ವಿರಾಜಪೇಟೆಯಲ್ಲಿ ಅದ್ಧೂರಿ ಈದ್-ಮಿಲಾದ್ ಸಂದೇಶ ಜಾಥಾ

ವಿರಾಜಪೇಟೆ:ವಿಶ್ವ ಪ್ರವಾದಿ ಮಹಮ್ಮದ್ ಮುಸ್ತಫಾ ಸಲ್ಲಲ್ಲಾಹು ಅಲೈವಸಲ್ಲಂ ರವರ 1500 ನೇ ವರ್ಷದ ಜನ್ಮದಿನಾಚರಣೆ ಅಂಗವಾಗಿ ವಿರಾಜಪೇಟೆಯಲ್ಲಿ ಬೃಹತ್ ಕಾಲ್ನಡಿಗೆ ಸಂದೇಶ ಜಾಥಾ ನಡೆಯಿತು. ವಿರಾಜಪೇಟೆ ಶಾಫಿ ಜುಮ್ಮಾ ಮಸೀದಿ ಹಾಗೂ ವಿರಾಜಪೇಟೆ ಗೌರಿ ಕೆರೆ ಬಳಿಯ ನಸ್ರತ್ತುಲ್ ಉಲುಂ ಮದ್ರಸ ಇವರ ಸಂಯುಕ್ತ ಆಶ್ರಯದಲ್ಲಿ ರೂಹೇ ಮದೀನ ಮಿಲಾದ್ ರ‍್ಯಾಲಿ ಇದರ ಅಂಗವಾಗಿ ನಡೆದ ಬೃಹತ್ ಜಾಥಾಕ್ಕೆ ಗೌರಿಕೆರೆ ಬಳಿಯ ನಸ್ರತ್ತುಲ್ ಉಲುಂ ಮದ್ರಸ ಬಳಿ ಚಾಲನೆ ನೀಡಲಾಯಿತು.
ಬೃಹತ್ ಮಿಲಾದ್ ಸಂದೇಶ ಜಾಥದ ನೇತೃತ್ವವನ್ನು ಶಾಪಿ ಜುಮ್ಮಾ ಮಸೀದಿಯ ಅದ್ಯಕ್ಷರಾದ ಕೆ.ಪಿ. ರಷೀದ್ ಹಾಜಿ ವಹಿಸಿದ್ದರು. ಶಾದಲಿ ಶಾಫಿ ಜುಮ್ಮಾ ಮಸೀದಿ ಉಪಾಧ್ಯಕ್ಷ ಮಹಮ್ಮದ್ ರಾಫಿ, ಡೊನೆಟರ್ಸ್ ಚಾರಿಟಬಲ್ ಟ್ರಸ್ಟ್ ಅದ್ಯಕ್ಷರಾದ ಆಲಿರ ಪವಿಲ್ ಉಸ್ಮಾನ್, ಸದಸ್ಯರಾದ ಸುಬೇರ್, ಸಲಿಂ, ಅಬ್ದುಲ್ ರಜಾಕ್, ಮಿಲಾದ್ ಸ್ವಾಗತ ಸಮಿತಿ ಅಧ್ಯಕ್ಷರಾದ ಸಿ.ಎಚ್ ಆಲಿ, ವಿರಾಜಪೇಟೆ ಶಾಫಿ ಜುಮ್ಮಾ ಮಸಿದಿ ಖತೀಬರಾದ ಹಾರಿಸ್ ಬಾಖವಿ ಅವರ ನೇತೃತ್ವದಲ್ಲಿ ವಿರಾಜಪೇಟೆ ಮದ್ರಸದ ವಿದ್ಯಾರ್ಥಿಗಳು, ದಪ್ ತಂಡ, ಸ್ಕೌಟ್, ಮೆರವಣಿಗೆಯಲ್ಲಿ ಭಾಗವಹಿಸಿದ್ದವು.
ಮೆರವಣಿಗೆಯು ಮದ್ರಸದಿಂದ ಆರಂಭಗೊಂಡು ಖಾಸಗಿ ಬಸ್ ನಿಲ್ದಾಣ, ಅಬ್ದುಲ್ ಕಲಾಂ ರಸ್ತೆ, ಗೋಣಿಕೊಪ್ಪ ರಸ್ತೆ, ಸರಕಾರಿ ಬಸ್ ನಿಲ್ದಾಣ, ದೊಡ್ಡಟ್ಟಿ ಚೌಕಿ, ಎಫ್.ಎಂ.ಸಿ ರಸ್ತೆ, ಗಡಿಯಾರ ಕಂಬ, ಮುಖ್ಯ ರಸ್ತೆಯ ಮೂಲಕ ಸಾಗಿ ಶಾಪಿ ಜುಮ್ಮಾ ಮಸೀದಿಯಲ್ಲಿ ಸಂಪನ್ನಗೊಂಡಿತು. ಮೆರವಣಿಗೆ ಸಂದರ್ಭದಲ್ಲಿ ಸ್ನೇಹಿತರ ಒಕ್ಕೂಟದ ವತಿಯಿಂದ ಹಾಗೂ ಇತರ ಸಂಘ ಸಂಸ್ಥೆಗಳ ವತಿಯಿಂದ ರಸ್ತೆಯುದ್ದಕ್ಕೂ ಸಿಹಿ ತಿಂಡಿ, ತಂಪು ಪಾನೀಯ ವಿತರಣೆ ಮಾಡಲಾಯಿತು.
ಈ ಸಂದರ್ಭ ಶಾಪಿ ಜುಮ್ಮಾ ಮಸೀದಿ ಅದ್ಯಕ್ಷರು ಹಾಗೂ ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ವಿರಾಜಪೇಟೆಯ ಎಲ್ಲ ಮಸೀದಿಗಳ ಪದಾಧಿಕಾರಿಗಳು, ಮದ್ರಸದ ವಿದ್ಯಾರ್ಥಿಗಳು, ಪುಟ್ಟ ಮಕ್ಕಳಾದಿಯಾಗಿ ಜನಾಂಗ ಬಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು. ಈ ಸಂದರ್ಭ ಪ್ರವಾದಿ ಮಹಮ್ಮದರ ಸಂದೇಶವನ್ನು ಸಾರಲಾಯಿತು. ವಿರಾಜಪೇಟೆ ನಗರ ಠಾಣೆ ಅಧಿಕಾರಿ ಪ್ರಮೋದ್ ಕುಮಾರ್ ಅವರ ನೇತೃತ್ವದಲ್ಲಿ ಉತ್ತಮ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಪುರುಷರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರೆ ಮಹಿಳೆಯರು ರಸ್ತೆ ಇಕ್ಕೆಲಗಳಲ್ಲಿ ನಿಂತು ಮೆರವಣಿಗೆ ವೀಕ್ಷಣೆ ಮಾಡಿದರು.