ಮಣಿಪುರದಲ್ಲಿ ಹಿಂಸಾಚಾರ ಸಂತ್ರಸ್ತರ ಭೇಟಿಯಾದ ಪ್ರಧಾನಿ ಮೋದಿ: ಭಾವುಕರಾದ ಸಂತ್ರಸ್ತರು

ಮಣಿಪುರದಲ್ಲಿ ಹಿಂಸಾಚಾರ ಸಂತ್ರಸ್ತರ ಭೇಟಿಯಾದ ಪ್ರಧಾನಿ ಮೋದಿ: ಭಾವುಕರಾದ ಸಂತ್ರಸ್ತರು
Photo credit:ANI

ಇಂಫಾಲ್: 2023ರಲ್ಲಿ ಪ್ರಾರಂಭವಾದ ಜನಾಂಗೀಯ ಹಿಂಸಾಚಾರದ ನಂತರ ಮೊದಲ ಬಾರಿಗೆ ಮಣಿಪುರಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ, ಶನಿವಾರ ಹಿಂಸಾಚಾರ ಸಂತ್ರಸ್ತರೊಂದಿಗೆ ಸಂವಹನ ನಡೆಸಿದರು. ಪರಿಹಾರ ಕೇಂದ್ರಗಳಲ್ಲಿ ವಾಸಿಸುತ್ತಿರುವ ಸಂತ್ರಸ್ತರು ತಮ್ಮ ನೋವು ಹಂಚಿಕೊಳ್ಳುವ ವೇಳೆ ಭಾವುಕರಾದ ದೃಶ್ಯಗಳು ಕಂಡು ಬಂದವು.

ಶನಿವಾರ ಬೆಳಿಗ್ಗೆ ಇಂಫಾಲ್‌ಗೆ ಆಗಮಿಸಿದ ಪ್ರಧಾನಿ, ಭಾರೀ ಮಳೆಯಿಂದ ಹೆಲಿಕಾಪ್ಟರ್ ಪ್ರಯಾಣ ಸಾಧ್ಯವಾಗದ ಹಿನ್ನೆಲೆಯಲ್ಲಿ ರಸ್ತೆ ಮಾರ್ಗದಿಂದ ಸುಮಾರು 61 ಕಿಮೀ ದೂರದ ಚುರಾಚಂದ್‌ಪುರಕ್ಕೆ ತೆರಳಿದರು. ಕುಕಿ-ಜೋ ಸಮುದಾಯದವರ ಪ್ರಾಬಲ್ಯವಿರುವ ಈ ಪ್ರದೇಶದಲ್ಲಿ ಹಿಂಸಾಚಾರದಿಂದ ಮನೆ ಕಳೆದುಕೊಂಡು ನಿರಾಶ್ರಿತ ಕೇಂದ್ರಗಳಲ್ಲಿ ವಾಸಿಸುತ್ತಿರುವವರನ್ನು ಭೇಟಿಯಾದ ಅವರು, ಮಕ್ಕಳಿಂದ ಹೂಗುಚ್ಛ ಮತ್ತು ವರ್ಣಚಿತ್ರ ಸ್ವೀಕರಿಸಿ ಆತ್ಮೀಯವಾಗಿ ಮಾತನಾಡಿದರು. ಒಬ್ಬ ಬಾಲಕ ನೀಡಿದ ಪಕ್ಷಿ ಗರಿಗಳ ಟೋಪಿಯನ್ನು ಪ್ರಧಾನಿ ಮೋದಿ ಧರಿಸಿದರು.

 ಈ ಸಂದರ್ಭದಲ್ಲಿ ಚುರಾಚಂದ್‌ಪುರದಲ್ಲಿ 7,300 ಕೋಟಿ ರೂ.ಗಳ ಹಾಗೂ ಇಂಫಾಲ್‌ನಲ್ಲಿ 1,200 ಕೋಟಿ ರೂ.ಗಳ ಮೌಲ್ಯದ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ, “ಮಣಿಪುರದ ಅಭಿವೃದ್ಧಿಗೆ ಶಾಂತಿ ಅವಶ್ಯಕ. ನಿರಾಶ್ರಿತರಿಗಾಗಿ 7,000 ಕ್ಕೂ ಹೆಚ್ಚು ಹೊಸ ಮನೆಗಳ ನಿರ್ಮಾಣ ಪ್ರಗತಿಯಲ್ಲಿದೆ. ರಾಜ್ಯದಲ್ಲಿ ಸಾಮಾನ್ಯ ಸ್ಥಿತಿಯನ್ನು ಪುನಃ ಸ್ಥಾಪಿಸಲು ಕೇಂದ್ರ ಬದ್ಧವಾಗಿದೆ” ಎಂದು ಭರವಸೆ ನೀಡಿದರು.

“ರೈಲು ಹಾಗೂ ರಸ್ತೆ ಮೂಲಸೌಕರ್ಯಕ್ಕೆ ಹೆಚ್ಚಿನ ಬಜೆಟ್ ಹಂಚಲಾಗಿದೆ. ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಕಾರ್ಯ ಜೋರಾಗಿದೆ. ಮಣಿಪುರದ ರಾಷ್ಟ್ರೀಯ ಹೆದ್ದಾರಿಗಳಿಗೆ 3,700 ಕೋಟಿ ರೂ. ವೆಚ್ಚ ಮಾಡಲಾಗಿದೆ. ಈಗ ಹಲವಾರು ಹಳ್ಳಿಗಳಿಗೆ ರಸ್ತೆ ಸಂಪರ್ಕ ದೊರಕಿದೆ. ಶೀಘ್ರದಲ್ಲೇ ಇಂಫಾಲ್ ರಾಷ್ಟ್ರೀಯ ರೈಲು ಜಾಲಕ್ಕೆ ಸೇರಲಿದೆ” ಎಂದು ಅವರು ತಿಳಿಸಿದರು.

2023ರಲ್ಲಿ ಮೈತೈ ಸಮುದಾಯ ಮತ್ತು ಕುಕಿ ಬುಡಕಟ್ಟು ಜನಾಂಗದ ನಡುವೆ ಭೂ ಹಕ್ಕುಗಳು ಮತ್ತು ರಾಜಕೀಯ ಪ್ರತಿನಿಧಿತ್ವದ ವಿಷಯವಾಗಿ ಉಂಟಾದ ಹಿಂಸಾಚಾರದಲ್ಲಿ 260 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಸುಮಾರು 50,000 ಮಂದಿ ಸ್ಥಳಾಂತರಗೊಂಡಿದ್ದಾರೆ. ಮೈತೆಯಿ ಸಮುದಾಯಕ್ಕೆ ಸೇರಿದವರು ಪರಿಶಿಷ್ಟ ಪಂಗಡ ಹಕ್ಕುಗಳನ್ನು ಒತ್ತಾಯಿಸುತ್ತಿದ್ದು, ಕುಕಿಗಳು ಪ್ರತ್ಯೇಕ ಆಡಳಿತದ ಬೇಡಿಕೆಯನ್ನು ಮುಂದಿರಿಸುತ್ತಿದ್ದಾರೆ.

 ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರ ಮಣಿಪುರ ಭೇಟಿ, ರಾಜ್ಯದಲ್ಲಿ ಶಾಂತಿ ಪುನರುಜ್ಜೀವನಗೊಳಿಸುವುದಕ್ಕೂ ಅಭಿವೃದ್ಧಿಗೆ ಗಟ್ಟಿಯಾದ ನೆಲೆಯನ್ನು ಕಲ್ಪಿಸುವುದಕ್ಕೂ ಮಹತ್ವದ್ದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.