ಸೆಪ್ಟೆಂಬರ್ 22 ರಿಂದ 30ರವರೆಗೆ ಮಡಿಕೇರಿ ದಸರಾ ಕ್ರೀಡಾಕೂಟ

ಮಡಿಕೇರಿ: ಸೆ.22ರಿಂದ 30ರವರೆಗೆ ಮಡಿಕೇರಿ ದಸರಾ ಸಮಿತಿ ಮತ್ತು ನಗರ ದಸರಾ ಕ್ರೀಡಾ ಸಮಿತಿ ವತಿಯಿಂದ ಮಡಿಕೇರಿ ದಸರಾ ಕ್ರೀಡಾಕೂಟ ನಗರದ ಜನರಲ್ ತಿಮ್ಮಯ್ಯ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕ್ರೀಡಾ ಸಮಿತಿ ಅಧ್ಯಕ್ಷ ಪ್ರದೀಪ್ ಕರ್ಕೆರ ತಿಳಿಸಿದರು.
ಸೆ.22ರಂದು ಬೆಳಗ್ಗೆ 6 ಗಂಟೆಗೆ ಪುರುಷರಿಗೆ, ಮಹಿಳೆಯರಿಗೆ ರಸ್ತೆ ಓಟ ನಡೆಯಲಿದೆ.ನಂತರ ವಿವಿಧ ವಿಭಾಗಗಳಲ್ಲಿ ಜನರಲ್ ತಿಮ್ಮಯ್ಯ ವೃತ್ತದಿಂದ ನಿರುಕೊಲ್ಲಿಯವರೆಗೆ ನಡೆಯಲಿದೆ. ಸೆ.23ರಂದು ಬಾಸ್ಕೆಟ್ ಬಾಲ್(ಪುರುಷರಿಗೆ)ಮತ್ತು ಫುಟ್ಬಾಲ್ ಜನರಲ್ ತಿಮ್ಮಯ್ಯ ಮೈದಾನದಲ್ಲಿ ನಡೆಯಲಿದೆ ಎಂದು ತಿಳಿಸಿದರು. ಸೆ.24ರಂದು ಬನ್ನಿಮಂಟಪದಿಂದ ಕ್ರೀಡಾಜ್ಯೋತಿ ತರಲಾಗುವುದು. ಸೆ.24ರಂದು ವಯೋಮಿತಿ ಆಧಾರದಲ್ಲಿ ವಿವಿಧ ಸ್ಪರ್ಧೆ ನಡೆಯಲಿದೆ.
ಸೆ.25ರಂದು ಕೂರ್ಗ್ ಎಂಟರ್‌ಪ್ರೈಸಸ್ ಕಟ್ಟಡದಲ್ಲಿ ಸ್ನೂಕರ್ ಪಂದ್ಯ ನಡೆಯಲಿದೆ. ಸೆ.25ರಂದು ನಗರದ ಜನರಲ್ ತಿಮ್ಮಯ್ಯ ಮೈದಾನದಲ್ಲಿ ಕ್ರಿಕೆಟ್ ಪಂದ್ಯಾಟ ನಡೆಯಲಿದೆ. ಸೆ.26ರಂದು ನಗರದ ರಾಜ್‌ದರ್ಶನ್ ಹೊಟೇಲ್ ಸಭಾಂಗಣದಲ್ಲಿ ಚೆಸ್ ಪಂದ್ಯಾಟ, ಕೇರಂ ಪಂದ್ಯಾಟ ನಡೆಯಲಿದೆ. ಸೆ.28ರಂದು ಗಾಂದಿ ಮೈದಾನದಲ್ಲಿ ಮಡ್ ಕಬಡ್ಡಿ, ಸೆ.29 ರಂದು ರಾಜ್‌ದರ್ಶನ್ ಹೋಟೆಲ್ ಸಭಾಂಗಣದಲ್ಲಿ ದೇಹದಾಡ್ಯ ಸ್ಪರ್ಧೆ, ಸೆ.30ರಂದು ಜಿಲ್ಲಾ ಕ್ರೀಡಾಂಗಣದ ಸಮೀಪವಿರುವ ಬಾಕ್ಸಿಂಗ್ ಕ್ರೀಡಾಂತಣದಲ್ಲಿ ಕಿಕ್ ಬಾಕ್ಸಿಂಗ್ ನಡೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ನಗರ ದಸರಾ ಕ್ರೀಡಾ ಸಮಿತಿಯ ಪ್ರದಾನ ಕಾರ್ಯದರ್ಶಿ ಕಪಿಲ್ ಕುಮಾರ್, ಉಪಾಧ್ಯಕ್ಷರಾದ ಉಮೇಶ್, ಕೆ.ಆರ್.ದಿನೇಶ್ ಶೆಟ್ಟಿ, ಪ್ರಮುಖರಾದ ಜಿ.ಎಸ್.ಕೃಷ್ಣ, ಎಂ.ಪಿ.ನಿರಂಜನ್ ಉಪಸ್ಥಿತರಿದ್ದರು.