ಲೋಕಾಯುಕ್ತ ಇನ್ಸ್ಪೆಕ್ಟರ್ ಸಜೀವ ದಹನ; ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು ಹೇಗೆ?

ಲೋಕಾಯುಕ್ತ ಇನ್ಸ್ಪೆಕ್ಟರ್ ಸಜೀವ ದಹನ; ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು ಹೇಗೆ?
Photo credit: TV09

ಹುಬ್ಬಳ್ಳಿ, ಡಿ.7: ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದ ಹೊರವಲಯದಲ್ಲಿ ಗುರುವಾರ ರಾತ್ರಿ ಸಂಭವಿಸಿದ ಭೀಕರ ಅವಘಡದಲ್ಲಿ ಲೋಕಾಯುಕ್ತ ಸಿಪಿಐ ಪಿ.ವಿ. ಸಾಲಿಮಠ (44) ಸಜೀವವಾಗಿ ದಹನಗೊಂಡಿದ್ದಾರೆ. ಕರ್ತವ್ಯ ಮುಗಿಸಿ ಗದಗಕ್ಕೆ ಪತ್ನಿ–ಮಕ್ಕಳನ್ನು ಭೇಟಿಯಾಗಲು ಹೊರಟಿದ್ದ ಸಾಲಿಮಠರಿಗೆ ದುರಂತದಲ್ಲಿ ಮೃತಪಟ್ಟಿದ್ದಾರೆ.

ಹಾವೇರಿ ಲೋಕಾಯುಕ್ತ ಕಚೇರಿಯಲ್ಲಿ ಸಿಪಿಐ ಆಗಿದ್ದ ಸಾಲಿಮಠ, ಶುಕ್ರವಾರ ಬೆಳಗಾವಿ ಕೋರ್ಟ್ ವಿಚಾರಣೆಗೆ ಹಾಜರಾಗಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ಗದಗಕ್ಕೆ ತೆರಳಿ ಕುಟುಂಬವನ್ನು ನೋಡಿಕೊಂಡು ಬೆಳಗಾವಿಗೆ ಹೋಗಲು ಯೋಜಿಸಿದ್ದರು. ಆದರೆ ರಾತ್ರಿ 7.30ರ ಸುಮಾರಿಗೆ ಹುಬ್ಬಳ್ಳಿ–ಗದಗ ಮಾರ್ಗದಲ್ಲಿ ಅವರ ಐ20 ಕಾರು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿಯಾಗಿದೆ.

ಡಿಕ್ಕಿಯ ಹೊಡೆತಕ್ಕೆ ಕಾರು ಪಕ್ಕದ ರಸ್ತೆಗೆ ಜಿಗಿದು ಮತ್ತೆ ಮೇಲಕ್ಕೆ ಬಂದಿದ್ದು, ಕ್ಷಣಕಾಲದಲ್ಲೇ ಪೆಟ್ರೋಲ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ಕಾರಿನೊಳಗೇ ಸಿಲುಕಿಕೊಂಡಿದ್ದ ಸಾಲಿಮಠ ಹೊರಬರಲು ಸಾಧ್ಯವಾಗದೇ ಸಜೀವವಾಗಿ ದಹನಗೊಂಡಿದ್ದಾರೆ. ಕಾರು ಹೊತ್ತಿ ಉರಿದ ಪರಿಣಾಮ ಶರೀರ ಗುರುತಿಸಲಾಗದಷ್ಟು ಸುಟ್ಟು ಕರಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

2003ರಲ್ಲಿ ಪಿಎಸ್‌ಐ ಆಗಿ ಸೇವೆಗೆ ಸೇರಿದ ಸಾಲಿಮಠ, ಕಲಬುರಗಿ ಜಿಲ್ಲೆಯ ಅಫಜಲಪುರ, ಸೇಡಂ, ನಂತರ ಗದಗ ನಗರ ಠಾಣೆ ಹಾಗೂ ಬೈಲಹೊಂಗಲದಲ್ಲಿ ಇನ್ಸ್‌ಪೆಕ್ಟರ್ ಆಗಿ ಕೆಲಸ ನಿರ್ವಹಿಸಿದ್ದರು. ದಕ್ಷತೆ, ಸರಳತೆ ಮತ್ತು ಪ್ರಮಾಣಿಕತೆಗೆ ಅವರು ಇಲಾಖೆಯಲ್ಲಿ ವಿಶೇಷವಾಗಿ ಗುರುತಿಸಿಕೊಂಡಿದ್ದರು.

ಅಪಘಾತದ ಬಳಿಕ ಪಾರ್ಥಿವ ಶರೀರವನ್ನು ಹುಬ್ಬಳ್ಳಿ ಕಿಮ್ಸ್‌ಗೆ ತರಿಸಲಾಗಿದ್ದು, ಅಲ್ಲಿಯೇ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ನಂತರ ಕುಟುಂಬಸ್ಥರು ಮತ್ತು ಪೊಲೀಸ್ ಇಲಾಖೆಯವರ ಸಮ್ಮುಖದಲ್ಲಿ ಅಂತಿಮ ನಮನ ಸಲ್ಲಿಸಲಾಯಿತು. ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮತ್ತು ಧಾರವಾಡ ಎಸ್ಪಿ ಗುಂಜನ್ ಆರ್ಯ ಕುಟುಂಬಕ್ಕೆ ಸಾಂತ್ವಾನ ಹೇಳಿದರು. 

ಸಾಲಿಮಠರ ಪಾರ್ಥಿವ ಶರೀರವನ್ನು ನಂತರ ಮುರಗೋಡ್ ಗ್ರಾಮದತ್ತ ಕೊಂಡೊಯ್ಯಲಾಗಿದ್ದು, ಮಾರ್ಗ ಮಧ್ಯೆಯ ಅನೇಕ ಠಾಣೆಗಳಲ್ಲಿ ಸಿಬ್ಬಂದಿ ಗೌರವ ಸಲ್ಲಿಸಿದರು. ಹುಟ್ಟೂರಿನಲ್ಲಿ ಇಂದು ಅಂತ್ಯಕ್ರಿಯೆ ನೆರವೇರಿತು.