ಹುಲಿ ಸೆರೆ ಕಾರ್ಯಾಚರಣೆ:ವಾಪಸ್ಸಾದ ಅಭಿಮನ್ಯು,ಮಹೇಂದ್ರ

ಬೆಳ್ಳೂರು :ದಕ್ಷಿಣ ಕೊಡಗಿನಲ್ಲಿ ಜಾನುವಾರುಗಳ ಮೇಲೆ ದಾಳಿ ನಡೆಸಿದ ಹುಲಿ ಸೆರೆಗೆ ಕಳೆದ ಹತ್ತು ದಿನಗಳಿಂದ ಕಾರ್ಯಾಚರಣೆ ನಡೆಸಲಾಗುತ್ತಿದ್ದು ನಿರೀಕ್ಷಿತ ಫಲ ದೊರಕಿಲ್ಲ. ಈ ಹಿನ್ನೆಲೆಯಲ್ಲಿ ಬಳ್ಳೆ ಸಾಕಾನೆ ಶಿಬಿರದ ಮಹೇಂದ್ರ ಹಾಗೂ ಮತ್ತಿಗೋಡು ಸಾಕಾನೆ ಶಿಬಿರದ ಭೀಮ ಆನೆಗಳನ್ನು ಕಾರ್ಯಾಚರಣೆಯಿಂದ ಕೈಬಿಡಲು ಅರಣ್ಯ ಇಲಾಖಾಧಿಕಾರಿಗಳು ನಿರ್ಧರಿಸಿದ್ದಾರೆ.
ಮೊದಲು ಅರಣ್ಯ ಇಲಾಖೆ ಸಿಬ್ಬಂದಿಗಳು ಹುಲಿ ಸೆರೆಗೆ ಕೂಂಬಿಂಗ್ ಕಾರ್ಯಾಚರಣೆ ಕೈಗೊಂಡಿದ್ದರು. ಬಳಿಕ ಕಳೆದ ಹತ್ತು ದಿನಗಳಿಂದ ಸಾಕಾನೆಗಳನ್ನು ಬಳಸಿಕೊಂಡು ಜಾನುವಾರು ಭಕ್ಷಕ ಹುಲಿ ಸೆರೆಗೆ ಕೂಂಬಿಂಗ್ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಆದರೆ ಈ ವ್ಯಾಪ್ತಿಯಲ್ಲಿ ಕಾಫಿ ತೋಟ ಹೆಚ್ಚಾಗಿರುವುದರಿಂದ ಆನೆಗಳನ್ನು ಬಳಸಿ ಕಾರ್ಯಾಚರಣೆ ಮಾಡುವುದು ಅರಣ್ಯ ಇಲಾಖೆಗೆ ಕಷ್ಟಸಾಧ್ಯವಾಗಿ ಪರಿಣಮಿಸಿದೆ. ಆನೆಗಳು ತೋಟಗಳನ್ನು ಪ್ರವೇಶಿಸಿದ ಸಂದರ್ಭ ಕಾಫಿ ತೋಟಗಳಿಗೂ ಹಾನಿಯಾಗುವ ಹಿನ್ನೆಲೆಯಲ್ಲಿ ಇದೀಗ ಸಾಕಾನೆಗಳನ್ನು ಮರಳಿ ಶಿಬಿರಕ್ಕೆ ಕಳುಹಿಸಲು ನಿರ್ಧರಿಸಲಾಗಿದೆ. ಪೊನ್ನಂಪೇಟೆ ಅರಣ್ಯ ವಲಯದ ತಾವಳಗೇರಿ, ಬೆಳ್ಳೂರು, ಹೈಸೊಡ್ಲೂರು, ಬಿ.ಶೆಟ್ಟಿಗೇರಿ ಹಾಗೂ ಇನ್ನಿತರ ಗ್ರಾಮಗಳಲ್ಲಿ ಹುಲಿ ದಾಳಿ ಮಾಡಿ ಜಾನುವಾರುಗಳನ್ನು ಕೊಲ್ಲುತ್ತಿದ್ದ ಹಿನ್ನೆಲೆಯಲ್ಲಿ ಕಳೆದ ಹತ್ತು ದಿನಗಳಿಂದ ವಲಯ ಅರಣ್ಯ ಸಿಬ್ಬಂದಿಗಳೊoದಿಗೆ ಹುಲಿಯನ್ನು ಸೆರೆ ಹಿಡಿಯಲು ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಕೆಲ ದಿನಗಳ ಹಿಂದೆ ಹೈಸೊಡ್ಲೂರು ಗ್ರಾಮದಲ್ಲಿ ಹಸುವಿನ ಮೇಲೆ ಹುಲಿ ದಾಳಿ ಮಾಡಿದ ಹಿನ್ನೆಲೆಯಲ್ಲಿ ಅಲ್ಲಿನ ಮರದ ಮೇಲೆ ಅಟ್ಟಣಿಗೆ ಅಳವಡಿಸಿ ವೈದ್ಯಾಧಿಕಾರಿಗಳು ಹಾಗೂ ಶಾರ್ಪ್ ಶೂಟರ್‌ಗಳ ಸಹಿತ ಹುಲಿ ಸೆರೆಗೆ ತಂತ್ರಗಾರಿಕೆ ನಡೆಸಲಾಗಿತ್ತು. ಆದರೆ ಹುಲಿಯ ಯಾವುದೇ ಚಲನವಲನಗಳು ಅಲ್ಲಿ ಕಂಡು ಬಂದಿರಲಿಲ್ಲ ಹಾಗೂ ಸಾರ್ವಜನಿಕರು ಹುಲಿಯನ್ನು ನೋಡಿದ ಬಗ್ಗೆ ಯಾವುದೇ ಮಾಹಿತಿ ದೊರೆತಿರಲಿಲ್ಲ. ಈ ಕಾರಣದಿಂದ ಸಾಕಾನೆಗಳನ್ನು ಮರಳಿ ಶಿಬಿರಕ್ಕೆ ಕಳುಹಿಸಿ ಇನ್ನು ಮುಂದೆ ಸಿಬ್ಬಂದಿಗಳ ಸಹಕಾರದಿಂದ ಹುಲಿ ಕಾರ್ಯಾಚರಣೆ ಮುಂದುವರೆಸಲು ತೀರ್ಮಾನಿಸಲಾಗಿದೆ.
ಈ ಸಂದರ್ಭ ತಿತಿಮತಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಪಿ.ಗೋಪಾಲ್ ಅವರು ಟಿವಿ ಒನ್‌ನೊಂದಿಗೆ ಮಾತನಾಡಿ, ಮುಂದಿನ ದಿನಗಳಲ್ಲಿ ಜಾನುವಾರುಗಳ ಮೇಲೆ ಹುಲಿ ದಾಳಿ ಮಾಡಿದ ಸಂದರ್ಭ ಸಾರ್ವಜನಿಕರು ಹುಲಿ ದಾಳಿ ನಡೆಸಿದ ಸ್ಥಳದಲ್ಲಿ ಜಮಾವಣೆಗೊಳ್ಳದೇ, ಹುಲಿ ಸೆರೆ ಕಾರ್ಯಾಚರಣೆಗೆ ಸಹಕರಿಸುವಂತೆ ಮನವಿ ಮಾಡಿದರು. ಹುಲಿಯ ಚಲನ ವಲನ ಅಥವಾ ಹೆಜ್ಜೆ ಗುರುತುಗಳು ಪತ್ತೆಯಾದಲ್ಲಿ ವಲಯ ಅರಣ್ಯ ಅಧಿಕಾರಿಗೆ ಮಾಹಿತಿ ನೀಡಿದಲ್ಲಿ ಶಾರ್ಪ್ ಶೂಟರ್ ಹಾಗೂ ವೈದ್ಯಾಧಿಕಾರಿಗಳನ್ನು ಕರೆಸಿ ಜಾಗದಲ್ಲಿ ಅಟ್ಟಣಿಗೆ ಅಳವಡಿಸಿ ಹುಲಿಯನ್ನು ಸೆರೆ ಹಿಡಿಯಲು ಕ್ರಮಕೈಗೊಳ್ಳುತ್ತೇವೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭ ಪೊನ್ನಂಪೇಟೆ ವಲಯ ಅರಣ್ಯಾಧಿಕಾರಿ ಬಿ.ಎಂ.ಶಂಕರ್, ಉಪ ವಲಯ ಅರಣ್ಯಾಧಿಕಾರಿಗಳಾದ ನಾಗೇಶ್, ಸಂದೇಶ್, ಶ್ರೀಧರ್, ದಿವಾಕರ್, ರಕ್ಷಿತ್ ಭರತ್, ತಿತಿಮತಿ ಹಾಗೂ ವಿರಾಜಪೇಟೆ ಇಟಿಎಫ್ ಸಿಬ್ಬಂದಿಗಳು, ಎಸ್‌ಟಿಎಫ್ ಸಿಬ್ಬಂದಿಗಳು ಹಾಗೂ ಪೊನ್ನಂಪೇಟೆ, ವಿರಾಜಪೇಟೆ ಆರ್‌ಆರ್‌ಟಿ ಸಿಬ್ಬಂದಿಗಳು, ಅರಣ್ಯ ರಕ್ಷಕರು, ವೀಕ್ಷಕರು, ಭೀಮ ಆನೆಯ ಮಾವುತ ಗುಂಡಣ್ಣ, ಮಹೇಂದ್ರ ಆನೆಯ ಮಾವುತ ಮಲ್ಲಿಕಾರ್ಜುನ ಹಾಗೂ ಕಾವಾಡಿಗಳು ಹಾಜರಿದ್ದರು.
ವರದಿ:ಚಂಪಾ ಗಗನ, ಪೊನ್ನಂಪೇಟೆ.