ಅಕ್ಕನ ಮನೆಗೆ ಪಾಲು ನೀಡಲು ಬಂದಿದ್ದ ಅಂತರಾಜ್ಯ ಕಳ್ಳನ ಬಂಧನ

ಅಕ್ಕನ ಮನೆಗೆ ಪಾಲು ನೀಡಲು ಬಂದಿದ್ದ ಅಂತರಾಜ್ಯ ಕಳ್ಳನ ಬಂಧನ

ಆನೇಕಲ್, ಡಿ. 14:ಕರ್ನಾಟಕ ಸೇರಿದಂತೆ ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡಿನಲ್ಲಿ ಕಳ್ಳತನ, ಸುಲಿಗೆ ಸೇರಿದಂತೆ ಹಲವು ಅಪರಾಧ ಪ್ರಕರಣಗಳಲ್ಲಿ ಬೇಕಾಗಿದ್ದ ಅಂತರಾಜ್ಯ ಕಳ್ಳನನ್ನು ಜಿಗಣಿ ಪೊಲೀಸರು ಬಂಧಿಸಿದ್ದಾರೆ. ಅಕ್ಕನ ಮನೆಗೆ ಬಂದ ಸಂದರ್ಭದಲ್ಲೇ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತನನ್ನು ಕನಕಪುರ ತಾಲ್ಲೂಕಿನ ಮುಳ್ಳಳ್ಳಿ ಗ್ರಾಮದ ನಿವಾಸಿ ಶಿವಕುಮಾರ್ (35) ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಕೊಲೆ, ಸುಲಿಗೆ, ಮನೆಗಳ್ಳತನ, ಬೈಕ್ ಕಳವು ಸೇರಿದಂತೆ ಒಟ್ಟು 60ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಬೆಂಗಳೂರು ನಗರ ಹಾಗೂ ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೇ 13 ಪ್ರಕರಣಗಳಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸೆಪ್ಟೆಂಬರ್ ತಿಂಗಳಲ್ಲಿ ಜಿಗಣಿಯಲ್ಲಿ ನಡೆದ ಬೈಕ್ ಕಳವು ಪ್ರಕರಣದ ತನಿಖೆ ವೇಳೆ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆಯಿಂದ ಆರೋಪಿಯ ಚಲನವಲನ ಪತ್ತೆಯಾಯಿತು. ಶಿವಕುಮಾರ್ ತನ್ನ ಅಕ್ಕನ ಮನೆಗೆ ಆಗಾಗ್ಗೆ ಬರುತ್ತಿದ್ದ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಪೊಲೀಸರು ಸಮೀಪದ ಮನೆಯೊಂದನ್ನು ಬಾಡಿಗೆ ಪಡೆದು ನಿಗಾ ವಹಿಸಿದ್ದರು.

ಆರೋಪಿ ಮನೆಗೆ ಬರುವ ಮುನ್ನ ಅಕ್ಕನಿಗೆ ದೂರವಾಣಿ ಮೂಲಕ ಮಾಹಿತಿ ನೀಡುತ್ತಿದ್ದ. ಮನೆ ಸಮೀಪ ಬಂದಾಗ ಯಾರಿಗೂ ಅನುಮಾನ ಉಂಟಾಗದಂತೆ ಆತನ ಅಕ್ಕ ಮತ್ತು ಮಕ್ಕಳು ನಿಗಾ ವಹಿಸುತ್ತಿದ್ದರು. ಈ ಸಂದರ್ಭದಲ್ಲೇ ಕದ್ದ ಚಿನ್ನಾಭರಣ ಹಾಗೂ ಇತರೆ ವಸ್ತುಗಳನ್ನು ಆಕೆಯ ಮನೆಯಲ್ಲಿ ಬಚ್ಚಿಟ್ಟಿದ್ದನೆಂದು ತನಿಖೆಯಲ್ಲಿ ತಿಳಿದುಬಂದಿದೆ.

ಬಂಧನದ ವೇಳೆ ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಬೈಕ್‌ನಿಂದ ಕೆಳಗೆ ಬಿದ್ದಿದ್ದಾನೆ. ತಕ್ಷಣವೇ ಪೊಲೀಸರು ಆತನನ್ನು ವಶಕ್ಕೆ ಪಡೆದರು. ಬಂಧಿತನಿಂದ ಮೂರು ಬೈಕ್‌ಗಳು ಹಾಗೂ ಸುಮಾರು 130 ಗ್ರಾಂ ಚಿನ್ನಾಭರಣವನ್ನು ಜಪ್ತಿ ಮಾಡಲಾಗಿದೆ.

ಕಳ್ಳತನಕ್ಕೆ ಪೂರ್ವನಿಯೋಜಿತವಾಗಿ ಯೋಜನೆ ರೂಪಿಸುತ್ತಿದ್ದ ಆರೋಪಿ, ಮೊದಲು ಬೈಕ್ ಕದ್ದು ಅದೇ ವಾಹನದಲ್ಲಿ ಚೈನ್ ಸ್ನ್ಯಾಚಿಂಗ್ ಮತ್ತು ಮನೆಗಳ್ಳತನ ನಡೆಸುತ್ತಿದ್ದನೆಂದು ಪೊಲೀಸರು ಹೇಳಿದ್ದಾರೆ. ತಾಂತ್ರಿಕ ಜ್ಞಾನ ಬಳಸಿ ಸುಳಿವು ಸಿಗದಂತೆ ಅಪರಾಧ ಎಸಗುತ್ತಿದ್ದ ಈತ, ಬೆಂಗಳೂರಿನ ಶಿವಾಜಿನಗರದ ಜೆಟ್ ಕಿಂಗ್ಸ್ ಸಂಸ್ಥೆಯಲ್ಲಿ ನೆಟ್ವರ್ಕಿಂಗ್ ಆಡಳಿತ ಕೋರ್ಸ್ ಮಾಡಿದ್ದನೆಂದು ತಿಳಿದುಬಂದಿದೆ. 

ಜಿಗಣಿ ಪೊಲೀಸ್ ಇನ್ಸ್‌ಪೆಕ್ಟರ್ ಮಂಜುನಾಥ್ ಅವರ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ ಎಂದು ತಿಳಿದು ಬಂದಿದೆ.