ತವರಿಗೆ ಬಂದಿದ್ದ ಪತ್ನಿಯನ್ನು ಹತ್ಯೆಗೈದ ಪತಿ; ಆರೋಪಿ ಬಂಧನ

ತವರಿಗೆ ಬಂದಿದ್ದ ಪತ್ನಿಯನ್ನು ಹತ್ಯೆಗೈದ ಪತಿ; ಆರೋಪಿ ಬಂಧನ
Photo credit: TV09 (ಪೊಲೀಸರಿಂದ ಸ್ಥಳ‌ ಪರಿಶೀಲನೆ)

ಮೈಸೂರು, ಜ. 9: ಪತಿಯಿಂದ ದೂರವಾಗಿ ತವರು ಮನೆಯಲ್ಲಿ ವಾಸವಾಗಿದ್ದ ಮಹಿಳೆಯನ್ನು ಪತಿಯೇ ಮರದ ತುಂಡಿನಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕಳಲೆ ಗ್ರಾಮದಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ಸುಧಾ ಎಂದು ಗುರುತಿಸಲಾಗಿದೆ. ಈ ಪ್ರಕರಣದಲ್ಲಿ ಆರೋಪಿ ಪತಿ ಮಹೇಶ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ಸುಮಾರು 13 ವರ್ಷಗಳ ಹಿಂದೆ ಮಲ್ಲಹಳ್ಳಿ ಗ್ರಾಮದ ಮಹೇಶ್‌ನೊಂದಿಗೆ ಸುಧಾ ವಿವಾಹವಾಗಿದ್ದರು. ಮದ್ಯಪಾನ ಸೇರಿದಂತೆ ಇತರೆ ದುಶ್ಚಟಗಳಿಂದಾಗಿ ಮಹೇಶ್ ಪತ್ನಿಗೆ ನಿರಂತರ ಕಿರುಕುಳ ನೀಡುತ್ತಿದ್ದನು. ಈ ಹಿನ್ನೆಲೆಯಲ್ಲಿ ಸುಧಾ ಎರಡು ವರ್ಷಗಳ ಹಿಂದೆ ತನ್ನಿಬ್ಬರು ಮಕ್ಕಳೊಂದಿಗೆ ತವರು ಮನೆ ಸೇರಿದ್ದರು.

ಸುಧಾಳನ್ನು ಮತ್ತೆ ಮನೆಗೆ ಕರೆದುಕೊಂಡು ಹೋಗುವಂತೆ ಮಹೇಶ್ ಹಲವು ಬಾರಿ ಒತ್ತಾಯಿಸಿದ್ದಾನೆ. ಆದರೆ ಇದಕ್ಕೆ ಸುಧಾ ನಿರಾಕರಿಸಿದ್ದಾಳೆ. ಇದೇ ವಿಚಾರವಾಗಿ ಇತ್ತೀಚೆಗೆ ಇಬ್ಬರ ನಡುವೆ ಜಗಳ ನಡೆದಿದ್ದು, ಕೋಪಗೊಂಡ ಮಹೇಶ್ ಮರದ ತುಂಡಿನಿಂದ ಸುಧಾಳ ತಲೆಗೆ ಹಲ್ಲೆ ನಡೆಸಿದ್ದಾನೆ. ತೀವ್ರ ಗಾಯಗಳಿಂದ ಸುಧಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಘಟನೆಯ ಬಳಿಕ ಆರೋಪಿ ಪರಾರಿಯಾಗಿದ್ದರೂ, ನಂಜನಗೂಡು ಪೊಲೀಸರು ಆತನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿಯಲು ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.