ನಾಪೋಕ್ಲುವಿನಲ್ಲಿ ಯಶಸ್ವಿಯಾಗಿ ನಡೆದ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಅಥ್ಲೆಟಿಕ್ಸ್ ಕ್ರೀಡಾಕೂಟ

ವರದಿ:ಝಕರಿಯ ನಾಪೋಕ್ಲು ನಾಪೋಕ್ಲು : ಪದವಿ ಪೂರ್ವ ಶಿಕ್ಷಣ ಇಲಾಖೆ ಕೊಡಗು ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು ನಾಪೋಕ್ಲು ಇವರ ಸಂಯುಕ್ತ ಆಶ್ರಯದಲ್ಲಿ 2025- 26 ನೇ ಸಾಲಿನ ಮಡಿಕೇರಿ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಅಥ್ಲೆಟಿಕ್ಸ್ ಕ್ರೀಡಾಕೂಟ ನಾಪೋಕ್ಲು ಬಳಿಯ ಚೆರಿಯಪರಂಬುವಿನಲ್ಲಿ ಯಶಸ್ವಿಯಾಗಿ ನಡೆಯಿತು. ಚೆರಿಯಪರಂಬುವಿನಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲಾ ಆಟದ ಮೈದಾನದಲ್ಲಿ ಆಯೋಜಿಸಲಾದ ಕ್ರೀಡಾಕೂಟದ ಧ್ವಜಾರೋಹಣವನ್ನು ನಾಪೋಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ವನಜಾಕ್ಷಿ ರೇಣುಕೇಶ್ ನೆರವೇರಿಸಿದರು.
ಕರ್ನಾಟಕ ಪಬ್ಲಿಕ್ ಶಾಲೆಯ ಎಸ್ ಡಿಎಂಸಿ ಉಪಾಧ್ಯಕ್ಷರಾದ ಎನ್. ಎಸ್.ಉದಯಶಂಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಜ್ಯೋತಿ ಬೆಳಗಿಸುವ ಮೂಲಕ ಕ್ರೀಡಾಕೂಟವನ್ನು ಉದ್ಘಾಟಿಸಿದರು. ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳ ಪಥಸಂಚಲನದ ಮೂಲಕ ಅತಿಥಿಗಳು ಗೌರವ ವಂದನೆ ಸ್ವೀಕರಿಸಿದರು. ಉಪನ್ಯಾಸಕ ಗಗನ್ ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಸಿದರು. ಕರ್ನಾಟಕ ಪಬ್ಲಿಕ್ ಶಾಲೆಯ ಉಪಾಧ್ಯಕ್ಷರಾದ ಎನ್.ಎಸ್. ಉದಯಶಂಕರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಎಂ. ಎಲ್.ಚಿದಾನಂದ ಕುಮಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕ್ರೀಡೆ ಒಂದು ಗುರುವಿನ ಹಾಗೇ ಸೋಲು ಗೆಲುವೆಂಬ ಸಮಬಾಳುವ ಪಾಠವನ್ನು ಕಲಿಸುತ್ತದೆ.ಜೀವನದಲ್ಲಿ ಹೋರಾಡುವ ಶಕ್ತಿ ಕ್ರೀಡಾಂಗಣದಲ್ಲಿ ಸಿಗಲಿದೆ ಎಂದು ಕ್ರೀಡಾಕೂಟಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ನಾಪೋಕ್ಲು ಕರ್ನಾಟಕ ಪಬ್ಲಿಕ್ ಶಾಲೆಯ ಸಿವಿಲ್ ಕಾಮಗಾರಿ ಸಮಿತಿ ಅಧ್ಯಕ್ಷರಾದ ಕೆ.ಎ. ಹಾರಿಸ್ ಮಾತನಾಡಿ ಕ್ರೀಡೆ ಮತ್ತು ವಿದ್ಯಾಭ್ಯಾಸ ಒಂದು ನಾಣ್ಯದ ಎರಡು ಮುಖವಿದ್ದಹಾಗೇ, ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಕ್ರೀಡೆ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುವುದಲ್ಲದೆ ಮಾನಸಿಕ ಮತ್ತು ಶಾರೀರಿಕ ಆರೋಗ್ಯವನ್ನು ಸಮತೋಲನದಲ್ಲಿಡಲು ಸಹಕಾರಿಯಾಗಿದೆ ಎಂದರು. ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ ಭಾಗವಹಿಸುವುದು ಮುಖ್ಯ ಎಂದ ಅವರು ಕ್ರೀಡೆಯಿಂದ ಉನ್ನತ ಸ್ಥಾನಕ್ಕೇರಿ ಭವಿಷ್ಯವನ್ನು ರೂಪಿಸಿಕೊಂಡಿರುವ ಹಲವಾರು ಕ್ರೀಡಾಪಟುಗಳು ದೇಶದಲ್ಲಿ ಇದ್ದಾರೆ. ಅವರಂತೆ ತಾವುಗಳು ಕೂಡ ಕಠಿಣ ಪರಿಶ್ರಮ ಪಟ್ಟರೆ ಯಶಸ್ವಿಯಾಗಲು ಸಾಧ್ಯವಾಗಲಿದೆ. ಕ್ರೀಡೆಯಲ್ಲಿ ಗೆಲುವು ಸಾಧಿಸಿದವರು ಸಂಭ್ರಮಿಸಿದರೆ ಸೋತವರು ದೃತಿಗಡದೆ ಸೋಲೇ ಗೆಲುವಿನ ಮೆಟ್ಟಿಲೆಂದು ಕ್ರೀಡೆಯಲ್ಲಿ ಶಿಸ್ತನ್ನು ಅಳವಡಿಸಿಕೊಂಡು ತೀರ್ಪುಗಾರರ ತೀರ್ಪಿಗೆ ಬದ್ಧರಾಗಿ ಯಾವುದೇ ಗೊಂದಲಕ್ಕೆ ಆಸ್ಪದ ನೀಡದೆ ಕ್ರೀಡಾಕೂಟದ ಯಶಸ್ವಿಗೆ ಸಹಕರಿಸಬೇಕೆಂದು ಕ್ರೀಡಾಕೂಟಕ್ಕೆ ಶುಭಕೋರಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್, ಶಾಲೆಯ ಪ್ರಭಾರ ಪ್ರಾಂಶುಪಾಲರಾದ ಎ. ಎಂ. ವಿಶಾಲ ಅವರು ಮಾತನಾಡಿ ಕ್ರೀಡಾಕೂಟಕ್ಕೆ ಶುಭ ಹಾರೈಸಿದರು. ಕ್ರೀಡಾಕೂಟದಲ್ಲಿ ಮಡಿಕೇರಿ ತಾಲೂಕುವಿನ ವಿವಿಧ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಬಳಿಕ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಗಣ್ಯರು ಪ್ರಶಸ್ತಿ ಪತ್ರ ಹಾಗೂ ಬಹುಮಾನ ವಿತರಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಭಾರ ಉಪಪ್ರಾಂಶುಪಾಲರಾದ ಎಂ.ಎಸ್ ಶಿವಣ್ಣ,ಶಾಲೆಯ ಮಕ್ಕಳ ಸುರಕ್ಷಾ ಸಮಿತಿಯ ಅಧ್ಯಕ್ಷರಾದ ಕೇಟೋಳಿರ ರಾಜ ಗಣಪತಿ, ಕೊಡಗು ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಪಿ.ಎಂ.ದೇವಕಿ, ಸಂಘದ ಕಾರ್ಯದರ್ಶಿ ಎನ್. ಕೆ. ಜ್ಯೋತಿ, ಸಂಘದ ಖಜಾಂಜಿ ಅಂಥೋಣಿ ವಿಲಿಯನ್ ಅಲ್ವಾರೀಸ್, ಶಾಲೆಯ ಎಸ್ ಡಿಎಂಸಿ ಸದಸ್ಯ ಆಬಿದ್ ಸೇರಿದಂತೆ ಶಾಲೆಯ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿಗಳು, ಕ್ರೀಡೆಯಲ್ಲಿ ಭಾಗವಹಿಸಿದ ವಿವಿಧ ಪದವಿಪೂರ್ವ ಕಾಲೇಜುಗಳ ದೈಹಿಕ ಶಿಕ್ಷಕರು ,ಪೋಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ಕಾರ್ಯಕ್ರಮದಲ್ಲಿ ಶಾಲೆಯ ಪ್ರಭಾರ ಪ್ರಾಂಶುಪಾಲರಾದ ಎ. ಎಂ. ವಿಶಾಲ ಸ್ವಾಗತಿಸಿದರು ಉಪನ್ಯಾಸಕಿ ಕೃತಿಕ ನಿರೂಪಿಸಿ.ಉಪನ್ಯಾಸಕಿ ವಿಜಿತ ವಂದಿಸಿದರು.