ಒಮ್ಮೆಲೇ ಬೆಡ್ ರೂಮ್ಗೆ ಎಂಟ್ರಿ ಕೊಟ್ಟ ಹೋಟೆಲ್ ಸಿಬ್ಬಂದಿ: ಹೋಟೆಲ್ ಗೆ ಹತ್ತು ಲಕ್ಷ ರೂ ದಂಡ ವಿಧಿಸಿದ ನ್ಯಾಯಾಲಯ; ಕಾರಣವೇನು ಗೊತ್ತೇ!
ಚೆನ್ನೈ, ಜ.9: ರಾಜಸ್ಥಾನದ ಉದಯಪುರದಲ್ಲಿನ ಐಷಾರಾಮಿ ದಿ ಲೀಲಾ ಪ್ಯಾಲೇಸ್ ಹೋಟೆಲ್‌ನಲ್ಲಿ ವಾಸ್ತವ್ಯದಲ್ಲಿದ್ದ ದಂಪತಿಯ ಗೌಪ್ಯತೆಯನ್ನು ಉಲ್ಲಂಘಿಸಿದ ಪ್ರಕರಣದಲ್ಲಿ, ಚೆನ್ನೈ (ಉತ್ತರ) ಜಿಲ್ಲಾ ಗ್ರಾಹಕ ವಿವಾದ ಪರಿಹಾರ ಆಯೋಗವು ಹೋಟೆಲ್‌ಗೆ 10 ಲಕ್ಷ ರೂ. ಪರಿಹಾರ ಪಾವತಿಸುವಂತೆ ಆದೇಶಿಸಿದೆ.
ಚೆನ್ನೈ ಮೂಲದ ದಂಪತಿ, ಜನವರಿ 26ರಂದು ಒಂದು ದಿನದ ವಾಸ್ತವ್ಯಕ್ಕಾಗಿ ಹೋಟೆಲ್‌ನಲ್ಲಿ ಕೋಣೆ ಕಾಯ್ದಿರಿಸಿದ್ದರು. ಈ ವೇಳೆ ದಂಪತಿ ಬಾತ್‌ರೂಂನಲ್ಲಿ ಇದ್ದಾಗ, ಹೋಟೆಲ್‌ನ ಹೌಸ್‌ಕೀಪಿಂಗ್ ಸಿಬ್ಬಂದಿ ಮಾಸ್ಟರ್ ಕೀ ಬಳಸಿ ಯಾವುದೇ ಮುನ್ನೆಚ್ಚರಿಕೆ ಇಲ್ಲದೆ ಕೋಣೆಯೊಳಗೆ ಪ್ರವೇಶಿಸಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಇದರಿಂದ ತೀವ್ರ ಮುಜುಗರ ಹಾಗೂ ಮಾನಸಿಕ ತೊಂದರೆ ಉಂಟಾಗಿದೆ ಎಂದು ಅವರು ಆರೋಪಿಸಿದ್ದರು.
ಘಟನೆಯ ಬಳಿಕ ಸಿಬ್ಬಂದಿ ಕ್ಷಮೆಯಾಚನೆ ಮಾಡಿದರೂ, ವಿಷಯ ನ್ಯಾಯಾಲಯದ ಮೆಟ್ಟಿಲೇರಿತು. “ನೋ ಸರ್ವಿಸ್” ಎಂದು ಕೂಗಿದರೂ ಸಿಬ್ಬಂದಿ ತಕ್ಷಣ ಕೋಣೆಯಿಂದ ಹೊರಗೆ ಹೋಗಲಿಲ್ಲ ಎಂದು ದಂಪತಿ ದೂರಿನಲ್ಲಿ ಉಲ್ಲೇಖಿಸಿದ್ದರು.
ವಿಚಾರಣೆ ವೇಳೆ, ಹೋಟೆಲ್ ಆಡಳಿತ, ಕೋಣೆಯ ಬಾಗಿಲಿನ ಮೇಲೆ ‘ಡೂ ನಾಟ್ ಡಿಸ್ಟರ್ಬ್’ ಫಲಕ ಅಳವಡಿಸಿರಲಿಲ್ಲ ಎಂಬ ವಾದ ಮಂಡಿಸಿತು. ಆದರೆ, ಅತಿಥಿಗಳ ಗೌಪ್ಯತೆಯನ್ನು ಕಾಪಾಡುವುದು ಹೋಟೆಲ್‌ಗಳ ಮೂಲ ಜವಾಬ್ದಾರಿಯಾಗಿದ್ದು, ಈ ಪ್ರಕರಣದಲ್ಲಿ ಅದು ಉಲ್ಲಂಘನೆಯಾಗಿದೆ ಎಂದು ಆಯೋಗ ಅಭಿಪ್ರಾಯಪಟ್ಟಿತು.
ಈ ಹಿನ್ನೆಲೆಯಲ್ಲಿ, ದಂಪತಿಗೆ ಪರಿಹಾರವಾಗಿ 10 ಲಕ್ಷ ರೂ. ಪಾವತಿಸುವಂತೆ ಹಾಗೂ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸುವಂತೆ ಹೋಟೆಲ್‌ಗೆ ಸೂಚನೆ ನೀಡಲಾಗಿದೆ.