ವಿರಾಜಪೇಟೆ: ಕರ್ನಾಟಕ ಸಂಘದಿಂದ 70 ನೇ ಕನ್ನಡ ರಾಜ್ಯೋತ್ಸವ ಆಚರಣೆ
ವಿರಾಜಪೇಟೆ:ವಿರಾಜಪೇಟೆ ಕರ್ನಾಟಕ ಸಂಘದ ಆವರಣದಲ್ಲಿ 70 ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಕರ್ನಾಟಕ ಸಂಘದ ಅಧ್ಯಕ್ಷರಾದ ಮಾಳೇಟಿರ ಎಂ.ಬೆಲ್ಲು ಬೋಪಯ್ಯ ಅವರು ಸಂಘದ ಆವರಣದಲ್ಲಿ ದ್ವಜಾರೋಹಣ ನೆರವೇರಿಸಿ ಬಳಿಕ ಮಾತನಾಡಿ,
ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಅಚರಿಸುವುದು ಮತ್ತು ಯುವ ಪೀಳಿಗೆಗೆ ಕನ್ನಡ ನಾಡಿನ ಇತಿಹಾಸ, ಸಂಸ್ಕೃತಿ, ಕಲೆ, ಭಾಷೆ ಬಗ್ಗೆ ಅರಿವು ಮೂಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಆಲೂರು ವೆಂಕಟರಾವ್ ರವರು 1905 ರಲ್ಲಿ ಕರ್ನಾಟಕ ಏಕೀಕರಣ ಚಟುವಳಿಯೊಂದಿಗೆ ರಾಜ್ಯವನ್ನು ಏಕೀಕರಿಸುವ ಕನಸು ಕಂಡ ಮೊದಲ ವ್ಯಕ್ತಿ. ಅವರನ್ನು ಸುಸಂದರ್ಭದಲ್ಲಿ ಸ್ಮರಿಸಬೇಕು.
ಕರ್ನಾಟಕ ರಾಜ್ಯದ ಏಕೀಕರಣಕ್ಕೆ ಕೀರ್ತಿ ಗಳಿಸಿದ ಇತರ ವ್ಯಕ್ತಿಗಳಲ್ಲಿ ಕುವೆಂಪು, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಕೆ ಶಿವರಾಮ ಕಾರಂತ, ಎ ಎನ್ ಕೃಷ್ಣ ರಾವ್ ಮತ್ತು ಬಿ.ಎಂ ಶ್ರೀಕಂಠಯ್ಯ ರವರು ಪ್ರಮುಖರು.ಕನ್ನಡಾಂಬೆಯ ಮಕ್ಕಳಾದ ನಾವು ಈ ಮಾಹಿತಿಯನ್ನು ಸದಾ ತಿಳಿದಿರಬೇಕು. ಅಷ್ಟೇ ಅಲ್ಲ ಕರ್ನಾಟಕಕ್ಕೆ ಆಗಮಿಸುವ ಅನ್ಯಭಾಷಿಗರಿಗೆ ಕನ್ನಡವನ್ನು ಕಲಿಸಿ, ನಾವು ಬಳಕೆ ಮಾಡುವ ಮೂಲಕ ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ವಿಸ್ತರಿಸಬೇಕು. ನಾವು ಕೇವಲ ನವೆಂಬರ್ ಕನ್ನಡಿಗರಾಗದೇ, 'ಕನ್ನಡ ನಾಡಿನ ಜವಾಬ್ದಾರಿಯುತ ಪ್ರಜೆಯಾಗಿ ಕನ್ನಡೇತರರಿಗೆ ಕನ್ನಡ ಕಲಿಸುತ್ತೇನೆ, ಕನ್ನಡ ನುಡಿ, ಸಂಸ್ಕೃತಿ, ಪರಂಪರೆ ಉಳಿಸಲು ಸದಾ ಕಟಿಬದ್ಧರಾಗಿರುತ್ತೇವೆ' ಎಂದು ನಿಶ್ಚಯಿಸಬೇಕು ಎಂದರಲ್ಲದೆ ಗಡಿ ಭಾಗವಾದ ವಿರಾಜಪೇಟೆ ವ್ಯಾಪ್ತಿಯಲ್ಲಿ ಕನ್ನಡ ನಾಡು ನುಡಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕರ್ನಾಟಕ ಸಂಘ ಕನ್ನಡದ ಬಗ್ಗೆ ಹೆಚ್ಚಿನ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದಾಗಿ ಬೋಪಯ್ಯ ತಿಳಿಸಿದರು.
ಕನ್ನಡ ರಾಜ್ಯೋತ್ಸವದ ದ್ವಜಾರೋಹಣ ಸಂದರ್ಭ ಕರ್ನಾಟಕ ಸಂಘದ ಉಪಾಧ್ಯಕ್ಷ ಚೇನಂಡ.ಈ.ಗಿರೀಶ್ ಪೂಣಚ್ಚ, ಕಾರ್ಯದರ್ಶಿ ಮುಂಡ್ಯೋಳಂಡ.ಕುಸುಮ ಸೋಮಣ್ಣ, ಕೋಶಾಧಿಕಾರಿ ಕೋಟೆರ.ಯು.ಗಣೇಶ್ ತಮ್ಮಯ್ಯ, ನಿರ್ಧೇಶಕರಾದ ಸಿ.ಪಿ. ಕಾವೇರಪ್ಪ, ಸಿ.ಎಂ.ಸುರೇಶ್ ನಾಣಯ್ಯ, ಪುಗ್ಗೇರ ನಂದ, ಎ.ಎಂ.ಜೋಯಪ್ಪ, ಮುಂಡAಡ.ರಾಣು ಮಂದಣ್ಣ, ಬೊಳ್ಯಪಂಡ ಎಂ.ಸುರೇಶ್, ಬಾಚೀರ ಆರ್.ಗಣೇಶ್, ಕಂಜಿತAಡ ಎಂ.ಮೊಣ್ಣಪ್ಪ, ಮೂಕಚಂಡ.ಬಿ. ದೇವಯ್ಯ, ಚಾರಿಮಂಡ ಯು. ಶರಣು ನಂಜಪ್ಪ, ಬಲ್ಲಡಿಚಂಡ ಜಿ. ವಿಜು ಕುಶಾಲಪ್ಪ, ಪೋರೇರ ಎಂ. ಬಿದ್ದಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.
