ಗೊಂದಲದ ಗೂಡಾದ ಗೋಣಿಕೊಪ್ಪ ದಸರಾ ಸಮಿತಿ ಸಭೆ: ಅಧ್ಯಕ್ಷಗಾದಿಗೆ ಪರ ವಿರೋಧದ ಚರ್ಚೆ!

ಗೋಣಿಕೊಪ್ಪ : ಗ್ರಾಮ ಪಂಚಾಯಿತಿ ಹಳೆಯ ಸಭಾಂಗಣದಲ್ಲಿ ಕಾವೇರಿ ದಸರಾ ಸಮಿತಿಯ ಅಧ್ಯಕ್ಷರಾದ ಕುಲ್ಲಚಂಡ ಪ್ರಮೋದ್ ಗಣಪತಿ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಶ್ರೀ ಕಾವೇರಿದಸರಾ ಸಮಿತಿಯ ಮಹಾಸಭೆಯು ಗೊಂದಲದ ಗೂಡಾಗಿ ಮುಕ್ತಾಯಗೊಂಡಿತು. ಕಳೆದ ಮಹಾ ಸಭೆಯ ವರದಿ ಸೇರಿದಂತೆ ಲೆಕ್ಕಪತ್ರವನ್ನು ಮಂಡನೆ ಮಾಡಲಾಯಿತು. ಲೆಕ್ಕಪತ್ರದಲ್ಲಿ ಸಾಕಷ್ಟು ನ್ಯೂನತೆಗಳು ಇರುವುದು ಮೇಲ್ನೋಟಕ್ಕೆ ಕಂಡು ಬಂದ ಹಿನ್ನಲೆಯಲ್ಲಿ ಹಿರಿಯರಾದ ಶ್ರೀಧರ್ ನೆಲ್ಲಿತ್ತಾಯ, ಕೆ.ಬಿ. ಜಗದೀಶ್, ಕೆಲವು ಮಂದಿ ಆಕ್ಷೇಪ ವ್ಯಕ್ತಪಡಿಸಿದರು.
ಸರ್ಕಾರದ ಹಣವನ್ನು ಪೋಲು ಮಾಡದೆ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಕಾರ್ಯಕ್ರಮಗಳು ಮೂಡಿ ಬರಬೇಕು. ಅಲ್ಲದೆ ಗೌರವಧನವೂ ಕೂಡ ಹೆಚ್ಚಾಗಿ ಸ್ಥಳೀಯರಿಗೆ ನೀಡುವಂತಾಗಬೇಕು. ಸರ್ಕಾರದಿಂದ 75 ಲಕ್ಷ ಅನುದಾನ ಬಂದರೂ ಲೆಕ್ಕಪತ್ರದಲ್ಲಿ ನಷ್ಟ ಆಗಿರುವ ಬಗ್ಗೆ ಉಲ್ಲೇಖ ಮಾಡಿರುವುದು ಕಂಡು ಬಂದಿದೆ. ಈ ಬಗ್ಗೆ ಸಭೆಗೆ ಸಮಗ್ರ ಮಾಹಿತಿ ನೀಡುವಂತೆ ಸಭೆಯಲ್ಲಿದ್ದ ಪ್ರಮುಖರು ಆಗ್ರಹಿಸಿದರು. ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸಿದ ದಸರಾ ಸಮಿತಿಯ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ದಸರಾ ಕಾರ್ಯಕ್ರಮದಲ್ಲಿ ನಡೆಯುವ ಎಲ್ಲಾ ಖರ್ಚು ವೆಚ್ಚಗಳು ಜಿಲ್ಲಾಡಳಿತದ ಮೂಲಕ ನಡೆಯುತ್ತವೆ. ಕಾರ್ಯಕ್ರಮ ರೂಪಿಸಿದ ಬಗ್ಗೆ ವಿವರಗಳನ್ನು ಮಾತ್ರ ಸಮಿತಿಯ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಕಳುಹಿಸಿಕೊಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಜಿಲ್ಲಾಡಳಿತವೂ ಸಂಬಂಧಿಸಿದವರಿಗೆ ಆನ್‌ಲೈನ್ ಮೂಲಕ ಬ್ಯಾಂಕ್ ಖಾತೆಗೆ ಜಮಾಮಾಡುತ್ತದೆ. ವೇದಿಕೆ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಕೂಡ ಜಿಲ್ಲಾಡಳಿತ ಕೈಗೊಳ್ಳುತ್ತದೆ. ಲೆಕ್ಕಪತ್ರದಲ್ಲಿ ಯಾವುದೇ ಲೋಪ ಆಗಿಲ್ಲವೆಂದು ಸಭೆಗೆ ತಿಳಿಸಿದರು. ಅಂತಿಮವಾಗಿ ಸಭೆಯು ಲೆಕ್ಕಪತ್ರಕ್ಕೆ ಅನುಮೋದನೆ ನೀಡಿ ಸಭೆ ಮುಂದುವರೆಸಲು ಅವಕಾಶ ನೀಡಿತು. ಕಳೆದ ಬಾರಿ ವಿಜೇತರಾದ ಮಂಟಪಗಳಿಗೆ ನಗದು ಬಹುಮಾನವನ್ನು ಈ ವೇಳೆ ವಿತರಿಸಲಾಯಿತು.
ಸಭೆಯಲ್ಲಿ ಮುಂದಿನ ಸಾಲಿನ ಕಾವೇರಿ ದಸರಾ ಸಮಿತಿಯ ಅಧ್ಯಕ್ಷ ಸ್ಥಾನದ ಬಗ್ಗೆ ಪರ-ವಿರೋಧದ ಚರ್ಚೆ, ವಾಗ್ವಾದದ ನಡುವೆ ಅಂತಿಮವಾಗಿ ಗ್ರಾಮ ಪಂಚಾಯಿತಿಯ ಹಿರಿಯ ಸದಸ್ಯರಾದ ಚೆಪ್ಪುಡೀರ ಧ್ಯಾನ್ ಸುಬ್ಬಯ್ಯ ಅವರನ್ನು ಹಾಲಿ ಅಧ್ಯಕ್ಷರಾದ ಕುಲ್ಲಚಂಡ ಪ್ರಮೋದ್ ಗಣಪತಿ ಘೋಷಣೆ ಮಾಡಿದರು. ಆದರೆ ನೂತನ ಅಧ್ಯಕ್ಷರ ಆಯ್ಕೆ ಬಗ್ಗೆ ಸಭೆಯಲ್ಲಿ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲಾವಕಾಶ ನೀಡುವ ಮೂಲಕ ಸಭೆ ಮುಕ್ತಾಯ ಕಂಡಿತು.
ಸಭೆಯಲ್ಲಿ ಕಾವೇರಿ ದಸರಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಎನ್.ಎಸ್ ಕಂದಾದೇವಯ್ಯ ಕಳೆದ ಮಹಾಸಭೆ ವರದಿ ಮಂಡಿಸಿದರು. ಖಜಾಂಚಿ ಧ್ಯಾನ್ ಸುಬ್ಬಯ್ಯ ಲೆಕ್ಕಪತ್ರ ನೀಡಿದರು. ಸಾಂಸ್ಕೃತಿಕ ಸಮಿತಿಯ ಪ್ರಮುಖರಾದ ಶೀಲಾ ಬೋಪಣ್ಣ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಮಂಜುಳ, ದಸರಾ ಸಮಿತಿಯ ಉಪಾಧ್ಯಕ್ಷರಾದ ಶಿವಾಜಿ, ಶರತ್ ಕಾಂತ್, ಚಂದನ್ ಕಾಮತ್, ಹಿರಿಯ ನಾಗರಿಕರಾದ ಕೆ.ಎಂ ಅಜಿತ್ ಅಯ್ಯಪ್ಪ, ಎಂ. ಪಿ ಕೇಶವ್ ಕಾಮತ್, ಧನಲಕ್ಷ್ಮೀ, ಎ. ಜೆ ಬಾಬು, ಕುಪ್ಪಂಡ ತಿಮ್ಮಯ್ಯ, ಕಾಡ್ಯಮಾಡ ಚೇತನ್, ರಾಜಶೇಖರ್, ಕಡೆಮಾಡ ಕುಸುಮಾ ಜೋಯಪ್ಪ, ಟಿ. ಎಲ್ ಶ್ರೀನಿವಾಸ್, ಮುರುಗ, ಪಿ. ಕೆ. ಪ್ರವೀಣ್, ನಾರಾಯಣ ಸ್ವಾಮಿ ನಾಯ್ಡು, ಅಬ್ದುಲ್ ಸಮ್ಮದ್, ಸುರೇಶ್ ರೈ, ನಮೇರಾ ಅಂಕಿತ್, ದಶಮಂಟಪದ ಅಧ್ಯಕ್ಷ ಶಾಜಿ ಅಚ್ಚುತ್ತನ್, ನಾಡ ಸಮಿತಿಯ ಪ್ರಭಾಕರ್ ನೆಲ್ಲಿತ್ತಾಯ ಮತ್ತಿರರು ಹಾಜರಿದ್ದರು.
ವರದಿ :-ಚಂಪಾ ಗಗನ, ಪೊನ್ನಂಪೇಟೆ.