ಗರಗಂದೂರು ಮಲ್ಲಿಕಾರ್ಜುನ ಕಾಲೋನಿಗೆ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಭೇಟಿ

ಸೋಮವಾರಪೇಟೆ:ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ರವರ ನಿರ್ದೇಶನದ ಮೇರೆಗೆ ಶನಿವಾರ ಸೋಮವಾರಪೇಟೆ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಗ್ರಾಮ ಪಂಚಾಯತಿ ಪಿ.ಡಿ.ಒ ಅವರು ಹರದೂರು ಗ್ರಾಮ ಪಂಚಾಯಿತಿಯ ಗರಗಂದೂರಿನ ಮಲ್ಲಿಕಾರ್ಜುನ ಕಾಲೋನಿಯ ಭೈರಿ ಅವರ ಮನೆಗೆ ಭೇಟಿ ಮಾಡಿ ಸ್ಥಳ ಪರಿಶೀಲನೆ ನಡೆಸಿದರು.ಭೈರಿ ಅವರ ಹಿರಿಯ ಮಗನಿಗೆ 2006-2007ನೇ ಸಾಲಿನಲ್ಲಿ ರಾಜೀವ್ ಗಾಂಧಿ ವಸತಿ ನಿಗಮದಿಂದ ರತ್ನ ಗಂಡ ಅಣ್ಣು ರವರ ಹೆಸರಿನಲ್ಲಿ ಮನೆ ಮಂಜೂರಾತಿ ಆಗಿದ್ದು ಸದರಿ ಮನೆಯು ಸುಸ್ಥಿತಿಯಲ್ಲಿ ಇದೆ. ಇವರ ಮನೆಯ ಕೌಟುಂಬಿಕ ಕಲಹದಿಂದ ಭೈರಿ ಅವರು ಪಕ್ಕದಲ್ಲೇ ಟಾರ್ಪಲ್ ಶೆಡ್ ಹಾಕಿಕೊಂಡಿದ್ದಾರೆ ಎಂದು ಕಾರ್ಯನಿರ್ವಾಹಕ ಅಧಿಕಾರಿಗಳು ಸ್ಥಳೀಯರಿಗೆ ಮಾಹಿತಿ ನೀಡಿದರು.
ಹರದೂರು ಗ್ರಾಮ ಪಂಚಾಯಿತಿಯಿಂದ ತಾತ್ಕಾಲಿಕವಾಗಿ ಟಾರ್ಪಲ್ ವ್ಯವಸ್ಥೆ ಮಾಡಿಕೊಡಲಾಗಿದ್ದು, ಹಾಗೂಬ ಶೌಚಾಲಯ ನಿರ್ಮಿಸಿ ಕೊಡಲು ದಾಖಲೆಗಳನ್ನು ಗ್ರಾಮ ಪಂಚಾಯಿತಿಗೆ ಸಲ್ಲಿಸುವಂತೆ ಭೈರಿ ಕುಟುಂಬಕ್ಕೆ ಸೋಮವಾರಪೇಟೆ ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿ ಮಾಹಿತಿ ತಿಳಿಸಿದರು.