2026ರ ಏ.7ರಿಂದ 12ರವರೆಗೆ ಮುಕ್ಕಾಟಿರ(ದೇವಣಗೇರಿ) ಕುಟುಂಬದ ವತಿಯಿಂದ ಕೊಡವ ಫುಟ್ಬಾಲ್ ಉತ್ಸವ
ಮಡಿಕೇರಿ: 2026ರ ಏ.7ರಿಂದ 12ರವರೆಗೆ ಮುಕ್ಕಾಟಿರ(ದೇವಣಗೇರಿ) ಕುಟುಂಬದ ವತಿಯಿಂದ ಕೊಡವ ಫುಟ್ಬಾಲ್ ಉತ್ಸವವನ್ನು ಗೋಣಿಕೊಪ್ಪದ ಆ್ಯಥ್ಲಾನ್ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಮುಕ್ಕಾಟಿರ ಕುಟುಂಬದ ಅಧ್ಯಕ್ಷ ಮುಕ್ಕಾಟಿರ ಕರುಂಬಯ್ಯ ತಿಳಿಸಿದ್ದಾರೆ.
ಅಂತರ್-ಕುಟುಂಬ ಕ್ರೀಡಾಕೂಟ ಕೊಡವರ ಏಕತೆ, ಸಂಪ್ರದಾಯ ಮತ್ತು ಫುಟ್ಬಾಲ್ ಮೇಲಿನ ಆಸಕ್ತಿಯನ್ನು ಪ್ರತಿಬಿಂಬಿಸುವ ಭವ್ಯ ಉತ್ಸವವಾಗಲಿದೆ. ಇಡೀ ಕೊಡವ ಸಮುದಾಯವನ್ನು ಹುರಿದುಂಬಿಸಲು ಮುಕ್ಕಾಟಿರ ಕುಟುಂಬ ಸಜ್ಜಾಗಿದೆ. ನಾಕೌಟ್ ಮಾದರಿಯ ಪಂದ್ಯಗಳು ನಡೆಯಲಿದ್ದು, ಇದು ಸ್ನೇಹಪರ ಪೈಪೋಟಿಯ ನಿಜವಾದ ಮನೋಭಾವವನ್ನು ಸಾಕಾರಗೊಳಿಸುತ್ತವೆ.
ಫುಟ್ಬಾಲ್ ಉತ್ಸವದ ಜೊತೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿವಿಧ ಬಗೆಯು ಖಾದ್ಯಗಳು ಮತ್ತು ಕೊಡವ ಸಮುದಾಯದ ಬಾಂಧವ್ಯ ಗಮನ ಸೆಳೆಯಲಿದೆ ಎಂದರು. ದೀರ್ಘಕಾಲದ ಕೊಡವ ಹಾಕಿ ಉತ್ಸವದ ಅಪ್ರತಿಮ ಯಶಸ್ಸು ಮತ್ತು ಚೈತನ್ಯದಿಂದ ಸ್ಫೂರ್ತಿ ಪಡೆದು ಕೊಡವ ಫುಟ್ಬಾಲ್ ಉತ್ಸವವನ್ನು ಆಯೋಜಿಸುತ್ತಿದ್ದೇವೆ. ಕೊಡವ ಕುಟುಂಬಗಳನ್ನು ಒಗ್ಗೂಡಿಸಲು, ಕ್ರೀಡಾಕ್ಷೇತ್ರದಲ್ಲಿ ಯುವ ಸಮೂಹವನ್ನು ಉತ್ತೇಜಿಸಲು ಮತ್ತು ಕೊಡಗಿನ ಖ್ಯಾತ ಕ್ರೀಡ ಪರಂಪರೆಯನ್ನು ಕಾಪಾಡಿಕೊಳ್ಳಲು ಇದು ಒಂದು ಪ್ರಮುಖ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.
ಫುಟ್ಬಾಲ್ ಉತ್ಸವದಲ್ಲಿ ೧೦೦ ಕೊಡವ ಕುಟುಂಬ ತಂಡಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮುಕ್ಕಾಟಿರ ಕುಟುಂಬದ ಸದಸ್ಯರಾದ ಶಿಲ್ಪ ನಂಜಪ್ಪ, ಶುಚಿ ಅಯ್ಯಣ್ಣ, ಜುತಿಕ ಬೋಪಣ್ಣ, ಎಂ.ಎಸ್.ಸೋಮಯ್ಯ, ಎಂ.ಎಸ್.ಬೋಪಣ್ಣ ಉಪಸ್ಥಿತರಿದ್ದರು.
