ತೊರೆನೂರು ವಿರಕ್ತ ಮಠದಲ್ಲಿ ಶಿವಾನುಭವ ಗೋಷ್ಠಿ:ಸನ್ಮಾನ ;

ತೊರೆನೂರು ವಿರಕ್ತ ಮಠದಲ್ಲಿ  ಶಿವಾನುಭವ ಗೋಷ್ಠಿ:ಸನ್ಮಾನ ;

ಕುಶಾಲನಗರ,ನ.6: 12 ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿ ಮಾಡಿದ ಬಸವಣ್ಣ ಮತ್ತು ಬಸವಾದಿ ಶರಣರದು ನಡೆ- ನುಡಿ ಸಿದ್ಧಾಂತ. ನುಡಿದಂತೆ ನಡೆದು ತೋರಿದ ಸಾತ್ವಿಕ ಧೀಮಂತರು, ಕಾಯಕ ಯೋಗಿಗಳು. ಅವರದು ದಯಾಮೂಲವಾದ ಧರ್ಮವಾಗಿತ್ತು ಎಂದು ಕೊಡ್ಲಿಪೇಟೆ ಕಲ್ಮಠದ ಮಹಾಂತ ಸ್ವಾಮೀಜಿ ಹೇಳಿದರು.

ಅಖಿಲ ಭಾರತ ವೀರಶೈವ- ಲಿಂಗಾಯತ ಮಹಾಸಭಾದ ಕೊಡಗು ಜಿಲ್ಲಾ ಘಟಕ ಹಾಗೂ ತೊರೆನೂರು ವಿರಕ್ತ ಮಠದ ವತಿಯಿಂದ ತೊರೆನೂರು ವಿರಕ್ತ ಮಠದಲ್ಲಿ ಬುಧವಾರ ಸಂಜೆ ನಡೆದ ಮಾಸಿಕ ಹುಣ್ಣಿಮೆ‌ ಪೂಜಾ ಮಹೋತ್ಸವ ಹಾಗೂ ಶಿವಾನುಭವ ಗೋಷ್ಠಿಯಲ್ಲಿ 12 ನೇ ಶತಮಾನದ ಶರಣರ ಸಾಮಾಜಿಕ ಮೌಲ್ಯಗಳು ಕುರಿತು ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿದ ಮಾತನಾಡಿದರು.

ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರ ಕಲಿಸುವ ಮೂಲಕ ಅವರನ್ನು ಸಮಾಜದ ಉತ್ತಮ ನಾಗರಿಕರನ್ನಾಗಿ ರೂಪಿಸುವ ಜವಾಬ್ದಾರಿ ಇದೆ. ಇದರಲ್ಲಿ ತಾಯಂದಿರ ಪಾತ್ರ ಪ್ರಮುಖವಾಗಿದೆ ಎಂದರು. ‌‌‌‌‌‌ಅಂದು ಶರಣರು ಪೂಜೆಗಿಂತಲೂ ಹೆಚ್ಚಿನ ಮಹತ್ವವನ್ನು ದುಡಿಮೆಗೆ ಕೊಟ್ಟಿದ್ದರು. ಕಾಯಕ ಅವರ ಪಂಚಪ್ರಾಣವಾಗಿತ್ತು. ಕಾಯಕ ಮಾಡದವನಿಗೆ ಪ್ರಸಾದ ತೆಗೆದುಕೊಳ್ಳುವ ಹಕ್ಕಿಲ್ಲವೆಂಬುದು ಅವರ ಸಿದ್ಧಾಂತವಾಗಿತ್ತು. ಆದ್ದರಿಂದ 12ನೇ ಶತಮಾನದಲ್ಲಿ ಕಾಯಕಯೋಗಿಗಳು ಇದ್ದರೆ ಹೊರತು ಸೋಮಾರಿಗಳೇ ಇರಲಿಲ್ಲ’ ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು.

ಸಮಾಜಕ್ಕೆ ಶರಣರ ಮೌಲ್ಯಗಳು ಕುರಿತು ಉಪನ್ಯಾಸ ನೀಡಿದ ಕುಶಾಲನಗರ ಮೂಕಾಂಬಿಕಾ ಪ್ರೌಢಶಾಲಾ ಕನ್ನಡ ಭಾಷಾ ಶಿಕ್ಷಕ ಕೆ.ಎಂ.ಕಾಂತರಾಜು ಮಾತನಾಡಿ, ಬಸವಾದಿ ಶರಣರ ಸಮಾನತೆಯ ತತ್ವ ಹಾಗೂ ಮಾನವೀಯ ಮೌಲ್ಯಗಳು ಇಂದಿನ ಸಮಾಜಕ್ಕೆ ಅತ್ಯಗತ್ಯವಾಗಿವೆ ಎಂದರು. ಶರಣರ ವಚನಗಳು ಆದರ್ಶ, ತತ್ವ ಹಾಗೂ ಮೌಲ್ಯಗಳನ್ನು ಒಳಗೊಂಡಿವೆ. ಶರಣರ ಆದರ್ಶ ಹಾಗೂ ತತ್ವಗಳನ್ನು ನಾವು ಅಳವಡಿಸಿಕೊಂಡರೆ ಉತ್ತಮ ಸಮಾಜ ನಿರ್ಮಿಸಲು ಸಾಧ್ಯವಾಗುತ್ತದೆ ಎಂದರು. ಯಾರು ಅಹಂಕಾರವನ್ನು ತೊರೆದು ತನು ,ಮನ, ಧನವನ್ನು ಸಮಾಜಕ್ಕೆ ಸಮರ್ಪಿಸುವನೋ ಅವರೇ ನಿಜವಾದ ಶರಣರು. ಬಸವಾದಿ ಶರಣರ ಬದುಕು ಸಮಾಜದ ಮೇಲೆ ಅಪಾರವಾದ ಪರಿಣಾಮವನ್ನು ಬೀರಿವೆ.

ಅಂತಹ ಅಂಶಗಳೆಂದರೆ ಕಾಯಕ ತತ್ವ, ದಾಸೋಹ ,ಜಾತಿ ವ್ಯವಸ್ಥೆ, ಸಮಾನತೆ ಇತ್ಯಾದಿ. ತಮ್ಮ ವೃತ್ತಿಯಲ್ಲಿ ದೈಹಿಕ ಶ್ರಮದ ಜತೆಗೆ ನಿಷ್ಠೆ ,ಭಕ್ತಿ ಮತ್ತು ಸಮರ್ಪಣಾ ಭಾವದಿಂದ ಮಾಡುವ ಒಂದು ಆಧ್ಯಾತ್ಮಿಕ ಕ್ರಿಯೆಯೇ ಕಾಯಕ ಎಂದು ಕಾಂತರಾಜು ಹೇಳಿದರು ಸಾನಿಧ್ಯ ವಹಿಸಿದ್ದ ತೊರೆನೂರು ವಿರಕ್ತ ಮಠದ ಮಲ್ಲೇಶ ಸ್ವಾಮೀಜಿ ಮಾತನಾಡಿ, ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಬಸವಾದಿ ಶರಣರ ಕೊಡುಗೆಗಳು ಅಪಾರವಾಗಿವೆ .ಅವುಗಳನ್ನು ನಾವು ಪರಿಪಾಲಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಬೇಕು ಎಂದರು.

ವೀರಶೈವ- ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಎಚ್.ವಿ.ಶಿವಪ್ಪ ಮಾತನಾಡಿ , ಬಸವಾದಿ ಶರಣ ಶರಣೆಯರ ಪ್ರತಿಯೊಂದು ವಚನಗಳಲ್ಲಿ ಜೀವನ ಮೌಲ್ಯಗಳ ತುಡಿತ ಅಡಗಿದೆ. ಶರಣರ ವಚನಗಳ ಮಹತ್ವ ಹಾಗೂ ಶರಣರ ಮೌಲ್ಯಗಳ ಬಗ್ಗೆ ಸಮಾಜಕ್ಕೆ ಅರಿವು ಮೂಡಿಸಲು ಇಂತಹ ಶಿವಾನುಭವ ಗೋಷ್ಠಿಗಳ ಮೂಲಕ ವಿಚಾರಗೋಷ್ಠಿಗಳನ್ನು ಸಂಘಟಿಸಲಾಗುತ್ತಿದೆ ಎಂದರು. ಸನ್ಮಾನ: ಇದೇ ವೇಳೆ ವಿವಿಧ ಕ್ಷೇತ್ರದ ವ್ಯಕ್ತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

 ಕುಶಾಲನಗರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿಗೆ ನಿರ್ದೇಶಕರಾಗಿ ನೂತನವಾಗಿ ಆಯ್ಕೆಗೊಂಡಿರುವ ತೊರೆನೂರು ಗ್ರಾಮದ ಎಚ್.ಬಿ.ಚಂದ್ರಪ್ಪ, ಗುಡ್ಡೆಹೊಸೂರು ಗ್ರಾಮದ ಬಿ.ಸಿ.ಮಲ್ಲಿಕಾರ್ಜುನ, ಜಿಲ್ಲೆಯಲ್ಲಿ ತಮ್ಮನ್ನು ಪರಿಸರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಪರಿಸರ ಪ್ರಶಸ್ತಿ ಪುರಸ್ಕೃತರಾದ ಪರಿಸರ ಪ್ರೇಮಿ, ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್ ಹಾಗೂ ಅರಣ್ಯ ಶಾಸ್ತ್ರ ಪದವಿಯಲ್ಲಿ ರ್‍ಯಾಂಕ್ ಗಳಿಸಿದ್ದು, ಇದೀಗ ಐಡಿಬಿಐ ಬ್ಯಾಂಕ್ ನ ಕಿರಿಯ ಸಹಾಯಕ ವ್ಯವಸ್ಥಾಪಕಿಯಾಗಿರುವ ಹೆಬ್ಬಾಲೆ ಮರೂರಿನ ಕುಮಾರಿ ಸುಪ್ರೀತ ಮಹದೇವ್ ಅವರನ್ನು ಮಹಾಸಭಾದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಜಿಲ್ಲಾ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಟಿ.ಎಸ್.ಶಾಂಭಶಿವಮೂರ್ತಿ, ಕೋಶಾಧಿಕಾರಿ ಎಚ್.ಪಿ.ಉದಯ್ ಕುಮಾರ್, ನಿರ್ದೇಶಕ ಎಂ.ಎಸ್.ಗಣೇಶ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಕೋಶಾಧಿಕಾರಿ ನಟರಾಜ್, ಸ್ಥಳೀಯರಾದ ಟಿ.ಎಸ್.ಚಂದ್ರಶೇಖರ್, ಟಿ.ಎನ್.ಶಿವಾನಂದ, ಟಿ.ಜಿ.ರಮೇಶ್, ಟಿ.ಸಿ.ಸುರೇಶ್, ಮಣಜೂರು ಗುರುಲಿಂಗಪ್ಪ ಇತರರು ಇದ್ದರು.