ಏಲಕ್ಕಿ ಹಾಗೂ ಕಾಫಿ ಬೆಳೆಗಳನ್ನು ನಾಶ ಮಾಡಿದ ಅರಣ್ಯ ಇಲಾಖೆಯ ಸಿಬ್ಬಂದಿಗಳನ್ನು ವಜಾಗೊಳಿಸದಿದ್ದಲ್ಲಿ ಸೆ.26ರಂದು ಅಹೋರಾತ್ರಿ ಪ್ರತಿಭಟನೆಯ ಎಚ್ಚರಿಕೆ

ಮಡಿಕೇರಿ: ಮುಕ್ಕೋಡ್ಲು ಗ್ರಾಮದ ಸರ್ವೆ ನಂಬರ್ 33/2ರಲ್ಲಿ 2 ಎಕರೆ ಜಾಗದಲ್ಲಿ ಬೆಳೆಗಾರ ಕಾಳಚಂಡ ನಾಣಿಯಪ್ಪ ಅವರು ಬೆಳೆದ ಏಲಕ್ಕಿ, ಕಾಫಿ ಬೆಳೆಗಳನ್ನು ನಾಶ ಮಾಡಿದ ಅರಣ್ಯ ಸಿಬ್ಬಂದಿಗಳನ್ನು ವಜಾಗೊಳಿಸದಿದ್ದಲ್ಲಿ ಅರಣ್ಯ ಇಲಾಖೆ ಮುಂಭಾಗ ಸೆ.26ರಂದು ಆಹೋರಾತ್ರಿ ಧರಣಿ ನಡೆಸಲಾಗುವುದು ಎಂದು ರೈತ ಹೋರಾಟ ಸಮಿತಿ ಅಧ್ಯಕ್ಷ ಸುರೇಶ್ ಚಕ್ರವರ್ತಿ ತಿಳಿಸಿದರು.
ಬೆಳೆಗಾರ ಕಾಳಚಂಡ ನಾಣಿಯಪ್ಪ ಅವರು ತಮ್ಮ ತಂದಯ ಕಾಲದಿಂದಲೂ ವಾಸವಿದ್ದು, ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಜೀವನಕ್ಕೆ ಆಧಾರವಾಗಿದ್ದ ಎಲಕ್ಕಿ, ಕಾಫಿ ಬೆಳೆಗಳನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಮೌಕಿಕವಾಗಿ ಇದು ದೇವರಕಾಡು ಜಾಗ ಎಂದು ಕಾರಣ ಹೇಳಿ ಏಕಾಏಕಿ ನಾಶ ಪಡಿಸಿರುವುದು ಸರಿಯಲ್ಲ. ಇಂತಹ ಸಿಬ್ಬಂದಿಗಳ ವಿರುದ್ಧ ಕ್ರಮಕೈಗೊಂಡು 15 ದಿನದೊಳಗೆ ವಜಾಗೊಳಿಸದಿದ್ದಲ್ಲಿ ಜಿಲ್ಲೆಯ ರೈತರೊಂದಿಗೆ ಆಹೋರಾತ್ರಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಯಾವುದೇ ಪೈಸಾರಿ ಜಾಗವಿದ್ದರೂ ಸರ್ವೆ ಇಲಾಖೆ, ಅರಣ್ಯ ಇಲಾಖೆ, ಕಂದಾಯ ಇಲಾಖೆಯ ಜಂಠಿ ಆಶ್ರಯದಲ್ಲಿ ಸರ್ವೆಕಾರ್ಯ ನಡೆಸಲು ಹೈಕೋರ್ಟ್ ಆದೇಶ ನೀಡಿದೆ. ಆದರೆ, ಇದನ್ನು ಜಿಲ್ಲೆಯಲ್ಲಿ ಪಾಲನೆಯಾಗುತ್ತಿಲ್ಲ ಎಂದು ದೂರಿದರು. ಸಂತ್ರಸ್ತ ರೈತ ಕಾಳಚಂಡ ನಾಣಿಯಪ್ಪ ಮಾತನಾಡಿ, ಜೀವನಕ್ಕೆ ಏಲಕ್ಕಿ, ಕಾಫಿ ಜೀವನಾಧಾರವಾಗಿತ್ತು. ಈಗ ಅದನ್ನೇ ಅರಣ್ಯ ಇಲಾಖೆ ನಾಶಪಡಿಸಿದೆ. ಪರಿಣಾಮ ಸಂಕಷ್ಟ ಎದುರಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಹೊಸೂರು ಸುರೇಶ್, ನಾಗಂಡ ಭವಿನ್, ಗ್ರಾಮಸ್ಥರಾದ ಓಡಿಯಂಡ ಸುಜನ್, ನಂದೀರ ಸಜನ್ ಉಪಸ್ಥಿತರಿದ್ದರು.