ಇಂದಿನಿಂದ ಅಮ್ಮತ್ತಿಯಲ್ಲಿ ಮೈಸೂರು ವಿಭಾಗ ಮಟ್ಟದ 14 ಮತ್ತು 17 ವರ್ಷ ವಯೋಮಾನದ ಬಾಲಕ,ಬಾಲಕಿಯರ ಫುಟ್ಬಾಲ್ ಕಲರವ: ನವೆಂಬರ್ 8 ರಿಂದ 10ರವರೆಗೆ ರಾಜ್ಯ ಮಟ್ಟದ ಪಂದ್ಯಾವಳಿ
(ಕೆ.ಎಂ ಇಸ್ಮಾಯಿಲ್ ಕಂಡಕರೆ)
ಮಡಿಕೇರಿ: ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್,ಉಪನಿರ್ದೇಶಕರ ಕಛೇರಿ,ಶಾಲಾ ಶಿಲಾ ಶಿಕ್ಷಣ ಇಲಾಖೆ ಕೊಡಗು ಜಿಲ್ಲೆ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ವಿರಾಜಪೇಟೆ ತಾಲ್ಲೂಕು ಹಾಗೂ ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್, ಮಿಲನ್ಸ್ ಫುಟ್ಬಾಲ್ ಕ್ಲಬ್ ಅಮ್ಮತ್ತಿ ಇವರ ಸಹಯೋಗದೊಂದಿಗೆ ಅಮ್ಮತ್ತಿಯ ಪ್ರೌಢಶಾಲಾ ಶಾಲಾ ಮೈದಾನದಲ್ಲಿ ಮೈಸೂರು ವಿಭಾಗ ಮಟ್ಟ ಮತ್ತು ರಾಜ್ಯ ಮಟ್ಟದ 14 ಮತ್ತು 17 ವರ್ಷ ವಯೋಮಾನದ ಬಾಲಕ,ಬಾಲಕಿಯರ ಫುಟ್ಬಾಲ್ ಪಂದ್ಯಾವಳಿ ಇಂದಿನಿಂದ(ನ.6) ನವೆಂಬರ್ 10ರವರೆಗೆ ನಡೆಯಲಿದೆ.
ಈಗಾಗಲೇ ಮೈದಾನದ ಸಿದ್ಧತೆ ಪೂರ್ಣಗೊಂಡಿದ್ದು,ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಹಾಗೂ ಮಿಲನ್ಸ್ ಫುಟ್ಬಾಲ್ ಕ್ಲಬ್ ಅಮ್ಮತ್ತಿಯ ಪದಾಧಿಕಾರಿಗಳು ಅಮ್ಮತ್ತಿ ಪ್ರೌಢಶಾಲಾ ಮೈದಾನವನ್ನು ಅಚ್ಚುಕಟ್ಟಾಗಿ ತಯಾರು ಮಾಡಿದ್ದಾರೆ.ಇದೇ ಮೊದಲ ಬಾರಿಗೆ ವಿರಾಜಪೇಟೆ ತಾಲ್ಲೂಕಿನ ರಾಜ್ಯ ಮಟ್ಟದ 14 ಮತ್ತು 17 ವರ್ಷ ವಯೋಮಾನದ ಬಾಲಕ ಮತ್ತು ಬಾಲಕಿಯರ ಫುಟ್ಬಾಲ್ ಪಂದ್ಯಾವಳಿ ನಡೆಯುತ್ತಿದೆ.
ನ.6 ಮತ್ತು 7 ರಂದು ಮೈಸೂರು ವಿಭಾಗ ಮಟ್ಟದ ಪಂದ್ಯಾವಳಿ:
ನವೆಂಬರ್ 6.(ಇಂದು) ಮತ್ತು 7ರಂದು ಮೈಸೂರು ವಿಭಾಗ ಮಟ್ಟದ 14 ಮತ್ತು 17 ವರ್ಷ ವಯೋಮಾನದ ಬಾಲಕ ಮತ್ತು ಬಾಲಕಿಯರ ಫುಟ್ಬಾಲ್ ಪಂದ್ಯಾವಳಿ ನಡೆಯಲಿದೆ.ಮೈಸೂರು ವಿಭಾಗ ಮಟ್ಟದಲ್ಲಿ ಕೊಡಗು,ದಕ್ಷಿಣ ಕನ್ನಡ,ಉಡುಪಿ,ಚಿಕ್ಕಮಗಳೂರು,ಮೈಸೂರು,ಮಂಡ್ಯ,ಚಾಮರಾಜನಗರ ಹಾಗೂ ಹಾಸನ ಜಿಲ್ಲೆಯ ತಂಡಗಳು ಭಾಗವಹಿಸಲಿದೆ.ಮೈಸೂರು ವಿಭಾಗ ಮಟ್ಟದಲ್ಲಿ ಗೆಲುವು ಸಾಧಿಸುವ ತಂಡಗಳು ನವೆಂಬರ್ 8 ರಿಂದ 10ರವರೆಗೆ ನಡೆಯಲಿರುವ ರಾಜ್ಯ ಮಟ್ಟದ ಪಂದ್ಯಾವಳಿಯಲ್ಲಿ ಮೈಸೂರು ವಿಭಾಗವನ್ನು ಪ್ರತಿನಿಧಿಸಲಿದೆ.
ಮೈಸೂರು ವಿಭಾಗ ಮಟ್ಟದ ಬಾಲಕ ಮತ್ತು ಬಾಲಕಿಯರ ಪಂದ್ಯಗಳು ಇಂದು ಮಧ್ಯಾಹ್ನ 1ಗಂಟೆಗೆ ಆರಂಭಗೊಳ್ಳಲಿದೆ.ವಿಭಾಗ ಮಟ್ಟದ ಪಂದ್ಯಗಳು ನಾಕೌಟ್ ಮಾದರಿಯಲ್ಲಿ ನಡೆಯಲಿದೆ.ನವೆಂಬರ್ 7ರಿಂದ ಎಲ್ಲಾ ಪಂದ್ಯಗಳು ಬೆಳಗ್ಗೆ 6.30 ಗಂಟೆಯಿಂದ ಆರಂಭಗೊಳ್ಳಲಿದೆ.ಮೈಸೂರು ವಿಭಾಗ ಮಟ್ಟದಲ್ಲಿ ಭಾಗವಹಿಸುವ ಎಂಟು ತಂಡಗಳು ಬಲಿಷ್ಠ ತಂಡಗಳಾಗಿದ್ದು,ಪ್ರತೀ ಬಾರಿ ಕೂಡ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.ಈ ಬಾರಿಯ ಮೈಸೂರು ವಿಭಾಗ ಮಟ್ಟದಲ್ಲಿ ಯಾವ ತಂಡ ಗೆಲುವು ಸಾಧಿಸಲಿದೆ ಎಂಬುದು ಕುತೂಹಲವಾಗಿದೆ.ಕೊಡಗು,ಮಂಡ್ಯ,ದಕ್ಷಿಣ ಕನ್ನಡ ಗೆಲ್ಲುವ ಫೇವರೇಟ್ ತಂಡಗಳಾಗಿವೆ.
ನವೆಂಬರ್ 8ರಿಂದ ರಾಜ್ಯ ಮಟ್ಟದ ಪಂದ್ಯ:
ನವೆಂಬರ್ 8 ರಿಂದ 10ರವರೆಗೆ ಅಮ್ಮತ್ತಿ ಪ್ರೌಢಶಾಲಾ ಮೈದಾನದಲ್ಲಿ 14 ಮತ್ತು 17 ವರ್ಷ ವಯೋಮಾನದ ಬಾಲಕ ಮತ್ತು ಬಾಲಕಿಯರ ಫುಟ್ಬಾಲ್ ಪಂದ್ಯಾವಳಿ ನಡೆಯಲಿದೆ.ರಾಜ್ಯ ಮಟ್ಟದ ಪಂದ್ಯಾವಳಿಯಲ್ಲಿ ಬಾಲಕರ ವಿಭಾಗದಲ್ಲಿ ಐದು ಹಾಗೂ ಬಾಲಕಿಯರ ವಿಭಾಗದಲ್ಲಿ ನಾಲ್ಕು ವಿಭಾಗಗಳು ಸೆಣಸಾಟ ನಡೆಸಲಿದೆ.ಬಾಲಕರ ವಿಭಾಗದಲ್ಲಿ ಮೈಸೂರು, ಕಲಬುರ್ಗಿ,ಬೆಳಗಾವಿ,ಬೆಂಗಳೂರು ಹಾಗೂ ಡಿವೈಎಸ್ಎಸ್ ವಿಭಾಗದ ತಂಡಗಳು ಭಾಗವಹಿಸಲಿದೆ.
ಬಾಲಕಿಯರ ವಿಭಾಗದಲ್ಲಿ ಮೈಸೂರು,ಕಲಬುರ್ಗಿ,ಬೆಳಗಾವಿ ಹಾಗೂ ಬೆಂಗಳೂರು ತಂಡಗಳು ಭಾಗವಹಿಸಲಿದೆ.ರಾಜ್ಯ ಮಟ್ಟದ ಪಂದ್ಯಾವಳಿ ಲೀಗ್ ಮಾದರಿಯಲ್ಲಿ ನಡೆಯಲಿದ್ದು,ಬಾಲಕರು ತಂಡವು ಲೀಗ್ ಹಂತದಲ್ಲಿ ನಾಲ್ಕು ಪಂದ್ಯ ಹಾಗೂ ಬಾಲಕಿಯರ ತಂಡಗಳು ಮೂರು ಪಂದ್ಯವನ್ನು ಆಡಲಿದೆ.ಲೀಗ್ ಹಂತದಲ್ಲಿ ಟೇಪಲ್ ಟಾಪರ್ ಪಡೆಯುವ ತಂಡಗಳು ಚಾಂಪಿಯನ್ ಪ್ರಶಸ್ತಿ ಪಡೆದು,ರಾಷ್ಟ್ರ ಮಟ್ಟಕ್ಕೆ ಅರ್ಹತೆ ಪಡೆಯಲಿದೆ.ರಾಜ್ಯ ಮಟ್ಟದಲ್ಲಿ ಎಂದಿನಂತೆ ಬೆಂಗಳೂರು ಡಿವೈಎಸ್ಎಸ್ ಗೆಲ್ಲುವ ಫೇವರೇಟ್ ತಂಡಗಳಲ್ಲಿ ಒಂದಾಗಿದೆ.
ನಾಲ್ಕು ಶಾಲೆಗಳಲ್ಲಿ ಕ್ರೀಡಾಪಟುಗಳಿಗೆ ವಸತಿ ವ್ಯವಸ್ಥೆ:
ವಿಭಾಗ ಮಟ್ಟ ಮತ್ತು ರಾಜ್ಯ ಮಟ್ಟದಲ್ಲಿ ಭಾಗವಹಿಸುವ ಆಟಗಾರರಿಗೆ ಬೇಕಾದ ಎಲ್ಲಾ ರೀತಿಯ ಸೌಕರ್ಯಗಳನ್ನು ಈಗಾಗಲೇ ಮಾಡಲಾಗಿದ್ದು,ಅಮ್ಮತ್ತಿಯ ಸರ್ಕಾರಿ ಪ್ರಾಥಮಿಕ ಶಾಲೆ,ಪ್ರೌಢಶಾಲೆ,ನೇತಾಜಿ ಪ್ರೌಢಶಾಲೆ ಮತ್ತು ಗುಡ್ ಶೆಫರ್ಡ್ ಶಾಲೆಯಲ್ಲಿ ಕ್ರೀಡಾಪಟುಗಳಿಗೆ ವಸತಿ ವ್ಯವಸ್ಥೆ ಮಾಡಲಾಗಿದೆ.ಅದಲ್ಲದೇ ಅಚ್ಚುಕಟ್ಟಾದ ಊಟದ ವ್ಯವಸ್ಥೆ ಸಿದ್ಧಪಡಿಸಲಾಗಿದೆ.ಮೈಸೂರು ವಿಭಾಗ ಮಟ್ಟದಲ್ಲಿ ಭಾಗವಹಿಸುವ ಎಂಟು ತಂಡಗಳು ಇಂದು ಬೆಳಗ್ಗೆ 10 ಗಂಟೆಗೆ ಹಾಗೂ ರಾಜ್ಯ ಮಟ್ಟದಲ್ಲಿ ಭಾಗವಹಿಸುವ ತಂಡಗಳು ನವೆಂಬರ್ 7ರ ಸಂಜೆ ಅಮ್ಮತ್ತಿ ತಲುಪಲಿದ್ದಾರೆ.ರಾಜ್ಯ ಫುಟ್ಬಾಲ್ ಸಂಸ್ಥೆಯ ತೀರ್ಪುಗಾರರು ಮೈಸೂರು ವಿಭಾಗ ಮತ್ತು ರಾಜ್ಯ ಮಟ್ಟದ ಪಂದ್ಯಾವಳಿಯಲ್ಲಿ ತೀರ್ಪುಗಾರಿಕೆ ನೀಡಲಿದ್ದಾರೆ.
ಮೈಸೂರು ವಿಭಾಗ ಮಟ್ಟದಲ್ಲಿ 14 ವರ್ಷ ವಯೋಮಾನದ ಬಾಲಕರ ವಿಭಾಗದಲ್ಲಿ ಕೊಡಗು ತಂಡವನ್ನು ಹುಂಡಿ ಮರ್ಕಝ್ ಪಬ್ಲಿಕ್ ಶಾಲೆ, ಬಾಲಕಿಯರ ವಿಭಾಗದಲ್ಲಿ ಪೊನ್ನಂಪೇಟೆ ಅಪ್ಪಚ್ಚ ಕವಿ ವಿದ್ಯಾಸಂಸ್ಥೆಯ ಕ್ರೀಡಾಪಟುಗಳು ಪ್ರತಿನಿಧಿಸಲಿದೆ.17ವರ್ಷ ವಯೋಮಾನದ ಬಾಲಕರ ವಿಭಾಗದಲ್ಲಿ ಅಮ್ಮತಿಯ ನೇತಾಜಿ ಪ್ರೌಢಶಾಲೆ ಹಾಗೂ ಬಾಲಕಿಯರ ವಿಭಾಗದಲ್ಲಿ ಲಯನ್ಸ್ ವಿದ್ಯಾಸಂಸ್ಥೆಯ ಕ್ರೀಡಾಪಟುಗಳು ಕೊಡಗು ತಂಡವನ್ನು ಪ್ರತಿನಿಧಿಸಲಿದೆ.
ಇದೇ ಮೊದಲ ಬಾರಿಗೆ ವಿರಾಜಪೇಟೆ ತಾಲ್ಲೂಕಿನಲ್ಲಿ ರಾಜ್ಯ ಮಟ್ಟದ 14 ಮತ್ತು 17 ವರ್ಷ ವಯೋಮಾನದ ಬಾಲಕ,ಬಾಲಕಿಯರ ಫುಟ್ಬಾಲ್ ಪಂದ್ಯಾವಳಿ ನಡೆಯುತ್ತಿದೆ.ನವೆಂಬರ್ 6 ಮತ್ತು 7ರಂದು ಮೈಸೂರು ವಿಭಾಗ ಮಟ್ಟದ ಪಂದ್ಯಾವಳಿ ನಡೆಯಲಿದ್ದು,ನ.8ರಿಂದ 10ರವರೆಗೆ ರಾಜ್ಯ ಮಟ್ಟದ ಪಂದ್ಯಾವಳಿ ನಡೆಯಲಿದೆ. ಈಗಾಗಲೇ ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಹಾಗೂ ಅಮ್ಮತ್ತಿ ಮಿಲನ್ಸ್ ಫುಟ್ಬಾಲ್ ಕ್ಲಬ್ ಸಹಕಾರದಿಂದ ಅಚ್ಚುಕಟ್ಟಾಗಿ ಮೈದಾನವನ್ನು ಸಿದ್ಧಪಡಿಸಲಾಗಿದೆ.ರಾಜ್ಯ ಫುಟ್ಬಾಲ್ ಸಂಸ್ಥೆಯ ತೀರ್ಪುಗಾರರು ಪಂದ್ಯಾವಳಿಗೆ ತೀರ್ಪುಗಾರಿಕೆ ಮಾಡಲಿದ್ದಾರೆ.
ಪಿಎ ನಾಗೇಶ್(ಈಶ್ವರ್), ದೈಹಿಕ ಶಿಕ್ಷಕರು ಲಯನ್ಸ್ ವಿದ್ಯಾಸಂಸ್ಥೆ ಗೋಣಿಕೊಪ್ಪ, ಕಾರ್ಯದರ್ಶಿ ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್
