ಆಲೂರು ಸಿದ್ದಾಪುರದಲ್ಲಿ ಶರಣ ಸಾಹಿತ್ಯ ಸಂಸ್ಥಾಪನಾ ದಿನಾಚರಣೆ

ಆಲೂರು ಸಿದ್ದಾಪುರದಲ್ಲಿ ಶರಣ ಸಾಹಿತ್ಯ ಸಂಸ್ಥಾಪನಾ ದಿನಾಚರಣೆ

ಶನಿವಾರಸಂತೆ : ಮನುಷ್ಯನ ಆರೋಗ್ಯ, ನೆಮ್ಮದಿ ಹಾಗೂ ಶಾಂತಿ ಸಹಬಾಳ್ವೆಯ ಬದುಕಿಗೆ ಶರಣರ ವಚನಗಳ ಅರಿವು ದಿವ್ಯ ಔಷಧಿ ಇದ್ದಂತೆ ಎಂದು ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಪೀಠಾಧಿಪತಿ ಶ್ರೀ ಸದಾಶಿವ ಸ್ವಾಮೀಜಿ ಹೇಳಿದರು. ಆಲೂರು ಸಿದ್ದಾಪುರ ಮೊರಾರ್ಜಿ ದೇಸಾಯಿ ಆಂಗ್ಲ ಮಾಧ್ಯಮ ವಸತಿ ಶಾಲೆಯಲ್ಲಿ ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡಿದ್ದ ಸುತ್ತೂರು ಮಹಾಸಂಸ್ಥಾನದ 23 ನೇ ಜಗದ್ಗುರು ಡಾ.ಶಿವರಾತ್ರೀಶ್ವರ ರಾಜೇಂದ್ರ ಸ್ವಾಮೀಜಿಯವರ 110 ನೇ ಸಂಸ್ಮರಣೆ ಹಾಗೂ ಶರಣ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಮನುಷ್ಯನ ನೆಮ್ಮದಿಯುತ ಬದುಕಿಗೆ ಹನ್ನೆರಡನೇ ಶತಮಾನದ ಬಸವಾದಿ ಶರಣರು ರಚಿಸಿದ ವಚನ ಸಾಹಿತ್ಯದ ಅಧ್ಯಯನ ಹಾಗೂ ಅರಿವು ಆಭರಣಗಳೇ ಹೊರತು ಹಣ ಅಥವಾ ಒಡವೆಗಳಲ್ಲ. ಹನ್ನೆರಡನೇ ಶತಮಾನದ ಸಮಾಜದಲ್ಲಿ ಮೇಲು - ಕೀಳು, ಬಡವ - ಬಲ್ಲಿದ ಎಂಬ ಗೊಡವೆಗಳ ವಿರುದ್ದ ಸಮರ ಸಾರಿದ ಶರಣರು ಇವನಾರವ ಎನ್ನದೇ ಇವ ನಮ್ಮವ ಎಂದು ಎಲ್ಲರನ್ನೂ ಅಪ್ಪಿದರು. ಲೋಕದ ಡೊಂಕನ್ನು ನೀವೇಕೆ ತಿದ್ದುವಿರಿ ನಿಮ್ಮ ನಿಮ್ಮ ಮನ ಹಾಗೂ ತನುವ ಸಂತೈಸಿಕೊಳ್ಳಿ ಎಂದು ವ್ಯಕ್ತಿತ್ವಕ್ಕೆ ಹೊಳಪು ನೀಡಿದರು. ಕಲಬೇಡ ಕೊಲಬೇಡ, ಹುಸಿಯ ನುಡಿಯಲು ಬೇಡ ಎಂಬ ಸಪ್ತಸೂತ್ರಗಳನ್ನು ಮನುಷ್ಯ ತನ್ನ ನಿಜ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಎಂತಹ ಸುಂದರ ಬದುಕು ಕಟ್ಟಬಹುದು ಎಂಬುದನ್ನು ವಚನದ ಸಾರಿ ಸಾರಿ ಹೇಳಿದ ಬಗೆಗಳನ್ನು ಶ್ರೀಗಳು ವಿಶ್ಲೇಷಿಸಿದರು. ಸ್ವಾತಂತ್ರ್ಯ ಪೂರ್ವದಲ್ಲಿ ರಾಜ್ಯದಲ್ಲಿ ತಲೆದೋರಿದ್ದ ಬಡತನ, ಹಸಿವು, ನಿರುದ್ಯೋಗ ಗಳಿಗೆ ಸಿಲುಕಿ ಎಲ್ಲಾ ಜನಸಮುದಾಯದ ಮಕ್ಕಳು ಪರಿತಪಿಸುವುದನ್ನು ಕಂಡ ಸುತ್ತೂರಿನ 23 ನೇ ಜಗದ್ಗುರು ಡಾ.ಶಿವರಾತ್ರೀಶ್ವರ ರಾಜೇಂದ್ರ ಸ್ವಾಮೀಜಿ ತಾವು ಧರಿಸಿದ್ದ ಚಿನ್ನದ ಕರಡಿಗೆ ಹಾಗೂ ಉಂಗುರುಗಳನ್ನು ಮಾರಿ ತ್ರಿವಿಧ ದಾಸೋಹವನ್ನು ನಡೆಸುವ ಮೂಲಕ ಬಡ ಮಕ್ಕಳಿಗೆ ವಿದ್ಯೆ, ಅನ್ನ ಹಾಗೂ ಆಶ್ರಯ ಕರುಣಿಸಿದ್ದರು.

ಮನುಷ್ಯನ ನೆಮ್ಮದಿಯ ಜೀವನಕ್ಕೆ ವಚನಗಳನ್ನು ಓದಿ ಅರ್ಥೈಸಿಕೊಂಡು ನಡೆದದ್ದೇ ಆದಲ್ಲಿ ಸ್ವಸ್ಥ ಸಮಾಜ ನಿರ್ಮಾಣವಾಗುವ ಕನಸು ಕಂಡು ಶರಣ ಸಾಹಿತ್ಯ ಪರಿಷತ್ತು ಆರಂಭಿಸಿದ ಬಗ್ಗೆ ಸದಾಶಿವ ಸ್ವಾಮೀಜಿ ವಿವರಿಸಿದರು. ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ಸರ್ಕಾರದ ಮಾಹಿತಿ ಆಯೋಗದ ಮಾಜಿ ಆಯುಕ್ತ ಜೆ.ಎಸ್.ವಿರೂಪಾಕ್ಷಯ್ಯ ಮಾತನಾಡಿ, ಸುತ್ತೂರಿನ ಡಾ.ರಾಜೇಂದ್ರ ಸ್ವಾಮೀಜಿ ಅವರಿಗೆ ಸಮಾಜವೇ ಕುಟುಂಬವಾಗಿತ್ತು. ಹಾಗಾಗಿ ಜಾತಿ ಧರ್ಮಗಳನ್ನು ಲೆಕ್ಕಿಸದೇ ಎಲ್ಲರಿಗೂ ಸಮಾನ ಶಿಕ್ಷಣ, ವಸತಿ ಹಾಗೂ ಆರೋಗ್ಯ ನೀಡಿದರು. ವಿದ್ಯಾರ್ಥಿಗಳು ಸರ್ಕಾರದ ಸವಲತ್ತುಗಳನ್ನು ಪಡೆದು ವಿದ್ಯಾವಂತರಾಗಬೇಕು. ಸ್ವಯಂ ಉದ್ಯೋಗಿಗಳಾಗುವ ಮೂಲಕ ಸ್ವಸ್ಥ ಸಮಾಜದ ರುವಾರಿಗಳಾಗಬೇಕು ಎಂದು ಕರೆಕೊಟ್ಟರು.

ಕೊಡಗು ಜಿಲ್ಲಾ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷೆ ರುಬೀನಾ ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ಮಾತನಾಡಿ, ಶರಣರ ವಿಚಾರಧಾರೆಗಳನ್ನು ವಿದ್ಯಾರ್ಥಿಗಳ ಮೂಲಕ ಸಮಾಜದಲ್ಲಿ ಬಿತ್ತುವ ಕೆಲಸವಾಗಬೇಕಿದೆ. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಮನುಷ್ಯನ ನೆಮ್ಮದಿಯ ಬದುಕಿಗೆ ವಚನಗಳು ದೀವಿಗೆಗಳಾಗಿವೆ. ಇಂತಹ ಶರಣ ಸಾಹಿತ್ಯವನ್ನು ನಾಡಿನೆಲ್ಲೆಡೆ ಪಸರಿಸಲು ಶರಣ ಸಾಹಿತ್ಯ ಪರಿಷತ್ತು ಕಾರ್ಯೋನ್ಮುಖವಾಗಿದೆ. ಸುತ್ತೂರು ಮಠ ಇಂದು ದೇಶವ್ಯಾಪಿ ಹಾಗೂ ವಿದೇಶಗಳಲ್ಲಿ ಶೈಕ್ಷಣಿಕವಾಗಿ ಬಹು ದೊಡ್ಡ ಸಾಮ್ರಾಜ್ಯ ಕಟ್ಟುವಲ್ಲಿ ಅಡಿಗಲ್ಲಾದ 23 ನೇ ಜಗದ್ಗುರು ಗಳಾದ ಡಾ.ಶಿವರಾತ್ರೀಶ್ವರ ರಾಜೇಂದ್ರ ಸ್ವಾಮೀಜಿಯವರ ಪರಿಶ್ರಮ ಹಾಗೂ ಅವರ ಜೀವನ ಸಾಧನೆಗಳನ್ನು ರುಬೀನಾ ಸ್ಮರಿಸಿದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ ಪ್ರಾಸ್ತಾವಿಕ ವಾಗಿ ಮಾತನಾಡಿ, ನಾಡಿನ ಜನಸಮುದಾಯಕ್ಕೆ ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಅರೆ ಸರ್ಕಾರದ ಮಾದರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸುತ್ತೂರು ಸಂಸ್ಥಾನದ ಅಧೀನದಲ್ಲಿ ರಾಜ್ಯ, ದೇಶ ಹಾಗೂ ವಿದೇಶಗಳಲ್ಲಿ ನೂರಾರು ಶಿಕ್ಷಣ ಸಂಸ್ಥೆಗಳು, 5 ಸಾವಿರಕ್ಕೂ ಹೆಚ್ಚು ನೌಕರರು, ಲಕ್ಷೋಪಲಕ್ಷ ವಿದ್ಯಾರ್ಥಿಗಳಿದ್ದಾರೆ. ಹಾಗೆಯೇ ಆರೋಗ್ಯ ಕ್ಷೇತ್ರದಲ್ಲೂ ಮಂಚೂಣಿಯಲ್ಲಿದೆ. ಡಾ.ರಾಜೇಂದ್ರ ಸ್ಚಾಮೀಜಿ ಕಟ್ಟಿದ ಈ ಎಲ್ಲಾ ಸಂಸ್ಥೆಗಳನ್ನು ಈಗಿನ ಜಗದ್ಗುರು ಜನರ ಮನೆ ಬಾಗಿಲಿಗೆ ಕೊಂಡೊಯ್ದಿದ್ದಾರೆ ಎಂದರು. ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಕೆ.ಪ್ರಕಾಶ್ ಮಾತನಾಡಿದರು. ಕಂದಾಯ ಇಲಾಖೆಯ ನಿವೃತ್ತ ಅಧಿಕಾರಿ ಎಂ.ಬಿ.ಬಸವರಾಜು, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ನಟರಾಜು, ಕೋಶಾಧಿಕಾರಿ ಕೆ.ಪಿ.ಪರಮೇಶ್, ಶಾಲೆಯ ಪೋಷಕ ಸಮಿತಿ ಪದಾಧಿಕಾರಿಗಳಾದ ಶಶಿಧರ್, ಬೀನಾ, ಜಗದೀಶ್, ಧರ್ಮ ಇದ್ದರು. ಶಿಕ್ಷಕಿ ಟಿ.ಎಲ್.ಲೋಲಾಕ್ಷಿ ವಚನ ಗೀತೆ ಹಾಡಿದರು. ಶಿಕ್ಷಕ ಅಶೋಕ್ ಇಟಗಿ ನಿರೂಪಿಸಿದರು. ವೇಣುಗೋಪಾಲ್ ವಂದಿಸಿದರು. ಇದಕ್ಕೂ ಮುನ್ನಾ ವಿದ್ಯಾರ್ಥಿಗಳಿಂದ ವಚನ ಗಾಯನ ನಡೆಯಿತು.