ಕುಶಾಲನಗರ : ಭಾದ್ರಪದ ಶುಕ್ಲ ಹುಣ್ಣಿಮೆ ಅಂಗವಾಗಿ ಕಾವೇರಿ ಮಾತೆಗೆ ವಿಶೇಷ ಪೂಜೆ: ಕಾವೇರಿ ಕಲುಷಿತವಾಗದಂತೆ ಎಚ್ಚರಿಕೆ ವಹಿಸಬೇಕು : ರವೀಂದ್ರ ಪ್ರಸಾದ್

ಕುಶಾಲನಗರ : ಭಾದ್ರಪದ ಶುಕ್ಲ ಹುಣ್ಣಿಮೆ ಅಂಗವಾಗಿ ಕಾವೇರಿ ಮಾತೆಗೆ ವಿಶೇಷ ಪೂಜೆ:   ಕಾವೇರಿ ಕಲುಷಿತವಾಗದಂತೆ ಎಚ್ಚರಿಕೆ ವಹಿಸಬೇಕು : ರವೀಂದ್ರ ಪ್ರಸಾದ್

ಕುಶಾಲನಗರ : ತೀರ್ಥರೂಪಿಣಿಯಾಗಿ ಹರಿದು ನಾಡಿನ ಜೀವನದಿಯಾಗಿರುವ ಕಾವೇರಿ ಕಲುಷಿತಗೊಳ್ಳದಂತೆ ನೋಡಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಬಾರವಿ ಕನ್ನಡ ಅಭಿಮಾನಿ ಸಂಘದ ಸಂಚಾಲಕ ರವೀಂದ್ರ ಪ್ರಸಾದ್ ಹೇಳಿದರು. ಪಟ್ಟಣದ ಟೋಲ್ ಗೇಟ್ ನಲ್ಲಿರುವ ಕಾವೇರಿ ದೇಗುಲದಲ್ಲಿ ಬಾರವಿ ಕನ್ನಡ ಅಭಿಮಾನಿ ಸಂಘದ ವತಿಯಿಂದ ಭಾದ್ರಪದ ಶುಕ್ಲ ಹುಣ್ಣಿಮೆ ಅಂಗವಾಗಿ ನಡೆದ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ರಾಜ್ಯದಲ್ಲಿ ಕಾವೇರಿ ನದಿ ನೀರನ್ನು ಸಹಸ್ರಾರು ಮಂದಿ ಕುಡಿಯುತ್ತಿದ್ದು ಜನರು ಕಸ ತ್ಯಾಜ್ಯ ಎಸೆಯುವುದರಿಂದ ನೀರು ಮಲಿನ ವಾಗುತ್ತದೆ. ಸ್ವಚ್ಛ ಪರಿಸರ ನಿರ್ಮಿಸಲು ಎಲ್ಲರೂ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

ಕಾವೇರಿಯ ಆರಾಧನೆಯೊಂದಿಗೆ ನದಿ ನೀರು ಸ್ವಚ್ಛವಾಗಿ ಹರಿಯುವ ಸಂದರ್ಭ ಗ್ರಾಮ ಪಟ್ಟಣಗಳ ಕಲುಷಿತ ನೀರು ನೇರವಾಗಿ ಸೇರದಂತೆ ಎಚ್ಚರ ವಹಿಸಬೇಕು. ನಿರಂತರವಾಗಿ ಕಾರ್ಯಕ್ರಮಗಳ ಮೂಲಕ ನದಿ ಸ್ವಚ್ಛತೆ ಬಗ್ಗೆ ನದಿ ಪರಿಸರದ ಕಾಳಜಿ ವಹಿಸುತ್ತಿರುವ ಬಾರವಿ ಸಂಘದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾವೇರಿ ಪ್ರತಿಮೆಗೆ ಹಾಲು, ತುಪ್ಪ, ಜೇನು, ಎಳನೀರು,ಅರಿಸಿನ, ಕುಂಕುಮಗಳಿಂದ ಅಭಿಷೇಕ ಮಾಡಲಾಯಿತು. ಅರ್ಚಕ ಪುರುಷೋತ್ತಮ್ ಭಟ್ ನೇತೃತ್ವದಲ್ಲಿ ಕಾವೇರಿ ಪ್ರತಿಮೆಗೆ ವಿಶೇಷ ಪೂಜೆ ಸಲ್ಲಿಸಿ ಆರತಿ ಬೆಳಗಲಾಯಿತು. ಅರ್ಚಕ ಪುರುಷೋತ್ತಮ್ ಭಟ್ ಮಾತನಾಡಿ, ಕಾವೇರಿ ನದಿ ನೀರಿನ ಶುದ್ಧತೆ ಕಾಪಾಡಿಕೊಳ್ಳುವುದು ನಮ್ಮ ಕೈನಲ್ಲಿದೆ. ಎಲ್ಲರೂ ತಮ್ಮ ವ್ಯಾಪ್ತಿಯಲ್ಲಿ ಶುಚಿತ್ವ ಕಾಪಾಡಿಕೊಂಡು ತ್ಯಾಜ್ಯ ನೀರು ನದಿಗೆ ಸೇರದಂತೆ ನೋಡಿಕೊಂಡರೆ ಅದು ನಾವು ಮಾಡುವ ಪುಣ್ಯದ ಕಾರ್ಯದಲ್ಲಿ ಒಂದಾಗುತ್ತದೆ.

ಪ್ರತಿಯೊಬ್ಬರೂ ನದಿಯ ಸಂರಕ್ಷಣೆಗೆ ಮುಂದಾಗಬೇಕು ಎಂದರು. ಬೆಂಗಳೂರು ಸುನಂದ ಕೌಶಿಕ್ ಅವರು ಪೂಜಾ ಸೇವಾರ್ಥ ನೆರವೇರಿಸಿದರು. ನಂತರ ನೆರೆದಿದ್ದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಬಾರವಿ ಕನ್ನಡ ಅಭಿಮಾನಿ ಸಂಘದ ಪ್ರಮುಖರಾದ ಬಬಿಂದ್ರ ಪ್ರಸಾದ್, ವಿಜಯೇಂದ್ರ ಪ್ರಸಾದ್, ಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸೋಮಶೇಖರ್, ತಿಲಕ್ ಪೂಜಾರಿ, ಆರ್.ಆರ್.ಚಂದ್ರು, ರುದ್ರ, ಮಂಜು, ಪ್ರಸಾದ್,ಆರೋಗ್ಯ ಇಲಾಖೆಯ ನಿವೃತ್ತಿ ಅಧಿಕಾರಿ ನಟರಾಜು ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.