ಭಾರತದಲ್ಲಿ ವೈದ್ಯಕೀಯ ಪ್ರವಾಸೋದ್ಯಮ ಕುರಿತು ಸಂಸತ್ತಿನಲ್ಲಿ ಪ್ರಸ್ತಾಪಿಸಿದ ಯದುವೀರ್‌ ಒಡೆಯರ್: ಕಳೆದ ಐದು ವರ್ಷಗಳ ಅವಧಿಯ ಮಾಹಿತಿಯನ್ನು ಹಂಚಿಕೊಂಡ ಕೇಂದ್ರ ಸಚಿವರು

ಭಾರತದಲ್ಲಿ ವೈದ್ಯಕೀಯ ಪ್ರವಾಸೋದ್ಯಮ ಕುರಿತು ಸಂಸತ್ತಿನಲ್ಲಿ ಪ್ರಸ್ತಾಪಿಸಿದ ಯದುವೀರ್‌ ಒಡೆಯರ್: ಕಳೆದ ಐದು ವರ್ಷಗಳ ಅವಧಿಯ ಮಾಹಿತಿಯನ್ನು ಹಂಚಿಕೊಂಡ ಕೇಂದ್ರ ಸಚಿವರು

ಮೈಸೂರು: ಜಾಗತಿಕ ಮಟ್ಟದಲ್ಲಿ ಭಾರತ ವೈದ್ಯಕೀಯ ಸೇವೆ ನೀಡುವುದರಲ್ಲಿ ಮುಂಚೂಣಿಯಲ್ಲಿದೆ. "ಹೀಲ್‌ ಇನ್‌ ಇಂಡಿಯಾ" ಎಂಬ ಯೋಜನೆಯಡಿ ಇದುವರೆಗೆ ಭಾರತಕ್ಕೆ ಬಂದಿರುವ ವಿದೇಶಿ ಪ್ರವಾಸಿಗರ ಸಂಖ್ಯೆ ಕುರಿತು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಂಸತ್ತಿನಲ್ಲಿ ಪ್ರಸ್ತಾಪಿಸಿದ್ದು, ಅದಕ್ಕೆ ಕೇಂದ್ರ ಸಚಿವರು ವಿವರ ನೀಡಿದ್ದಾರೆ.

ಸೋಮವಾರ ನಡೆದ ಸಂಸತ್ತಿನ ಅಧಿವೇಶನದ ಲೋಕಸಭಾ ಕಲಾಪದಲ್ಲಿ ಸಂಸದ ಯದುವೀರ್‌ ಅವರ ಚುಕ್ಕಿ ರಹಿತ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌, ಜಾಗತಿಕ ಸ್ವಾಸ್ಥ್ಯ ಪ್ರವಾಸೋದ್ಯಮಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದು ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಯದುವೀರ್‌, ಕಳೆದ ಐದು ವರ್ಷದಲ್ಲಿ ಭಾರತಕ್ಕೆ ಹಲವಾರು ದೇಶಗಳ ಪ್ರವಾಸಿಗರು ಬಂದು ಚಿಕಿತ್ಸೆ ಪಡೆದುಕೊಂಡಿದ್ದಾರೆ. ವೈದ್ಯಕೀಯ ಪ್ರವಾಸೋದ್ಯಮಕ್ಕೆ ಹೆಚ್ಚು ಸ್ಪಂದನೆ ದೊರಕಿದೆ ಎಂದಿದ್ದಾರೆ. ನಮ್ಮ ಕೇಂದ್ರ ಸರ್ಕಾರ ಆರಂಭಿಸಿರುವ "ಹೀಲ್‌ ಇನ್‌ ಇಂಡಿಯಾ" ಯೋಜನೆಯಡಿ ಚಿಕಿತ್ಸೆಗೆ ಬರುವ ವಿದೇಶಿಗರು ಹಾಗೂ ಅವರ ಜೊತೆಗಿರುವವರಿಗೆ ವೀಸಾ ಸೌಲಭ್ಯವನ್ನು ಸರಳೀಕರಣಗೊಳಿಸಿ ನೀಡಲಾಗಿದೆ.

 ವೈದ್ಯಕೀಯ ಪ್ರವಾಸೋದ್ಯಮ ಸೇರಿದಂತೆ ಪ್ರವಾಸಿ ತಾಣಗಳು ಮತ್ತು ಉತ್ಪನ್ನಗಳ ಅಭಿವೃದ್ಧಿ ಮತ್ತು ಪ್ರಚಾರವನ್ನು ಆಯಾ ರಾಜ್ಯ ಸರ್ಕಾರ/ಕೇಂದ್ರಾಡಳಿತ ಪ್ರದೇಶದ (ಯುಟಿ) ಆಡಳಿತವು ಕೈಗೊಳ್ಳುತ್ತದೆ. ಸಚಿವಾಲಯವು ವಿವಿಧ ಯೋಜನೆಗಳು ಮತ್ತು ಉಪಕ್ರಮಗಳ ಮೂಲಕ ವೈದ್ಯಕೀಯ ಪ್ರವಾಸೋದ್ಯಮ ಸೇರಿದಂತೆ ದೇಶದ ವಿವಿಧ ಪ್ರವಾಸೋದ್ಯಮ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವ ಮತ್ತು ಉತ್ತೇಜಿಸಲು ಸೂಕ್ತ ಬೆಂಬಲ ಒದಗಿಸುತ್ತಿದೆ ಎಂದು ಕೇಂದ್ರ ಸಚಿವರು ಮಾಹಿತಿ ನೀಡಿದ್ದಾರೆ ಎಂದು ಸಂಸದರು ಸ್ಪಷ್ಟಪಡಿಸಿದ್ದಾರೆ.

 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಎಲ್ಲ ಸಹಕಾರ/ಬೆಂಬಲ ಒದಗಿಸುತ್ತಿದೆ. ವೈದ್ಯಕೀಯ ಚಿಕಿತ್ಸೆಗಾಗಿ ಭಾರತಕ್ಕೆ ಬರುವ ವಿದೇಶಿ ಪ್ರಜೆಗಳ ಭೇಟಿಗೆ ಅನುಕೂಲವಾಗುವಂತೆ, ಇ-ವೈದ್ಯಕೀಯ ವೀಸಾ/ಇ-ವೈದ್ಯಕೀಯ ಅಟೆಂಡೆಂಟ್ ವೀಸಾ ಸೌಲಭ್ಯ ಒದಗಿಸುತ್ತಿದೆ ಎಂದು ಯದುವೀರ್‌ ವಿವರಿಸಿದ್ದಾರೆ. ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಡಿಯಲ್ಲಿ ಸೇವೆಗಳ ರಫ್ತು ಉತ್ತೇಜನ ಮಂಡಳಿ (SEPC) "ಸಂಜೀವಿನಿ" ಎಂಬ ಅಂತರರಾಷ್ಟ್ರೀಯ ಆರೋಗ್ಯ ಮತ್ತು ಸ್ವಾಸ್ಥ್ಯ ಕಾರ್ಯಕ್ರಮ ಆಯೋಜಿಸುತ್ತದೆ, ಇದು ಭಾರತದ ಗುಣಪಡಿಸುವಿಕೆ ಮತ್ತು ಸ್ವಾಸ್ಥ್ಯದ ತಾಣದ ಸಾಮರ್ಥ್ಯಗಳನ್ನು ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸಲಿದೆ ಎಂದು ಮಾಹಿತಿ ನೀಡಿದ್ದಾರೆ.