ಮದುವೆ ಭರವಸೆ ನೀಡಿ ಲಿವಿಂಗ್ ರಿಲೇಶನ್, ಬಳಿಕ ಕೈಕೊಟ್ಟ ಶಿಕ್ಷಕನಿಂದ ಬೇರೆ ಮದುವೆಗೆ ಸಿದ್ಧತೆ; ಮಂಟಪಕ್ಕೇ ನುಗ್ಗಿದ ಯುವತಿ
ಚಿಕ್ಕಮಗಳೂರು, ಡಿ.14: ಮದುವೆಯಾಗುವುದಾಗಿ ಭರವಸೆ ನೀಡಿ ನಾಲ್ಕು ವರ್ಷಗಳ ಕಾಲ ಲಿವಿಂಗ್ ರಿಲೇಶನ್ನಡೆಸಿದ ಬಳಿಕ ಕೈಕೊಟ್ಟು ಮತ್ತೊಬ್ಬ ಯುವತಿಯನ್ನು ಮದುವೆಯಾಗಲು ಸಿದ್ಧನಾಗಿದ್ದ ಶಿಕ್ಷಕನ ವಿರುದ್ಧ ಯುವತಿ ನ್ಯಾಯಕ್ಕಾಗಿ ಧರಣಿ ನಡೆಸಿದ ಘಟನೆ ಚಿಕ್ಕಮಗಳೂರು ನಗರದ ಕಲ್ಯಾಣನಗರದಲ್ಲಿ ಶನಿವಾರ ನಡೆದಿದೆ.
ಆರೋಪಿತ ಶರತ್ ಮತ್ತು ಅಶ್ವಿನಿ ಇಬ್ಬರೂ ವೃತ್ತಿಯಲ್ಲಿ ಶಿಕ್ಷಕರಾಗಿದ್ದು, ಕಾಲೇಜು ವ್ಯಾಸಂಗದ ವೇಳೆ ಪರಿಚಯವಾಗಿ ಸ್ನೇಹ ಬೆಳೆದಿತ್ತು. ಶರತ್ ಮೊದಲ ಪತ್ನಿಯಿಂದ ವಿಚ್ಛೇದನ ಪಡೆದ ಬಳಿಕ ಅಶ್ವಿನಿಯನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದಾನೆ ಎಂದು ಅಶ್ವಿನಿ ಆರೋಪಿಸಿದ್ದಾರೆ. ಈ ಭರವಸೆಯ ಮೇರೆಗೆ ಇಬ್ಬರೂ ನಾಲ್ಕು ವರ್ಷಗಳ ಕಾಲ ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿ ಇದ್ದರು ಎನ್ನಲಾಗಿದೆ.
ಇತ್ತೀಚೆಗೆ ಶರತ್ ಮತ್ತೊಬ್ಬ ಯುವತಿಯನ್ನು ಮದುವೆಯಾಗಲು ಸಿದ್ಧತೆ ಮಾಡಿಕೊಂಡಿರುವುದು ತಿಳಿಯುತ್ತಿದ್ದಂತೆ ಅಶ್ವಿನಿ ಶನಿವಾರ ಶರತ್ ಮನೆ ಬಳಿ ವಕೀಲರೊಂದಿಗೆ ತೆರಳಿ ಪ್ರತಿಭಟನೆ ನಡೆಸಿದರು. ಈ ವೇಳೆ ಶರತ್ ಮನೆಯಿಂದ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ನ್ಯಾಯ ಸಿಗುವವರೆಗೆ ಸ್ಥಳ ತೊರೆಯುವುದಿಲ್ಲ ಎಂದು ಅಶ್ವಿನಿ ಪಟ್ಟು ಹಿಡಿದು ಕೆಲಕಾಲ ಧರಣಿ ನಡೆಸಿದರು.
ಈ ಸಂಬಂಧ ಅಶ್ವಿನಿ ಎಂಟು ತಿಂಗಳ ಹಿಂದೆ ಆಲ್ದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಗಿ ತಿಳಿದುಬಂದಿದ್ದು, ಇದೀಗ ಶರತ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮೂಲತಃ ಹಾಸನ ಜಿಲ್ಲೆಯ ಬೇಲೂರು ಮೂಲದ ಅಶ್ವಿನಿ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಈ ಕುರಿತು ಮಾತನಾಡಿದ ಅಶ್ವಿನಿ, “ವಿಚ್ಛೇದನದ ಬಳಿಕ ನನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದರು. ಆ ಮಾತನ್ನು ನಂಬಿ ಸಹಬಾಳ್ವೆಗೆ ಒಪ್ಪಿಕೊಂಡೆ. ಇದೀಗ ಮತ್ತೊಬ್ಬರೊಂದಿಗೆ ಮದುವೆಗೆ ಮುಂದಾಗಿದ್ದಾರೆ. ನನಗೆ ನ್ಯಾಯ ಬೇಕು” ಎಂದು ತಿಳಿಸಿದ್ದಾರೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
