ಪಹಲ್ಗಾಮ್ ದಾಳಿಯ ಸಂತ್ರಸ್ತನ ಪುತ್ರಿಯಿಂದ ಭಾರತ-ಪಾಕಿಸ್ತಾನ ಪಂದ್ಯ ಬಹಿಷ್ಕಾರಕ್ಕೆ ಕರೆ

ಪುಣೆ: ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಸಂತೋಷ್ ಜಗದಾಳೆಯ ಪುತ್ರಿ ಅಸವರಿ, ಭಾನುವಾರ ದುಬೈನಲ್ಲಿ ನಡೆಯುವ ಭಾರತ–ಪಾಕಿಸ್ತಾನ ಏಷ್ಯಾ ಕಪ್ ಕ್ರಿಕೆಟ್ ಪಂದ್ಯವನ್ನು ಬಹಿಷ್ಕರಿಸುವಂತೆ ಸಾರ್ವಜನಿಕರಿಗೆ ಕರೆ ನೀಡಿದ್ದಾರೆ.
ಏಪ್ರಿಲ್ 22ರಂದು ನಡೆದ ಪಹಲ್ಗಾಮ್ ದಾಳಿಯಲ್ಲಿ 26 ಮಂದಿ ಸಾವನ್ನಪ್ಪಿದ್ದು, ಇದರಲ್ಲಿ ಅಸವರಿಯ ತಂದೆಯೂ ಸೇರಿದ್ದರು. ಆ ನಂತರ ಭಾರತವು ಪಾಕಿಸ್ತಾನದ ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ನಡೆಸಿತ್ತು. ಮೇ ತಿಂಗಳಲ್ಲಿ ಗಡಿ ಸಂಘರ್ಷ ತೀವ್ರಗೊಂಡ ಬಳಿಕ, ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಇದು ಮೊದಲ ಪಂದ್ಯವಾಗಿದೆ.
"ಕೇವಲ ಐದು ತಿಂಗಳ ಹಿಂದಷ್ಟೇ 26 ಮಂದಿ ಭಯೋತ್ಪಾದಕರ ಗುಂಡಿಗೆ ಬಲಿಯಾದರು. ಇಷ್ಟೆಲ್ಲಾ ಆಗಿರುವಾಗಲೂ ಪಂದ್ಯವನ್ನು ಆಯೋಜಿಸುವುದು ಸಂತ್ರಸ್ತರ ಕುಟುಂಬಗಳ ನೋವನ್ನು ಅವಹೇಳನ ಮಾಡುವಂತಾಗಿದೆ" ಎಂದು ಅಸವರಿ ಪಿಟಿಐಗೆ ತಿಳಿಸಿದರು.
ಅವರು ಬೈಸರನ್ ಕಣಿವೆಯಲ್ಲಿ ಪೋಷಕರೊಂದಿಗೆ ಇದ್ದಾಗ, ಭಯೋತ್ಪಾದಕರು ಅವರ ತಂದೆ ಸಂತೋಷ್ ಹಾಗೂ ಕುಟುಂಬ ಸ್ನೇಹಿತ ಕೌಸ್ತುಭ್ ಗನ್ಬೋಟೆ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು.
"ಪಹಲ್ಗಾಮ್ ದಾಳಿ, ಸೈನಿಕರ ತ್ಯಾಗ ಹಾಗೂ ಅನೇಕ ದಾಳಿಗಳ ನೆನಪುಗಳನ್ನು ಮರೆತು ಈ ಪಂದ್ಯವನ್ನು ಆಡುವುದು ದೇಶದ ಸ್ವಾಭಿಮಾನಕ್ಕೆ ಧಕ್ಕೆ. ರಾಷ್ಟ್ರಕ್ಕಾಗಿ ಪ್ರಾಣ ತ್ಯಾಗ ಮಾಡಿದವರೊಂದಿಗೆ ಒಗ್ಗಟ್ಟಿನ್ನು ಪ್ರದರ್ಶಿಸುವುದೇ ನಿಜವಾದ ಗೌರವ" ಎಂದು ಅಸವರಿ ಸ್ಪಷ್ಟಪಡಿಸಿದರು.
ಅವರು ಜನತೆಗೆ ಪಂದ್ಯವನ್ನು ವೀಕ್ಷಿಸದಂತೆ ಮನವಿ ಮಾಡುತ್ತಾ, "ಇಂತಹ ಪಂದ್ಯಗಳನ್ನು ನೋಡುವುದರಿಂದ ನಾವು ಪರೋಕ್ಷವಾಗಿ ಭಯೋತ್ಪಾದನೆಗೆ ಆರ್ಥಿಕವಾಗಿ ಸಹಾಯ ಒದಗಿಸುತ್ತೇವೆ" ಎಂದು ಎಚ್ಚರಿಸಿದರು.
ಶಿವಸೇನೆ (ಯುಬಿಟಿ) ಕೂಡ ಇದೇ ರೀತಿಯ ಬೇಡಿಕೆಯನ್ನು ಮುಂದಿರಿಸಿರುವ ನಡುವೆ, ಅಸವರಿಯ ಹೇಳಿಕೆ ಪ್ರಸ್ತುತ ಕ್ರೀಡಾ-ರಾಜಕೀಯ ಚರ್ಚೆಗೆ ಹೊಸ ತೀವ್ರತೆ ನೀಡಿದೆ.
ಸರ್ಕಾರದ ನೀತಿಯ ಪ್ರಕಾರ ಭಾರತವು ಪಾಕಿಸ್ತಾನದ ವಿರುದ್ಧ ದ್ವಿಪಕ್ಷೀಯ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವುದಿಲ್ಲ. ಆದರೆ ಏಷ್ಯಾ ಕಪ್ ಹಾಗೂ ಐಸಿಸಿ ಟೂರ್ನಿಗಳಂತಹ ಪಂದ್ಯಾವಳಿಗಳಲ್ಲಿ ಮಾತ್ರ ಪಾಕಿಸ್ತಾನದ ಜೊತೆ ಪಂದ್ಯ ಆಡಬಹುದು ಎಂದು ಹೇಳಿದೆ.