ಶಕ್ತಿ ದೇವತೆಗಳ ಕರಗಗಳಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಐತಿಹಾಸಿಕ ಮಡಿಕೇರಿ ದಸರಾಗೆ ಚಾಲನೆ

ಶಕ್ತಿ ದೇವತೆಗಳ ಕರಗಗಳಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಐತಿಹಾಸಿಕ ಮಡಿಕೇರಿ ದಸರಾಗೆ ಚಾಲನೆ

ಮಡಿಕೇರಿ : ಇಲ್ಲಿನ ಮಹದೇವಪೇಟೆಯ ಪಂಪಿನ ಕೆರೆಯಲ್ಲಿ ಸೋಮವಾರ ಸಂಜೆ ನಗರದ ಶಕ್ತಿ ದೇವತೆಗಳ ಕರಗಗಳಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಐತಿಹಾಸಿಕ ಮಡಿಕೇರಿ ದಸರಾಗೆ ಚಾಲನೆ ದೊರೆಯಿತು.

ನಾಲ್ಕು ಶಕ್ತಿ ದೇವತೆಗಳ ಕರಗಳಿಗೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು ಅವರು ವಿಶೇಷ ಪೂಜೆ ಸಲ್ಲಿಸಿ ಮಡಿಕೇರಿ ದಸರಾ ಉತ್ಸವಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಸಚಿವರು ನಗರದ ಶಕ್ತಿ ದೇವತೆಗಳಿಗೆ ವಿಶೇಷ ಪ್ರಾರ್ಥನೆ ಸಲ್ಲಿಸುವ ಮೂಲಕ ಕರಗ ಉತ್ಸವದೊಂದಿಗೆ ಮಡಿಕೇರಿ ದಸರಾಗೆ ಚಾಲನೆ ನೀಡಲಾಗಿದೆ ಎಂದರು. ಭಕ್ತಿಭಾವದಿಂದ ಕರಗ ಉತ್ಸವದಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿದೆ ಎಂದು ಸಚಿವರು ತಿಳಿಸಿದರು.

ಶಾಸಕರಾದ ಡಾ.ಮಂತರ್ ಗೌಡ ಅವರು ಮಾತನಾಡಿ ಸರ್ಕಾರ ಮಡಿಕೇರಿ ದಸರಾ ಉತ್ಸವಕ್ಕೆ 1.50 ಕೋಟಿ ರೂ ಬಿಡುಗಡೆಗೆ ಆದೇಶ ಮಾಡಿದ್ದು, ಈ ಬಾರಿ ಸಂಗೀತಾ ಕಾರ್ಯಕ್ರಮಕ್ಕೆ ರಘು ದೀಕ್ಷಿತ್ ಅವರನ್ನು ಆಹ್ವಾನಿಸಲಾಗುವುದು ಎಂದರು.

ನಗರಸಭೆ ಅಧ್ಯಕ್ಷರಾದ ಪಿ.ಕಲಾವತಿ, ವಿಧಾನಸಭೆಯ ಮಾಜಿ ಅಧ್ಯಕ್ಷರಾದ ಕೆ.ಜಿ.ಬೋಪಯ್ಯ, ಮಾಜಿ ಸಚಿವರಾದ ಎಂ.ಪಿ.ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಮಾಜಿ ಸದಸ್ಯರಾದ ವೀಣಾ ಅಚ್ಚಯ್ಯ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಕುಮಾರ್, ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ, ಡಿವೈಎಸ್ಪಿ ಸೂರಜ್, ಪೌರಾಯುಕ್ತರಾದ ಎಚ್.ಆರ್. ರಮೇಶ್, ತಹಶಿಲ್ದಾರಾದ ಶ್ರೀಧರ, ನಗರ ದಸರಾ ಸಮಿತಿ ಅಧ್ಯಕ್ಷರಾದ ಬಿ.ಕೆ.ಅರುಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿ, ವಿವಿಧ ಉಪ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಇದ್ದರು.

 ನಗರದ ಶಕ್ತಿ ದೇವತೆಗಳಾದ ಶ್ರೀ ಕುಂದೂರು ಮೊಟ್ಟೆ ಚೌಟಿ ಮಾರಿಯಮ್ಮ, ಶ್ರೀ ಕಂಚಿ ಕಾಮಾಕ್ಷಿ, ಶ್ರೀ ದಂಡಿನ ಮರಿಯಮ್ಮ ಹಾಗೂ ಶ್ರೀ ಕೋಟೆ ಮಾರಿಯಮ್ಮ ದೇವಾಲಯಗಳ ಕರಗಗಳಿಗೆ ಪುಷ್ಪಾಲಂಕೃತವಾಗಿ ಭಕ್ತರ ಜಯಘೋಷದೊಂದಿಗೆ ಮರೆವಣಿಗೆ ಆರಂಭಿಸಿದವು. ಪೂಜೆ ಸಲ್ಲಿಕೆ ಬಳಿಕ ನಾಲ್ಕು ಶಕ್ತಿ ದೇವತೆಗಳ ಕರಗಗಳು ಮೆರವಣಿಗೆ ಹೊರಟವು. ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗುತ್ತಿದ್ದಂತೆ ಜನರು ಪೂಜೆ ಸಲ್ಲಿಸಿ ಭಕ್ತಿಭಾವ ಮೆರೆದರು.

 ಪೂಜೆಯ ನಂತರ ಆರಂಭವಾದ ಕರಗ ಉತ್ಸವ ನಗರ ಪ್ರದಕ್ಷಿಣೆಯು ನವರಾತ್ರಿ ದಿನಗಳ ಕಾಲ ಮುಂದುವರಿಯಲಿದೆ. ಶ್ರೀ ಕೋಟೆ ಮಾರಿಯಮ್ಮ ಕರಗವನ್ನು ಪಿ.ಬಿ.ಅನೀಶ್ ಕುಮಾರ್, ಶ್ರೀ ಕುಂದೂರು ಮೊಟ್ಟೆ ಚೌಟಿ ಮಾರಿಯಮ್ಮ ಕರಗವನ್ನು ಪಿ.ಪಿ. ಚಾಮಿ, ಶ್ರೀ ದಂಡಿನ ಮಾರಿಯಮ್ಮ ಕರಗವನ್ನು ಉಮೇಶ್ ಪೂಜಾರಿ ಹಾಗೂ ಶ್ರೀ ಕಂಚಿ ಕಾಮಾಕ್ಷಿ ಕರಗವನ್ನು ಪಿ.ಸಿ.ಉಮೇಶ್ ಹೊತ್ತಿದ್ದರು. ಕರಗ ಹೊರುವ ಸಂಪ್ರದಾಯ ಮಡಿಕೇರಿಯಲ್ಲಿ ಹಾಲೇರಿ ಅರಸರ ಕಾಲದಲ್ಲಿ ಆರಂಭವಾಯಿತು. ಮಾರಕ ರೋಗವೊಂದು ಸ್ಥಳೀಯರನ್ನು ಕಾಡಿ, ಸಾವು, ನೋವುಗಳಾದಾಗ ಶಕ್ತಿ ದೇವತೆಗಳಾದ ಶ್ರೀ ಕೋಟೆ ಮಾರಿಯಮ್ಮ, ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ, ದಂಡಿನ ಮಾರಿಯಮ್ಮ ಹಾಗೂ ಕಂಚಿ ಕಾಮಾಕ್ಷಿ ಕರಗವನ್ನು ಹೊರುವ ಸಂಪ್ರದಾಯ ಆರಂಭವಾಯಿತು ಎನ್ನುತ್ತಾರೆ ಹಿರಿಯರು.