ಪೊಲೀಸ್ ಸಮವಸ್ತ್ರದಲ್ಲಿ ಸುಲಿಗೆ: ನಕಲಿ ಪಿಎಸ್‌ಐ ಸೇರಿ ನಾಲ್ವರ ಬಂಧನ

ಪೊಲೀಸ್ ಸಮವಸ್ತ್ರದಲ್ಲಿ ಸುಲಿಗೆ: ನಕಲಿ ಪಿಎಸ್‌ಐ ಸೇರಿ ನಾಲ್ವರ ಬಂಧನ
Photo credit:Etv Bharath

ಬೆಂಗಳೂರು, ಡಿ.15:ಪೊಲೀಸ್ ಸಮವಸ್ತ್ರ ಧರಿಸಿ ಮನೆಮನೆಗೆ ತೆರಳಿ ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದ ನಕಲಿ ಪಿಎಸ್‌ಐ ಸೇರಿ ನಾಲ್ವರು ಆರೋಪಿಗಳನ್ನು ವಿದ್ಯಾರಣ್ಯಪುರ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಮಲ್ಲಿಕಾರ್ಜುನ್ (ನಕಲಿ ಪಿಎಸ್‌ಐ), ಪ್ರಮೋದ್, ವಿನಯ್ ಹಾಗೂ ಋತ್ವಿಕ್ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ₹45 ಸಾವಿರ ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ಐಷಾರಾಮಿ ಜೀವನ ನಡೆಸಬೇಕೆಂಬ ಆಸೆಯಿಂದ ಮಲ್ಲಿಕಾರ್ಜುನ್ ಈ ಕೃತ್ಯಕ್ಕೆ ಮುಂದಾಗಿದ್ದು, ಇತರೆ ಮೂವರು ಅವನಿಗೆ ಸಾಥ್ ನೀಡಿದ್ದಾರೆ. ದೂರುದಾರ ನವೀನ್ ಅವರ ದಿನಚರಿಯನ್ನು ಗಮನಿಸಿದ್ದ ಋತ್ವಿಕ್, ಅವರ ಮನೆಯಲ್ಲಿ ಹಣ ಮತ್ತು ಚಿನ್ನಾಭರಣ ಇರುವ ಸಾಧ್ಯತೆ ಇದೆ ಎಂದು ಮಲ್ಲಿಕಾರ್ಜುನ್‌ಗೆ ತಿಳಿಸಿದ್ದಾನೆ.

ಅದರಂತೆ ಡಿಸೆಂಬರ್ 7ರಂದು ಆರೋಪಿಗಳು ಪೊಲೀಸ್ ಸಮವಸ್ತ್ರ ಧರಿಸಿ ಕಾರಿನಲ್ಲಿ ನವೀನ್ ಮನೆಗೆ ತೆರಳಿದ್ದಾರೆ. ‘ನೀನು ಗಾಂಜಾ ಮಾರಾಟ ಮಾಡುತ್ತಿದ್ದೀಯ’ ಎಂದು ಆರೋಪಿಸಿ ಮನೆ ಶೋಧ ನಡೆಸುವುದಾಗಿ ಬೆದರಿಸಿ, ಲಾಠಿ ಹಾಗೂ ಕಬ್ಬಿಣದ ರಾಡ್‌ನಿಂದ ನವೀನ್ ಮೇಲೆ ಹಲ್ಲೆ ನಡೆಸಿದ್ದಾರೆ. ಬಂಧನ ತಪ್ಪಿಸಿಕೊಳ್ಳಲು ಹಣ ನೀಡುವಂತೆ ಒತ್ತಾಯಿಸಿ ಬ್ಯಾಂಕ್ ಖಾತೆಯಲ್ಲಿದ್ದ ₹87 ಸಾವಿರ, ಬೀರುವನಲ್ಲಿದ್ದ ₹53 ಸಾವಿರ ಹಾಗೂ ಪರ್ಸ್‌ನಲ್ಲಿದ್ದ ₹2 ಸಾವಿರವನ್ನು ಪಡೆದುಕೊಂಡು ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ನವೀನ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ವಶಪಡಿಸಿಕೊಂಡ ಹಣ ಮತ್ತು ಕಾರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ತನಿಖೆಯ ವೇಳೆ ಮಲ್ಲಿಕಾರ್ಜುನ್ ಪಿಎಸ್‌ಐ ಪರೀಕ್ಷೆಯನ್ನು ಎರಡು ಬಾರಿ ಬರೆದಿದ್ದರೂ ಉತ್ತೀರ್ಣನಾಗಿರಲಿಲ್ಲ ಎಂಬುದು ಬೆಳಕಿಗೆ ಬಂದಿದೆ. ಆದರೂ ತಾನು ಪಿಎಸ್‌ಐ ಆಗಿದ್ದೇನೆ ಎಂದು ಊರಿನವರ ಮುಂದೆ ಬಿಂಬಿಸಿಕೊಂಡು, ಪೊಲೀಸ್ ಸಮವಸ್ತ್ರದಲ್ಲಿ ಫೋಟೋಶೂಟ್ ಮಾಡಿಸಿಕೊಂಡು ಸ್ವಗ್ರಾಮ ಸಿರಗುಪ್ಪದಲ್ಲಿ ‘ಬೆಂಗಳೂರಿನಲ್ಲಿ ಪಿಎಸ್‌ಐ ಆಗಿದ್ದೇನೆ’ ಎಂದು ಹೇಳಿಕೊಂಡು ತಿರುಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.