ತಿಂಗಕೊರ್ ಮೊಟ್ಟ್ ತಲಕಾವೇರಿಕ್ ಕೂಟದ 500 ಕ್ಕೂ ಅಧಿಕ ಭಕ್ತಾಧಿಗಳಿಂದ ತಲಕಾವೇರಿ ಸ್ವಚ್ಛತಾ ಕಾರ್ಯ

ತಿಂಗಕೊರ್ ಮೊಟ್ಟ್ ತಲಕಾವೇರಿಕ್ ಕೂಟದ 500 ಕ್ಕೂ ಅಧಿಕ ಭಕ್ತಾಧಿಗಳಿಂದ ತಲಕಾವೇರಿ ಸ್ವಚ್ಛತಾ ಕಾರ್ಯ

ಭಾಗಮಂಡಲ: ತಲಕಾವೇರಿ ಹಾಗೂ ಭಾಗಮಂಡಲ ಕ್ಷೇತ್ರಕ್ಕೆ ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಪ್ರತಿ ತಿಂಗಳು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ, ಕ್ಷೇತ್ರದ ಸೇವೆ ಸಲ್ಲಿಸುವ ನಿಟ್ಟಿನಲ್ಲಿ ಹೆಜ್ಜೆ ಇಡುತ್ತಿರುವ "ತಿಂಗಕೊರ್ ಮೊಟ್ಟ್ ತಲಕಾವೇರಿಕ್" ಎಂಬ ಕಾವೇರಿ ಭಕ್ತಾದಿಗಳ ಕೂಟ ತೀರ್ಥೋದ್ಭವಕ್ಕೆ ಮುನ್ನ ತಲಕಾವೇರಿ ಕ್ಷೇತ್ರದಲ್ಲಿ ಸ್ವಚ್ಛತಾ ಸೇವೆಯನ್ನು ಸುಮಾರು 500 ಕ್ಕೂ ಅಧಿಕ ಭಕ್ತಾಧಿಗಳು ಭಾನುವಾರ ಕೈಗೊಂಡರು.

 ಇದು 5ನೇ ವರ್ಷದ ಸ್ವಚ್ಛತಾ ಸೇವಾ ಕಾರ್ಯವಾಗಿದ್ದು, 57 ತಿಂಗಳಿನಿಂದ ಕ್ಷೇತ್ರಕ್ಕೆ ಆಗಮಿಸುತ್ತಿರುವ ಕೂಟದಿಂದ,ಕಳೆದ 5 ವರ್ಷಗಳಿಂದ ತೀರ್ಥೋದ್ಭವಕ್ಕೆ ಮುನ್ನ ನೂರಾರು ಭಕ್ತಾದಿಗಳಿಂದ ಈ ಸ್ವಚ್ಛತಾ ಸೇವೆಯನ್ನು ನಡೆಸುತ್ತಾ ಬರುತಿದ್ದಾರೆ. ಭಾನುವಾರ ನಡೆದ ಸ್ವಚ್ಛತಾ ಕಾರ್ಯದಲ್ಲಿ ಜಿಲ್ಲೆಯ ಮತ್ತು ಹೊರ ಜಿಲ್ಲೆಯಿಂದ ಭಕ್ತ ಜನ ಆಗಮಿಸಿದ್ದರು. 9 ವಿಶೇಷ ಬಸ್ ವ್ಯವಸ್ಥೆ, ಮತ್ತು ಖಾಸಗಿ ವಾಹನಗಳ ಮೂಲಕ ಆಗಮಿಸಿ ಕ್ಷೇತ್ರದ ಸೇವೆಯಲ್ಲಿ ಮಹಿಳೆಯರು, ಮಕ್ಕಳು, ಹಿರಿಯರು ಸೇರಿ ಪ್ರತಿಯೊಬ್ಬರೂ ತಮ್ಮಿಂದ ಆಗುವ ಸೇವೆಯನ್ನು "ತಿಂಗಕೊರ್ ಮೊಟ್ಟ್ ತಲಕಾವೇರಿಕ್" ಕೂಟ ನೀಡಿದ್ದ ಮನವಿಗೆ ಸ್ವಯಂ ಪ್ರೇರಿತವಾಗಿ ಆಗಮಿಸಿ ಸೇವೆಯಲ್ಲಿ ಪಾಲ್ಗೊಂಡಿದ್ದರು.