ಪೊನ್ನಂಪೇಟೆ: ಕಾಡಾನೆಗಳ ಹಾವಳಿ ತಡೆಗಟ್ಟುವಂತೆ ಆಗ್ರಹ: ಅರಣ್ಯ ಇಲಾಖೆ ಕಚೇರಿ ಎದುರು ಪ್ರತಿಭಟನೆ

ವರದಿ:-ಚೆಪ್ಪುಡಿರ ರೋಷನ್ ಪೊನ್ನಂಪೇಟೆ
ಪೊನ್ನಂಪೇಟೆ: ತಾಲೂಕಿನ ಬಿ.ಶೆಟ್ಟಿಗೇರಿ, ಬೇಗೂರು, ಈಚೂರು, ಕುಂದ ಹಾಗೂ ಹಳ್ಳಿಗಟ್ಟು ಗ್ರಾಮ ವ್ಯಾಪ್ತಿಗೆ ಒಳಪಡುವ ಕೃಷಿಕರು ಮತ್ತು ಬೆಳೆಗಾರರು ಕಾಡಾನೆ ಹಾವಳಿಯನ್ನು ತಡೆಗಟ್ಟಬೇಕೆಂದು ಆಗ್ರಹಿಸಿ ರಾಜಕೀಯ ರಹಿತವಾಗಿ ಪೊನ್ನಂಪೇಟೆ ವಲಯ ಅರಣ್ಯ ಅಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು. ಬರಪೊಳೆ ಪ್ರದೇಶದಿಂದ ಬರುವ ಕಾಡಾನೆಗಳಿಂದ ಸಂಘರ್ಷ ಮಿತಿ ಮೀರಿದೆ. ಇದರ ಜೊತೆಯಲ್ಲೇ ಹುಲಿ ಹಾವಳಿಯಿಂದ ಜಾನುವಾರುಗಳು ಬಲಿಯಾಗುತ್ತಿವೆ. ಇದರ ಪರಿಹಾರಕ್ಕೆ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಸಂದರ್ಭ ಮಾಚಿಮಾಡ ರವೀಂದ್ರ ಅವರು ಮಾತನಾಡಿ, ಅರಣ್ಯದಿಂದ ಬರುವ ಆನೆಗಳ ಹಾವಳಿಯನ್ನು ನಿಯಂತ್ರಿಸುವ ಕೆಲಸ ಮಾಡಬೇಕು. ಬ್ಯಾರಿಕೇಡ್ ನಿರ್ಮಿಸಲು ಸರಕಾರದಿಂದ ಗುದ್ದಲಿ ಪೂಜೆ ನೆರವೇರಿಸಿ 6 ತಿಂಗಳು ಕಳೆದಿದ್ದು, ತಕ್ಷಣವೇ ಬ್ಯಾರಿಕೇಡ್ ನಿರ್ಮಿಸುವುದರ ಮೂಲಕ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಕಾಡಾನೆಗಳು ನಾಡಿಗೆ ಬರುವುದನ್ನು ತಪ್ಪಿಸುವಲ್ಲಿ ಸರಕಾರ ವಿಫಲವಾಗಿದೆ. ಅರಣ್ಯ ಇಲಾಖಾಧಿಕಾರಿಗಳು ವನ್ಯಜೀವಿಗಳು ನಾಡಿಗೆ ಬರದಂತೆ ತಡೆಯಲು ಕೈಗೊಂಡಿರುವ ಕ್ರಮಗಳು ಬಗ್ಗೆ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು. ಪೊನ್ನಂಪೇಟೆ, ಬಿ.ಶೆಟ್ಟಿಗೇರಿ, ಬೇಗೂರು, ಚೀನಿವಾಡ ಹಾಗೂ ಕುಂದಾ ಭಾಗದಲ್ಲಿ ಮುಂದಿನ ದಿನಗಳಲ್ಲಿ ವನ್ಯಜೀವಿಗಳ ಹಾವಳಿ ಇರಬಾರದು. ವನ್ಯ ಪ್ರಾಣಿ ಹಾವಳಿ ಮುಂದುವರೆದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು. ಕಾಡಾನೆಗಳನ್ನು ಮುಂದಿನ 3 ದಿನಗಳಲ್ಲಿ ಕಾಡಿಗಟ್ಟಲು ಕ್ರಮ ಕೈಗೊಳ್ಳಬೇಕು. ರೈತರ ಜಾನುವಾರುಗಳ ಮೇಲೆ ಮುಂದಿನ ದಿನಗಳಿಂದ ಹುಲಿ ದಾಳಿ ಮಾಡಿ ಕೊಂದು ಹಾಕಿದರೆ ಅರಣ್ಯ ಇಲಾಖೆಯಿಂದ ಪರಿಹಾರ ಹಣದ ಬದಲು ಜಾನುವಾರುಗಳನ್ನೇ ನೀಡುವ ವ್ಯವಸ್ಥೆ ಆಗಬೇಕು ಎಂದು ಒತ್ತಾಯಿಸಿದರು. ಇದೇ ಸಂದರ್ಭ ಎಸಿಎಫ್ ಗೋಪಾಲ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಮನವಿ ಸ್ವೀಕರಿಸಿ ಎಸಿಎಫ್ ಗೋಪಾಲ್ ಅವರು ಮಾತನಾಡಿ, ಬೇಗೂರು, ಚೀನಿವಾಡ ಗ್ರಾಮ ಪ್ರದೇಶಗಳು ಮಡಿಕೇರಿ ವೈಲ್ಡ್ ಲೈಫ್ ಗೆ ಒಳಪಡುತ್ತವೆ. ಈ ಪ್ರದೇಶಗಳಿಗೆ ಕಾಡಾನೆಗಳು ಬಂದಿರುವ ಮಾಹಿತಿ ದೊರೆತ ತಕ್ಷಣ ಕಾಡಿಗಟ್ಟಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು. ಇನ್ನು ಬ್ಯಾರಿಕೇಡ್ ಅಳವಡಿಸುವ ಕಾಮಗಾರಿ ವೈಲ್ಡ್ ಲೈಫ್ ವಿಭಾಗದಿಂದ ನಡೆಯಬೇಕಿದ್ದು, ಮನವಿ ಪತ್ರವನ್ನು ವೈಲ್ಡ್ ಲೈಫ್ ಅಧಿಕಾರಿಗಳಿಗೆ ತಲುಪಿಸಿ ಸೂಕ್ತ ಕ್ರಮಕ್ಕೆ ಶಿಫಾರಸು ಮಾಡುವುದಾಗಿ ಹೇಳಿದರು. ಸರಕಾರದಿಂದ ಬಿಡುಗಡೆಯಾಗಿರುವ 21 ಕೋಟಿ ರೂಪಾಯಗಳ ಅನುದಾನದಲ್ಲಿ ಮಾಲ್ದಾರೆ ವ್ಯಾಪ್ತಿಯ ಕಾವೇರಿ ನದಿ ಭಾಗದಿಂದ ಘಟ್ಟದಳ್ಳದವರೆಗೆ 8 ಕಿಲೋ ಮೀಟರ್ ರೈಲ್ವೆ ಬ್ಯಾರಿಕೇಡ್, ಹಾಗೂ ನಾಗರಹೊಳೆ ಹುಲಿ ಸಂರಕ್ಷತಾ ಪ್ರದೇಶವಾದ ತಿತಿಮತಿ ಭಾಗಕ್ಕೆ 7 ಕಿಲೋ ಮೀಟರ್ ರೈಲ್ವೆ ಬ್ಯಾರಿಕೇಡ್ ಅಳವಡಿಸಲು ಟೆಂಡರ್ ಕಾರ್ಯ ಪ್ರಗತಿಯಲ್ಲಿದೆ. ಬಿ.ಶೆಟ್ಟಿಗೇರಿ ಭಾಗದಲ್ಲಿ ವನ್ಯಪ್ರಾಣಿ ಹಾವಳಿ ತಡೆಗಟ್ಟಲು ಸೋಲಾರ್ ತಂತಿ ಅಳವಡಿಸುವ ಚಿಂತನೆ ಇದೆ ಎಂದು ಮಾಹಿತಿ ನೀಡಿದರು.
ಪ್ರತಿಭಟನೆಯಲ್ಲಿ ಚೆಪ್ಪುಡಿರ ರಾಕೇಶ್ ದೇವಯ್ಯ, ಚೋಡುಮಾಡ ಶಾಮ್, ವಿಕ್ರಂ, ಸುಬ್ರಮಣಿ, ಮತ್ರಂಡ ಪ್ರವೀಣ್, ಕಾರ್ಯಪ್ಪ, ಸ್ಕಂದ, ರಶೀಕ, ಮಿತ್ರ, ವಿಠಲ್, ಅಯ್ಯಪ್ಪ, ನಾಮೇರ ವಾಸು, ಅಚ್ಚಯ್ಯ, ಮೊಣ್ಣಪ್ಪ, ತೀತಿಮಾಡ ಪವಿ, ರವಿ, ಕೇಚಟ್ಟಿರ ಅರುಣಾ, ಸಪ್ತ, ಅಕ್ಷಯ, ಕಾರ್ಯಪ್ಪ, ತಮ್ಮಯ್ಯ ಹಾಗೂ ಚೀನಿವಾಡ, ಬಿ.ಶೆಟ್ಟಿಗೇರಿ, ಕುಂದ ಹಳ್ಳಿಗಟ್ಟು, ಈಚೂರು, ಬೇಗೂರು ಗ್ರಾಮದ ಗ್ರಾಮಸ್ಥರು ಭಾಗಿಯಾಗಿದ್ದರು.