ಸುಂದರನಗರ: ಅಪಾಯದ ಹಂತದಲ್ಲಿರುವ ಮರ ತೆರವಿಗೆ ಆಗ್ರಹ

ಸುಂದರನಗರ: ಅಪಾಯದ ಹಂತದಲ್ಲಿರುವ ಮರ ತೆರವಿಗೆ ಆಗ್ರಹ

ಕುಶಾಲನಗರ: ಕೂಡುಮಂಗಳೂರು ಗ್ರಾಮ‌ ಪಂಚಾಯಿತಿ ವ್ಯಾಪ್ತಿಯ ಸುಂದರನಗರ ಮುಖ್ಯ ರಸ್ತೆಯಲ್ಲಿ ಅಪಾಯದ ಹಂತದಲ್ಲಿರುವ ಮರವನ್ನು ತೆರವುಗೊಳಿಸುವಂತೆ ಸುಂದರನಗರ ವಾರ್ಡ್ ಸದಸ್ಯರಾದ ಕೆ.ಬಿ.ಶಂಶುದ್ಧೀನ್ ಅವರು ಆಗ್ರಹಿಸಿದ್ದಾರೆ.

ಸುಂದರನಗರದ ಮುಖ್ಯ ರಸ್ತೆಯಲ್ಲಿರುವ ಶಾರದ ಎಂಬವರ ಮನೆಯ ಬಳಿ ಮರವೊಂದು ಅಪಾಯದ ಹಂತದಲ್ಲಿದ್ದು, ಅಕ್ಕಪಕ್ಕ ಮನೆಗಳು ಇರುವುದರಿಂದ ಅಪಾಯ ಸಂಭವಿಸುವ ಸಾಧ್ಯತೆಗಳು ಹೆಚ್ಚಿವೆ. ಪಕ್ಕದಲ್ಲಿಯೇ ವಿದ್ಯುತ್ ಕಂಬವಿದ್ದು, ಕಂಬದ ಮೇಲೆಯೂ ಮರದ ಕೊಂಬೆಗಳ ಆವರಿಸಿವೆ. ಈ ಹಿಂದೆ‌ ಮರದ ಕೊಂಬೆ ವಿದ್ಯುತ್ ತಂತಿಯ ಮೇಲೆ ಬಿದ್ದು ತಂತಿ ತುಂಡಾಗಿ ಬಿದ್ದಿತ್ತು. ಯಾರಿಗೂ ಯಾವುದೇ ಅನಾಹುತ ಸಂಭವಿಸಲಿಲ್ಲ. ಹಾಗೆಯೇ ಮೊನ್ನೆ ದಿನ ಕೊಂಬೆ ಹೊಸ ಸ್ಕೂಟರ್ ನ‌ ಮೇಲೆ ಬಿದ್ದು ಸ್ಕೂಟರ್ ಗೆ ಹಾನಿಯಾಗಿದೆ.

 ಜನರು ಓಡಾಡುತ್ತಿರುವ ವೇಳೆ ಜನರ ಮೇಲೆ ಕೊಂಬೆ ಬಿದ್ದಲ್ಲಿ ಪ್ರಾಣಾಪಾಯ ಸಂಭವಿಸಬಹುದಾಗಿದ್ದು, ಈ ಹಿನ್ನಲೆ ಸಂಬಂಧಪಟ್ಟ ಅರಣ್ಯ ಇಲಾಖೆ ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದ ಅವರು, ಅನಾಹುತ ಸಂಭವಿಸಿದರೆ ಅರಣ್ಯ ಇಲಾಖೆಯ‌ ಅಧಿಕಾರಿಗಳೇ ನೇರ ಹೊಣೆ ಎಂದರು. ಸುಂದರನಗರ ನಿವಾಸಿ ಶಾರದಾ ಮಾತನಾಡಿ, ಮರದಿಂದ ಆತಂಕದಲ್ಲಿ ಬದುಕು ಕಳೆಯಬೇಕಾಗಿದೆ. ವಾಹನದ ಮೇಲೆ ಕೊಂಬೆ ಬಿದ್ದಿದೆ. ನಮ್ಮ ಮೇಲೆ ಕೊಂಬೆಗಳು ಬಿದ್ದರೆ ನಾವು ಉಳಿಯುವುದಿಲ್ಲ. ಆದ್ದರಿಂದ ಕೂಡಲೇ ಮರವನ್ನು ತೆರವುಗೊಳಿಸಿಕೊಡಬೇಕು ಎಂದರು. ಈ ಸಂದರ್ಭ ಸ್ಥಳೀಯರಾದ ವಸಂತಿ, ನಂದಿನಿ, ತುಳಸಿ, ಪ್ರೀತಿ ಹಾಗೂ ಕುಮಾರ್ ಇದ್ದರು.