ಪೊನ್ನಂಪೇಟೆ: ಚೇನಿವಾಡದಲ್ಲಿ ಕಾಫಿ ಹಾಗೂ ಬಾಳೆ ತೋಟಕ್ಕೆ ಕಾಡಾನೆಗಳ ಲಗ್ಗೆ:ಅಪಾರ ಪ್ರಮಾಣದ ಕೃಷಿ ಫಸಲು ನಾಶ

ಪೊನ್ನಂಪೇಟೆ:ತಾಲೂಕಿನ ಹುದಿಕೇರಿ ಹೋಬಳಿಯ ಬೇಗೂರು ಗ್ರಾಮದ ಚೇನಿವಾಡ ಎಂಬಲ್ಲಿ ಕಳೆದ ಎರಡು ವಾರಗಳಿಂದ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಕಾಫಿ ತೋಟ ಮತ್ತು ಬಾಳೆ ತೋಟಗಳಿಗೆ ಲಗ್ಗೆ ಇಟ್ಟ ಕಾಡಾನೆಗಳ ಹಿಂಡು ಅಪಾರ ಪ್ರಮಾಣದ ಕೃಷಿ ಫಸಲುಗಳನ್ನು ನಾಶಪಡಿಸಿವೆ. ಸುಮಾರು 11 ರಿಂದ 12ರಷ್ಟಿರುವ ಕಾಡಾನೆಗಳ ಹಿಂಡು ಚೇನಿವಾಡ ಗ್ರಾಮದ ಮತ್ರಂಡ ಸುಕು ಬೋಪಣ್ಣ ಎಂಬುವರಿಗೆ ಸೇರಿದ ಫಸಲು ಭರಿತ ಬಾಳೆ ತೋಟಕ್ಕೆ ಲಗ್ಗೆಯಿಟ್ಟ ಕಾಡಾನೆಗಳ ಹಿಂಡು ಬಾಳೆಫಸಲನ್ನು ಧ್ವಂಸಗೊಳಿಸಿವೆ. ಇದರಿಂದ ಸುಮಾರು ನಾಲ್ಕರಿಂದ ಐದು ಲಕ್ಷ ರೂಪಾಯಿಗಳ ನಷ್ಟ ಸಂಭವಿಸಿದೆ. ಅಲ್ಲದೆ ಮತ್ರಂಡ ಕಾರ್ಯಪ್ಪ ಮತ್ತು ಸ್ಕಂದ ತಿಮ್ಮಯ್ಯ, ಎಂ. ಮೊಣ್ಣಪ್ಪ, ಸುಬ್ಬಯ್ಯ, ದಿಲ್ಲು, ರಾಧ ಎಂಬುವರಿಗೆ ಸೇರಿದ ಕಾಫಿ, ಅಡಿಕೆ, ತೆಂಗು, ತೋಟವನ್ನು ಸಂಪೂರ್ಣ ನಾಶಪಡಿಸಿದೆ. ಕಾಡಾನೆಗಳ ಹಾವಳಿ ಕುರಿತು ಗ್ರಾಮಸ್ಥರಾದ ಮತ್ರಂಡ ಕಾರ್ಯಪ್ಪ ಮತ್ತು ಸ್ಕಂದ ತಿಮ್ಮಯ್ಯ ಅಳಲು ತೋಡಿಕೊಂಡರು.
ಮತ್ರಂಡ ಸುಕು ಬೋಪಣ್ಣ, ಎಂಬುವರಿಗೆ ಸೇರಿದ ತೆಂಗಿನ ಮರಗಳು, ಕಾಡಾನೆಗಳ ದಾಂಗುಡಿಗೆ ನಾಶವಾಗಿವೆ. ಕಳೆದ ಹದಿನೈದು ದಿನಗಳಿಂದ ಬೇಗೂರು, ಚೀನಿವಾಡ ಗ್ರಾಮದಲ್ಲೆ ಬೀಡು ಬಿಟ್ಟಿರುವ ಕಾಡಾನೆಗಳ ಹಿಂಡು ಗ್ರಾಮದ ಕೃಷಿ ಪ್ರದೇಶಗಳಲ್ಲಿ ದಾಂಧಲೆ ನಡೆಸುತ್ತಿವೆ. ಕಾಡಾನೆಗಳಿಂದ ಒಂದು ಕಡೆ ಕೃಷಿಫಸಲು ನಾಶವಾಗುತ್ತಿದ್ದರೇ, ಮತ್ತೊಂದೆಡೆ ಸಂಜೆ ವೇಳೆ ಗ್ರಾಮಸ್ಥರು ಮನೆಗಳಿಂದ ಹೊರಕ್ಕೆ ಬರಲು ಸಹ ಭಯಪಡುವಂತಾಗಿದೆ. ಕಾಡಾನೆಗಳ ದಾಳಿಯಿಂದಾಗಿ ಕೃಷಿಫಸಲು ನಷ್ಟಕ್ಕೆ ಅರಣ್ಯ ಇಲಾಖೆ ಸೂಕ್ತ ಪರಿಹಾರ ನೀಡಬೇಕು. ಕಾಡಾನೆಗಳನ್ನು ನಾಡಿನಿಂದ ಅವುಗಳ ಸ್ವಸ್ಥಾನ ಸೇರಿಸುವ ಕೆಲಸ ಶೀಘ್ರದಲ್ಲೇ ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಅಲ್ಲದೆ ಭಾನುವಾರದಂದು ರಾತ್ರಿ ಮತ್ರಂಡ ಸುಕು ಬೋಪಣ್ಣ ಅವರು ತಮ್ಮ ಲೈನ್ ಮನೆಯ ಹತ್ತಿರ ನಿಲ್ಲಿಸಿದ್ದ ಮಾರುತಿ 800 ಕಾರನ್ನು ಸುಮಾರು 50 ಅಡಿ ದೂರದಷ್ಟು ತಳ್ಳಿ ಕಾರನ್ನು ಕಾಡಾಣೆಗಳ ಹಿಂಡು ಜಖಂಗೊಳಿಸಿವೆ. ಕಾಡಾನೆಗಳ ಹಾವಳಿಯಿಂದಾದ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವಂತೆ ಮತ್ರಂಡ ಸುಕು ಬೋಪಣ್ಣ ಒತ್ತಾಯಿಸಿದ್ದಾರೆ.
ಸ್ಥಳಕ್ಕೆ ಪೊನ್ನಂಪೇಟೆ ಡಿಆರ್‌ಎಫ್‌ಓ ದಿವಾಕರ್ ಮತ್ತು ಆರ್‌ಆರ್‌ಟಿ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಮಾತನಾಡಿದ ಪೊನ್ನಂಪೇಟೆ ವಲಯ ಅರಣ್ಯಾಧಿಕಾರಿ ಬಿ.ಎಂ ಶಂಕರ್ ಅವರು, ಕಾಡಾನೆಗಳನ್ನು ಕೂಡಲೇ ಕಾಡಿಗಟ್ಟಲು ಕ್ರಮ ಕೈಗೊಳ್ಳಲಾಗುವುದು, ಅಲ್ಲದೆ ಮಳೆ ಕಡಿಮೆಯಾದ ಬಳಿಕ ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸಿ, ಕಾಡಿನಿಂದ ನಾಡಿಗೆ ಬರುವುದನ್ನು ಪತ್ತೆಹಚ್ಚಿ ಮುಂದಿನ ಕ್ರಮ ಕ್ರಮಕೈಗೊಳ್ಳಲಾಗುವುದೆಂದರು.
ವರದಿ: ಚೆಪ್ಪುಡಿರ ರೋಷನ್, ಪೊನ್ನಂಪೇಟೆ
What's Your Reaction?






