T20 | ಭಾರತದ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಜಯ
ಚಂಡೀಗಢ, ಡಿ.11: ಅಬ್ಬರದ ಬ್ಯಾಟಿಂಗ್ ಹಾಗೂ ಶಿಸ್ತುಬದ್ಧ ಬೌಲಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡವು ದ್ವಿತೀಯ ಟಿ–20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತವನ್ನು 51 ರನ್‌ಗಳ ಅಂತರದಿಂದ ಮಣಿಸಿ ಐದು ಪಂದ್ಯಗಳ ಸರಣಿಯನ್ನು 1–1ರಿಂದ ಸಮಬಲಗೊಳಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಆತಿಥೇಯರು 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 213 ರನ್ ರಚಿಸಿದರು. ಆರಂಭಿಕ ಆಟಗಾರ ಕ್ವಿಂಟನ್ ಡಿಕಾಕ್ ಕೇವಲ 46 ಎಸೆತಗಳಲ್ಲಿ 90 ರನ್ ಸಿಡಿಸಿ ದಾಳಿ ಮುನ್ನಡೆಸಿದರು. ಅವರ ಇನಿಂಗ್ಸ್‌ನಲ್ಲಿ 5 ಬೌಂಡರಿ ಹಾಗೂ 7 ಸಿಕ್ಸರ್‌ಗಳ ಮಳೆ ಸುರಿಯಿತು. ಡೊನೊವನ್ ಫೆರೇರಾ (ಔಟಾಗದೆ 30; 16 ಎಸೆತ) ಮತ್ತು ಡೇವಿಡ್ ಮಿಲ್ಲರ್ (ಔಟಾಗದೆ 20; 12 ಎಸೆತ) ಕೊನೆಯ ಹಂತದಲ್ಲಿ ಚುರುಕುಗೊಂಡು 23 ಎಸೆತಗಳಲ್ಲಿ ಐದನೇ ವಿಕೆಟ್‌ಗೆ ಅಜೇಯ 53 ರನ್ ಸೇರಿಸಿ ತಂಡದ ಮೊತ್ತವನ್ನು 213ಕ್ಕೆ ತಲುಪಿಸಿದರು .
ಡಿಕಾಕ್–ಮರ್ಕ್ರಮ್ (29) ಜೋಡಿ ಎರಡನೇ ವಿಕೆಟ್‌ಗೆ 83 ರನ್ ಸೇರಿಸಿ ಭಾರತದ ಬೌಲಿಂಗ್ ಮೇಲೆ ಒತ್ತಡ ಹುಟ್ಟಿಸಿತು. ಭಾರತದ ಪರ ವರುಣ್ ಚಕ್ರವರ್ತಿ (2–29) ಮಾತ್ರ ಪರಿಣಾಮಕಾರಿ ಬೌಲಿಂಗ್ ಮಾಡಿದರು. ವೇಗಿಗಳಾದ ಅರ್ಷದೀಪ್ ಸಿಂಗ್ ಹಾಗೂ ಜಸ್ಪ್ರೀತ್ ಬುಮ್ರಾ ಮಂಜಿನ ಹನಿ ಕಾಟಕ್ಕೆ ತತ್ತರಿಸಿ 4 ಓವರ್ ಗಳಲ್ಲಿ ಕ್ರಮವಾಗಿ 54 ಮತ್ತು 45 ರನ್ ನೀಡಿ ದುಬಾರಿಯಾದರು.
214 ರನ್ ಗುರಿ ಬೆನ್ನಟ್ಟಿದ ಭಾರತಕ್ಕೆ ಆರಂಭದಲ್ಲೇ ಹೊಡೆತ ಬಿತ್ತು. ಶುಭಮನ್ ಗಿಲ್ ಖಾತೆ ತೆರೆದೆ ಔಟ, ನಾಯಕ ಸೂರ್ಯಕುಮಾರ್ ಯಾದವ್ (5) ಮತ್ತೆ ನಿರಾಶೆ ತಂದರು. ತಿಲಕ್ ವರ್ಮಾ (34 ಎಸೆತಗಳಲ್ಲಿ 62; 2 ಬೌಂಡರಿ, 5 ಸಿಕ್ಸರ್) ಒಬ್ಬರೇ ಹೋರಾಡಿದರೂ, ಉಳಿದ ಬ್ಯಾಟ್ಸ್‌ಮನ್‌ಗಳಿಂದ ಸಮರ್ಪಕ ಬೆಂಬಲ ಸಿಗಲಿಲ್ಲ. ಜಿತೇಶ್ ಶರ್ಮಾ (27), ಅಕ್ಷರ್ ಪಟೇಲ್ (21) ಹಾಗೂ ಹಾರ್ದಿಕ್ ಪಾಂಡ್ಯ (20) ಕೊಡುಗೆ ನೀಡಿದರು.
ಒಟ್ನೀಲ್ ಬಾರ್ಟ್‌ಮನ್ (4–24) ದಕ್ಷಿಣ ಆಫ್ರಿಕಾ ಬೌಲಿಂಗ್ ದಾಳಿಯಲ್ಲಿ ಕಮಾಲ್ ತೋರಿದರೆ, ಮಾರ್ಕೊ ಜಾನ್ಸನ್, ಲುಥೋ ಸಿಪಾಮ್ಲಾ ಹಾಗೂ ಲುಂಗಿ ಎನ್‌ಗಿಡಿ ತಲಾ ಎರಡು ವಿಕೆಟ್ ಪಡೆದರು. ಭಾರತ 19.1 ಓವರ್ ಗಳಲ್ಲಿ 162 ರನ್‌ಗೆ ಆಲೌಟಾಗಿ ಸೋಲನ್ನು ಕಂಡಿತು.
ದಕ್ಷಿಣ ಆಫ್ರಿಕಾ ತನ್ನ ತಂಡದಲ್ಲಿ ಮೂರು ಬದಲಾವಣೆಗಳನ್ನು ಮಾಡಿಕೊಂಡಿದ್ದು, ರೀಝಾ ಹೆಂಡ್ರಿಕ್ಸ್, ಜಾರ್ಜ್ ಲಿಂಡೆ ಮತ್ತು ಬಾರ್ಟ್ನ್ ರನ್ನು ಅವಕಾಶ ನೀಡಿತು. ಭಾರತ ತನ್ನ ಮೊದಲ ಪಂದ್ಯ ತಂಡವನ್ನೇ ಮುಂದುವರಿಸಿದೆ.
