆಲ್ಲಿ ಸಿದ್ದಾಪುರದ ಮುಖ್ಯ ಬೀದಿಗಳಲ್ಲಿ ಮೆರವಣಿನಡೆಸಿದರು. ಕೇರಳದ ಕ್ಯಾಲಿಕಟ್ ನ 7 ಬೀಟ್ಸ್ ಆರ್ಕೆಸ್ಟ್ರಾ ವತಿಯಿಂದ ರಸಮಂಜರಿ ಕಾರ್ಯಕ್ರಮವು ಸಾರ್ವಜನಿಕರನ್ನು ರಂಜಿಸಿತ್ತು.
ಕಾರ್ಯಕ್ರಮದಲ್ಲಿ ಆರಂಜ್ ಕೌಂಟಿ ರೆಸಾರ್ಟ್ ಚೇರ್ ಮನ್ ಇಮ್ಯಾನುವಲ್ ಟಿ ರಾಮಪುರಂ,ಲಿಟಲ್ ಕಾಲರ್ಸ್ ಅಕಾಡಮಿಯ ಪೂಜಾ ಸಜೇಶ್,ಜಯಂತಿ ಆಚರಣೆ ಸಮಿತಿ ಅಧ್ಯಕ್ಷ ಎಂ ಜಿ ರಾಜು ,ಕಾರ್ಯದರ್ಶಿ ರೆಜಿತ್ ಕುಮಾರ್, ವನಿತಾ ಯೂನಿಯನ್ ಅಧ್ಯಕ್ಷೆ ರೀಶಾ ಸುರೇಂದ್ರ ಸೇರಿದಂತೆ ಇನ್ನಿತರರು ಹಾಜರಿದ್ದರು.
ಸಾಧಕರಿಗೆ ಸನ್ಮಾನ :
ಉದ್ಯಮ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿದ ಹಾಗೂ ಸಮಾಜ ಸೇವೆಯಲ್ಲಿ ತೊಡಗಿದ ಸಿದ್ದಾಪುರದ ಕರಡಿಗೋಡು ಆರಂಜ್ ಕೌಂಟಿ ರೆಸಾರ್ಟ್ ಚೇರ್ ಮನ್ ಇಮ್ಯಾನುವಲ್ ಟಿ ರಾಂಪುರಂ ರವರನ್ನು ಎಸ್ ಎನ್ ಡಿ ಪಿ ಯೂನಿಯನ್ ವತಿಯಿಂದ ಸನ್ಮಾನಿಸಿ ಗೌರವಿಸಿದರು. ಈ ಸಂಧರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಮಾಜದವರನ್ನು ಸನ್ಮಾನಿಸಿ ಗೌರವಿಸಿದರು.ಅಲ್ಲದೆ ಜಿಲ್ಲೆಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿ ವಿಜೇತರಾದ ಪುಲಿಯೇರಿ ಎಸ್ ಎನ್ ಡಿ ಪಿ ಶಾಖೆಗೆ ಬಹುಮಾನ ವಿತರಿಸಿದರು.