ಸುತ್ತೂರು ಜಾತ್ರಾ ಪ್ರಚಾರ ರಥಕ್ಕೆ ಕುಶಾಲನಗರದಲ್ಲಿ ಸ್ವಾಗತ

ಸುತ್ತೂರು ಜಾತ್ರಾ ಪ್ರಚಾರ ರಥಕ್ಕೆ ಕುಶಾಲನಗರದಲ್ಲಿ ಸ್ವಾಗತ

ಕುಶಾಲನಗರ : ಜನವರಿ 15 ರಿಂದ 20 ರವರೆಗೆ ಸುತ್ತೂರಿನಲ್ಲಿ ಜರುಗುವ ಸುತ್ತೂರು ಜಾತ್ರಾ ಕಾರ್ಯಕ್ರಮಕ್ಕೆ ಭಕ್ತ ಜನರನ್ನು ಆಹ್ವಾನಿಸಲು ರಾಜ್ಯದಾದ್ಯಂತ ಸಂಚಾರ ಮಾಡುತ್ತಿರುವ ಪ್ರಚಾರ ರಥ ಶನಿವಾರ ಕುಶಾಲನಗರಕ್ಕೆ ಆಗಮಿಸಿತು. ಈ ಸಂದರ್ಭ ಕುಶಾಲನಗರ ತಾಲ್ಲೂಕು ತಹಸೀಲ್ದಾರ್ ಕಿರಣ್ ಗೌರಯ್ಯ ಆಗಮಿಸಿ ಪ್ರಚಾರ ರಥದಲ್ಲಿನ ಸುತ್ತೂರು ಮಠದ ಸ್ಥಾಪನಾಚಾರ್ಯ ಶ್ರೀ ಶಿವರಾತ್ರೀಶ್ವರರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

 ಕುಶಾಲನಗರ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ರಾದ ವಿ.ಪಿ.ಶಶಿಧರ್ ಈ ಸಂದರ್ಭ ಮಾತನಾಡಿ, ಸುತ್ತೂರು ಜಾತ್ರೆಯಲ್ಲಿ ನಾಡಿನ ಪರಂಪರೆಗಳನ್ನು ಬಿಂಬಿಸುವ ದೇಸೀಯಾ ಕ್ರೀಡೆಗಳ ಪ್ರದರ್ಶನಗಳೊಂದಿಗೆ ಸಾಮೂಹಿಕ ವಿವಾಹ, ಕೃಷಿ ಮೇಳ, ವಸ್ತು ಪ್ರದರ್ಶನ, ರೈತರಿಗೆ ಕೃಷಿ ಮಾಹಿತಿ ಸೇರಿದಂತೆ ಎಲ್ಲವು ಒಂದೇ ಕಡೆ ನಡೆಯುತ್ತದೆ. ಆಗಮಿಸುವ ಸಹಸ್ರ ಭಕ್ತ ಜನರಿಗೆ ಮೂರು ಹೊತ್ತು ಪ್ರಸಾದದ ವ್ಯವಸ್ಥೆಯೂ ಇರುತ್ತದೆ ಎಂದರು.

ಕೊಡಗು ಜಿಲ್ಲಾ ವೀರಶೈವ ಮಹಾಸಭಾ ಅಧ್ಯಕ್ಷ ಹೆಚ್.ವಿ.ಶಿವಪ್ಪ ಮಾತನಾಡಿ, ಪ್ರತೀ ವರ್ಷದಂತೆ ಈ ಬಾರಿಯೂ ಸುತ್ತೂರು ಜಾತ್ರೆಗೆ ಕೊಡಗಿನ ಭಕ್ತ ಜನ ಆಗಮಿಸಬೇಕೆಂದು ಕೋರಿದರು.

ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ, ಕಾರ್ಯದರ್ಶಿ ನಟರಾಜು, ಕೋಶಾಧಿಕಾರಿ ಕೆ.ಪಿ ಪರಮೇಶ್, ಕುಶಾಲನಗರದ ಹಿರಿಯ ನಾಗರೀಕರಾದ ಎಂ.ಹೆಚ್.ನಜೀರ್ ಆಹಮದ್, ಕಾವೇರಿ ನದಿ ಸ್ವಚ್ಛತಾ ಆಂದೋಲನದ ರಾಜ್ಯ ಸಂಚಾಲಕ ಎಂ.ಎನ್‌.ಚಂದ್ರಮೋಹನ್, ಹಾಸನ ಜಿಲ್ಲೆ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಎನ್.ಕುಮಾರಸ್ವಾಮಿ, ಪ್ರಮುಖರಾದ ಪಿ.ಮಹದೇವಪ್ಪ, ಎಂ.ಎಸ್.ಶಿವಾನಂದ, ಎಂ.ಎಸ್.ಲೋಕೇಶ್, ಕೋಳೂರು ಚಂದ್ರಪ್ಪ, ಬಸವರಾಜು, ಶಿವಲಿಂಗ, ಅಕ್ಕನ ಬಳಗದ ಮನುದೇವಿ, ಸರೋಜ ಆರಾಧ್ಯ, ಪುಷ್ಪ, ಶೈಲಾ, ಪ್ರಚಾರ ರಥ ಯಾತ್ರೆಯ ಸಂಚಾಲಕ ಪಂಚಾಕ್ಷರಿ, ರಾಜಶೇಖರ, ಶಿವಪ್ರಕಾಶ್, ಆದರ್ಶ ಇದ್ದರು.