ಶಿವಪ್ಪ ಅಭಿಮಾನಿ ಬಳಗದ ವತಿಯಿಂದ ದಿವಂಗತ ಬಿ.ಬಿ.ಶಿವಪ್ಪನವರಿಗೆ ನುಡಿನಮನ ಕಾರ್ಯಕ್ರಮ

ಸೋಮವಾರಪೇಟೆ: ಕರ್ನಾಟಕ ರಾಜಕಾರಣದ ಭೀಷ್ಮ,ಹಿರಿಯ ಮುತ್ಸದಿ ದಿವಂಗತ ಬಿ.ಬಿ.ಶಿವಪ್ಪನವರಿಗೆ ನುಡಿನಮನ ಸಲ್ಲಿಸಲಾಯಿತು. ಶಿವಪ್ಪ ಅಭಿಮಾನಿ ಬಳಗದವತಿಯಿಂದ ಕೊಡಗು,ಹಾಸನ ಗಡಿ ಯಸಳೂರು ಗ್ರಾಮದ ವೀರಶೈವ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ನುಡಿನಮನ ಕಾರ್ಯಕ್ರಮದಲ್ಲಿ ರಾಜ್ಯ ಮಾಜಿ ಕ್ರೀಡಾಸಚಿವ ಅಪ್ಪಚ್ಚು ರಂಜನ್ ಮಾತನಾಡಿ ಶಿವಪ್ಪನವರು ಈ ನಾಡು ಕಂಡ ಶ್ರೇಷ್ಠ ರಾಜಕಾರಣಿ,ನಮ್ಮ ರಾಜಕೀಯ ಜೀವನದ ಮಾರ್ಗದರ್ಶಕರಾಗಿದ್ದರು ಎಂದರು.ರಾಜಕೀಯ ಜೀವನದಲ್ಲಿ ಅನೇಕ ಏರಿಳಿತಗಳನ್ನು ಕಂಡವರು ಆದರೆ ಎದೆಗುಂದದೆ ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಿದವರು ಅವರನ್ನು ಸ್ಮರಿಸಿಕೊಳ್ಳಬೇಕಾಗಿದ್ದು ನಮ್ಮೆಲ್ಲರ ಕರ್ತವ್ಯವೆಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿಧಾನ ಸಭಾ ಮಾಜಿ ಅಧ್ಯಕ್ಷ ಕೆ.ಜೆ.ಬೋಪಯ್ಯ ಮಾತನಾಡಿ ಶಿವಪ್ಪನವರು ಇಂದಿನ ರಾಜಕಾರಣಿಗಳಿಗೆ ಸ್ತುತ್ಯಾರ್ಹರಾಗಿದ್ದಾರೆ.ಅವರ ಸರಳ ನಡೆ,ನುಡಿಗಳಿಂದಲೇ ಜನಸಾಮಾನ್ಯರಿಗೆ ಹತ್ತಿರವಾಗಿದ್ದರು.ಶ್ರಮಜೀವಿಯಾಗಿದ್ದ ಅವರು ರಾಜ್ಯದಲ್ಲಿ ಬಿಜೆಪಿಗೆ ಅಸ್ತಿತ್ವ ಕಲ್ಪಿಸಿದವರು.ಇಂದು ರಾಜ್ಯದಲ್ಲಿ ಪಕ್ಷ ಬಲಿಷ್ಠವಾಗಿದ್ದರೆ ಅದಕ್ಕೆ ಶಿವಪ್ಪನವರು ಹಾಗೂ ಸುಶೀಲಮ್ಮನವರ ಕೊಡುಗೆ ಬಹಳಷ್ಟಿದೆ ಎಂದರು.
ಸಕಲೇಶಪುರ ವಿಧಾನಸಭಾ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು ಮಾತನಾಡಿ ಹಿರಿಯ ಮುತ್ಸದಿ ದಿವಂಗತ ಶಿವಪ್ಪನವರು ನಿತ್ಯ ಸ್ಮರಣೀಯರು,ಅವರಿಗೆ,ಅವರೇ ಸಾಟಿಯಾಗಿದ್ದಾರೆ.ಅವರಿಗೆ ಬೇರೆಯವರನ್ನು ಹೋಲಿಸಲು ಸಾಧ್ಯವೇ ಇಲ್ಲವೆಂದವರು ಶಿವಪ್ಪನವರ ತತ್ವ,ಆದರ್ಶಗಳನ್ನು ನಾವು ಮೈಗೂಡಿಸಿಕೊಂಡರೆ ಏನಾದರೂ ಸಾಧಿಸಬಹುದೆಂದರು.
ನುಡಿನಮನ ಕಾರ್ಯಕ್ರಮದ ವೇದಿಕೆಯಲ್ಲಿ ಮಾಜಿ ಶಾಸಕರುಗಳಾದ ಹುರುಡಿ ವಿಶ್ವನಾಥ್,ಕುಮಾರಸ್ವಾಮಿ,ಹಾಸನ ಜಿಲ್ಲಾ ಹಿರಿಯ ಬಿಜೆಪಿ ಮುಖಂಡ ರಾಮಚಂದ್ರಗೌಡ,ಸೋಮವಾರಪೇಟೆಯ ತಿಮ್ಮಶೆಟ್ಟಿ,ಶಿವಪ್ಪನವರ ಪುತ್ರ ಪ್ರತಾಪ್ ಸೇರಿದಂತೆ ಅವರ ಕುಟುಂಬದ ಪ್ರಮುಖರು ಉಪಸ್ತಿತರಿದ್ದರು. ಆರಂಭದಲ್ಲಿ ಶಿವಪ್ಪನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಂತರ ಶ್ರದ್ಧಾಂಜಲಿ ಸಲ್ಲಿಸಲಾಯಿತು.