ಕೊಡಗು ವಿಶ್ವವಿದ್ಯಾಲಯಕ್ಕೆ ಪ್ರತಿಷ್ಠಿತ ಡಾ. ಎಸ್. ರಾಧಾಕೃಷ್ಣ ಪ್ರಶಸ್ತಿಯ ಗರಿ

ಕೊಡಗು ವಿಶ್ವವಿದ್ಯಾಲಯಕ್ಕೆ ಪ್ರತಿಷ್ಠಿತ ಡಾ. ಎಸ್. ರಾಧಾಕೃಷ್ಣ ಪ್ರಶಸ್ತಿಯ ಗರಿ

ಕುಶಾಲನಗರ: ಭಾರತೀಯ ತರಬೇತಿ ಮತ್ತು ಅಭಿವೃದ್ಧಿ ಸಂಘ, ಬೆಂಗಳೂರು ವತಿಯಿಂದ ಉದಯೋನ್ಮುಖ ಸಾಮಾಜಿಕ ಆತ್ಮಸಾಕ್ಷಿಯ ವಿಶ್ವವಿದ್ಯಾಲಯ ಮತ್ತು ಶಿಕ್ಷಕರ ದಿನಾಚರಣೆಯ ಶ್ರೇಷ್ಠತಾ ಪ್ರಶಸ್ತಿ - 2025 ಕಾರ್ಯಕ್ರಮದಲ್ಲಿ ಕೊಡಗು ವಿಶ್ವವಿದ್ಯಾಲಯದ ಅವಿರತ ಪ್ರಗತಿ ಮತ್ತು ಮಾನ್ಯ ಕುಲಪತಿಗಳಾಗಿರುವ ಪ್ರೊ. ಅಶೋಕ ಸಂಗಪ್ಪ ಆಲೂರರವರ ದೂರದೃಷ್ಟಿಯ ನಾಯಕತ್ವವನ್ನು ಗುರುತಿಸಿ ಡಾ. ಎಸ್. ರಾಧಾಕೃಷ್ಣನ್ ಪ್ರಶಸ್ತಿ ಮತ್ತು ಶ್ರೇಷ್ಠತಾ ಪ್ರಮಾಣ ಪತ್ರವನ್ನು ಬೆಂಗಳೂರಿನಲ್ಲಿ ಪ್ರದಾನ ಮಾಡಲಾಗಿದೆ.

ಕೊಡಗು ವಿಶ್ವವಿದ್ಯಾಲಯವು ಉನ್ನತ ಶ್ರೇಣಿಯ ಅತ್ಯಂತ ಪ್ರಗತಿಪರ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿ ತನ್ನ ಅತ್ಯುತ್ತಮ ಕೊಡುಗೆಯನ್ನು ಗುರುತಿಸಿಕೊಂಡಿದ್ದು, ಕಳೆದೆರಡು ವರ್ಷಗಳಿಂದ, ಜ್ಞಾನ, ನಾವೀನ್ಯತೆ ಮತ್ತು ಸಕ್ರಿಯವಾಗಿ ವಿನೂತನ ಯೋಜನೆಗಳಲ್ಲಿ ಪಾಲ್ಗೊಳ್ಳುವಿಕೆಯ ಮೂಲಕ ಗ್ರಾಮೀಣ ಸಮುದಾಯವನ್ನು ಸಬಲೀಕರಣಗೊಳಿಸುತ್ತಾ ಉನ್ನತ ಶಿಕ್ಷಣದ ನಿಜವಾದ ಚೈತನ್ಯವನ್ನು ಪ್ರದರ್ಶಿಸಿದೆ. ಔದ್ಯೋಗಿಕ ಮತ್ತು ಕೌಶಲ್ಯಾಧಾರಿತ ಕಾರ್ಯಕ್ರಮಗಳನ್ನು ರೂಪಿಸುವುದು, ಉನ್ನತ ಶಿಕ್ಷಣದ ವ್ಯಾಪ್ತಿಯನ್ನು ವಿಸ್ತರಿಸುವುದು ಮತ್ತು ಸುಸ್ಥಿರತೆ ಮತ್ತು ಹಸಿರು ಅಭ್ಯಾಸಗಳು ಸೇರಿದಂತೆ ಭವಿಷ್ಯದ ಉಪಕ್ರಮಗಳನ್ನು ಅಳವಡಿಸಿಕೊಳ್ಳುವಲ್ಲಿ ವಿಶ್ವವಿದ್ಯಾಲಯವು ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ.

ಭಾರತೀಯ ತರಬೇತಿ ಮತ್ತು ಅಭಿವೃದ್ಧಿ ಸಂಘವು ಕೊಡಗು ವಿಶ್ವವಿದ್ಯಾಲಯದ ಕುಲಪತಿಗಳಾಗಿರುವ ಪ್ರೊ. ಅಶೋಕ ಸಂಗಪ್ಪ ಆಲೂರವರ ದೂರದೃಷ್ಟಿಯ ಮಾರ್ಗದರ್ಶನ, ಶೈಕ್ಷಣಿಕ ಶ್ರೇಷ್ಠತೆಯ ನಿರಂತರ ಅನ್ವೇಷಣೆ ಮತ್ತು ಶಿಕ್ಷಣದ ಭವಿಷ್ಯವನ್ನು ರೂಪಿಸುವಲ್ಲಿ ಪರಿವರ್ತನಾತ್ಮಕ ಪಾತ್ರಕ್ಕಾಗಿ ಅವರನ್ನು ಶ್ಲಾಘಿಸಿ ಅಭಿನಂದಿಸಿದೆ. ಈ‌ ನಿಟ್ಟಿನಲ್ಲಿ ಸೆಪ್ಟೆಂಬರ್ 5, 2025 ರಂದು, ಶಿಕ್ಷಕರ ದಿನಾಚರಣೆಯ ಪ್ರಶಸ್ತಿ ಪ್ರದಾನ ಸಮಾರಂಭದ ಸಂದರ್ಭದಲ್ಲಿ ಭಾರತೀಯ ತರಬೇತಿ ಮತ್ತು ಅಭಿವೃದ್ಧಿ ಸಂಘ, ಬೆಂಗಳೂರು ವತಿಯಿಂದ ಮೆಚ್ಚುಗೆಯೊಂದಿಗೆ ಪ್ರದಾನ ಮಾಡಲಾಗಿದೆ.