ಅಪ್ರು ರವೀಂದ್ರ ಸೇರ್ಪಡೆಗೆ ಕಾಂಗ್ರೆಸ್ ನಲ್ಲಿ ವಿರೋಧ

ಅಪ್ರು ರವೀಂದ್ರ ಸೇರ್ಪಡೆಗೆ ಕಾಂಗ್ರೆಸ್ ನಲ್ಲಿ ವಿರೋಧ
ಪ್ರಧಾನ ಕಾರ್ಯದರ್ಶಿ, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಹಾಗೂ ಪ್ರಧಾನ ಕಾರ್ಯದರ್ಶಿ,ಸಾಮಾಜಿಕ ಜಾಲತಾಣ ಕೊಡಗು ಜಿಲ್ಲಾ ಕಾಂಗ್ರೆಸ್.

ಮಡಿಕೇರಿ : ಬಿಜೆಪಿಯ ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾಧ್ಯಕ್ಷ ಅಪ್ರು ರವೀಂದ್ರ ಅವರು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾಗಿರುವ ಕುರಿತು, ಕಾಂಗ್ರೆಸ್ಸಿಗರಲ್ಲೇ ವಿರೋಧ ವ್ಯಕ್ತವಾಗಿದೆ. ಪತ್ರಿಕಾ ಪ್ರಕಟಣೆ ನೀಡಿರುವ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಕೊಡಗು ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಪ್ರಧಾನ ಕಾರ್ಯದರ್ಶಿ ಎಂ.ಎನ್.ರವೂಫ್ ಅವರು ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಲು ಬಿಜೆಪಿ ಮೂಲಕ ತಂತ್ರಗಾರಿಕೆ ಹೂಡಿದ್ದ ಅಪ್ರು ರವೀಂದ್ರ ಅವರ ಸೇರ್ಪಡೆಯನ್ನು ತೀವ್ರವಾಗಿ ವಿರೋಧಿಸುವುದಾಗಿ ತಿಳಿಸಿದ್ದಾರೆ.

 ಮೊದಲು ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡು ನಂತರ ಬಿಜೆಪಿಗೆ ಸೇರ್ಪಡೆಯಾಗಿ ಕಾಂಗ್ರೆಸ್ ವಿರುದ್ಧ ರಾಜಕೀಯ ಮಾಡಿದ ವ್ಯಕ್ತಿ ಇಂದು ಪಕ್ಷ ಅಧಿಕಾರದಲ್ಲಿದೆ ಎನ್ನುವ ಕಾರಣಕ್ಕೆ ಮತ್ತೆ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ. ಈ ಬೆಳವಣಿಗೆ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ನೋವುಂಟು ಮಾಡಿದೆ. ಕಾಂಗ್ರೆಸ್ ಸೋಲಿಗೆ ಪ್ರಯತ್ನಿಸಿದವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿರುವ ನಾಯಕರ ನಿಲುವು ಕಾರ್ಯಕರ್ತರ ಭಾವನೆಗೆ ವಿರುದ್ಧವಾಗಿದೆ. ಕೊಡಗು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಇಂದು ಬೆಳೆದು ಹೆಮ್ಮರವಾಗಿದೆ. ಇದಕ್ಕೆ ಕಾರ್ಯಕರ್ತರ ಶ್ರಮ ಪ್ರಮುಖ ಕಾರಣವಾಗಿದೆ.

 ಪಕ್ಷಕ್ಕಾಗಿ ಹಗಲಿರುಳು ದುಡಿದ ಕಾರ್ಯಕರ್ತರನ್ನು ಶಾಸಕರು ಹಾಗೂ ಮುಖಂಡರು ಪರಿಗಣಿಸಬೇಕೇ ಹೊರತು ಕಾಂಗ್ರೆಸ್ ವಿರುದ್ಧ ಕೆಲಸ ಮಾಡಿದವರನ್ನು ಸೇರ್ಪಡೆಗೊಳಿಸಿಕೊಂಡು ರಾಜಾತಿಥ್ಯ ನೀಡುವುದು ಒಳ್ಳೆಯ ಬೆಳವಣಿಗೆಯಲ್ಲ. ಇದು ಮುಂಬರುವ ಜಿ.ಪಂ, ತಾ.ಪಂ, ಗ್ರಾ.ಪಂ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಮೇಲೆ ಪರಿಣಾಮ ಬೀರಲಿದೆ. ಅಪ್ರು ರವೀಂದ್ರ ಅವರ ಸೇರ್ಪಡೆಯಿಂದ ಕಾಂಗ್ರೆಸ್ ಯುವ ಕಾರ್ಯಕರ್ತರು ಬೇಸರಗೊಂಡಿದ್ದಾರೆ ಎಂದು ತಿಳಿಸಿರುವ ಎಂ.ಎನ್.ರವೂಫ್, ಕಾಂಗ್ರೆಸ್ ನಾಯಕರುಗಳು ತಮ್ಮ ನಿಲುವನ್ನು ಪುನರ್ ಪರಿಶೀಲಿಸಬೇಕು ಮತ್ತು ಬಿಜೆಪಿಯಿಂದ ವಲಸೆ ಬರುವವರಿಗೆ ಯಾವುದೇ ಕಾರಣಕ್ಕೂ ಮಣೆ ಹಾಕಬಾರದೆಂದು ಎಂದು ಒತ್ತಾಯಿಸಿದ್ದಾರೆ.