ಕೊಡಗು ಮುಸ್ಲಿಂ ಕಪ್ ವಾಲಿಬಾಲ್: ಕಬಡಕೇರಿ ಚಾಂಪಿಯನ್, ಲಿಮ್ರಾ ಕಡಂಗ ರನ್ನರ್ಸ್
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಎಸ್.ಇ.ಎಸ್ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ಬೇತ್ರಿ ಆಯೋಜಿಸಿದ್ದ 40 ವರ್ಷ ಮೇಲ್ಪಟ್ಟವರ ವಾಲಿಬಾಲ್ ಪಂದ್ಯಾವಳಿಯಲ್ಲಿ ಕಬಡಕೇರಿ ತಂಡವು ಚಾಂಪಿಯನ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.ರನ್ನರ್ಸ್ ಪ್ರಶಸ್ತಿಗೆ ಲಿಮ್ರಾ ಕಡಂಗ ತೃಪ್ತಿಪಟ್ಟುಕೊಂಡಿತ್ತು.
ಬೇತ್ರಿಯಲ್ಲಿ ನಡೆದ ವಾಲಿಬಾಲ್ ಪಂದ್ಯಾವಳಿಯೂ ಮಳೆಯ ನಡುವೆಯೂ ಕೂಡ ಯಶಸ್ಸು ಕಂಡಿತ್ತು.ವಾಲಿಬಾಲ್ ಕ್ರೀಡಾಕೂಟದಲ್ಲಿ ಎರಡು ಬಲಿಷ್ಠ ತಂಡಗಳಾದ ಕಡಬಕೇರಿ ಹಾಗೂ ಲಿಮ್ರಾ ತಂಡಗಳ ನಡುವಿನ ಜಿದ್ದಾಜಿದ್ದಿನ ಫೈನಲ್ ಪಂದ್ಯವು ಪ್ರೇಕ್ಷಕರನ್ನ ತುದಿಗಾಲಿನಲ್ಲಿ ನಿಲ್ಲಿಸಿತ್ತು.ಹಿರಿಯ ಆಟಗಾರರು ತಮ್ಮ ವಯಸ್ಸುನ್ನೂ ಕೂಡ ಲೆಕ್ಕಿಸದೆ 20 ವರ್ಷದ ಹುಡುಗರಂತೆ ಮೈದಾನದಲ್ಲಿ ಆಟ ಆಡಿದ್ದು ವಿಶೇಷವಾಗಿತ್ತು.
ಫೈನಲ್ ಪಂದ್ಯದಲ್ಲಿ ಕಬಡಕೇರಿ ತಂಡವು ಎರಡು ನೇರ ಸೆಟ್ ಗಳಿಂದ ಗೆದ್ದಿತ್ತು.ಲಿಮ್ರಾ ಕಡಂಗ ತಂಡವು ಸಮಾನವಾದ ಹೋರಾಟ ನಡೆಸಿದರು ಕೂಡ ಪ್ರಶಸ್ತಿ ಜಯಿಸಲು ಸಾಧ್ಯವಾಗಲಿಲ್ಲ.ಕಬಡಕೇರಿ ತಂಡವು 25-22 ಹಾಗೂ 25-22 ಸ್ಕೋರ್ ಗಳ ಮುಖಾಂತರ ಗೆಲುವು ಸಾಧಿಸಿ ಮೊದಲ ವರ್ಷದ 40 ವರ್ಷದ ಮೇಲ್ಪಟ್ಟವರ ಮುಸ್ಲಿಂ ಕಪ್ ವಾಲಿಬಾಲ್ ಕಪ್ ತನ್ನದಾಗಿಸಿಕೊಂಡಿತ್ತು.
ಇದಕ್ಕೂ ಮೊದಲು ನಡೆದ ಮೊದಲ ಸೆಮಿಫೈನಲ್ ಪಂದ್ಯವು ಫ್ರೀಡಮ್ ಬಾಯ್ಸ್ ಹುಂಡಿ ಹಾಗೂ ಕಬಡಕೇರಿ ತಂಡಗಳ ನಡುವೆ ನಡೆಯಿತು.ಹುಂಡಿ ತಂಡವನ್ನು 25-15 ಹಾಗೂ 25-18 ಎರಡು ನೇರ ಸೆಟ್ ಗಳ ಮೂಲಕ ಸೋಲಿಸಿ ಕಬಡಕೇರಿ ತಂಡವು ಫೈನಲ್ ಗೆ ಲಗ್ಗೆಯಿಟ್ಟಿತ್ತು.
ದ್ವಿತೀಯ ಸೆಮಿಫೈನಲ್ ಪಂದ್ಯವು ಲಿಮ್ರಾ ಫ್ರೆಂಡ್ಸ್ ಕಡಂಗ ಹಾಗೂ ರಶೀದ್ ಫ್ರೆಂಡ್ಸ್ ಮಾಪಿಳೆತೋಡು ತಂಡಗಳ ನಡುವೆ ನಡೆಯಿತು.ಲಿಮ್ರಾ ತಂಡವು 25-23 ಹಾಗೂ 25 -13 ಎರಡು ನೇರ ಸೆಟ್ ಗಳ ಮೂಲಕ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿತು.
ಪಂದ್ಯವಾಳಿಯ ಅತ್ಯುತ್ತಮ ಬ್ಲಾಕರ್ ಹಾಗೂ ಪಾಸರ್ ಪ್ರಶಸ್ತಿಯನ್ನು ಕಬಡಕೇರಿ ತಂಡದ ಜಲೀಲ್, ಅತ್ಯುತ್ತಮ ಅಟೇಕರ್ ಕಬಡಕೇರಿ ತಂಡದ ಹ್ಯಾರಿಸ್,ಅತ್ಯುತ್ತಮ ಆಲ್ ರೌಂಡರ್ ಲಿಮ್ರಾ ತಂಡದ ಕರೀಮ್,ಅತ್ಯುತ್ತಮ ಡಿಫೆಂಡರ್ ಪ್ರಶಸ್ತಿಯನ್ನು ಕಬಡಕೇರಿ ತಂಡದ ಹಮೀದ್ ಪಡೆದುಕೊಂಡರು.
ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ವಿರಾಜಪೇಟೆ ಪುರಸಭೆ ಸದಸ್ಯ ಮೊಹಮ್ಮದ್ ರಾಫಿ, ಕಾಕೋಟುಪರಂಬು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಗಿರೀಶ್ ಬೋಪಣ್ಣ,ಮಂಜು ಮೈತಾಡಿ,ಎಸ್.ಇ.ಎಸ್ ಅಧ್ಯಕ್ಷ ರಶೀದ್ ಪಿ.ಎಂ,ಬೇತ್ರಿ ಮುಸ್ಲಿಮ್ ಜಮಾಅತ್ ಅಧ್ಯಕ್ಷ ಪಿ.ಎ ಮುಸ್ತಫಾ,ಪಿವೈ ರಹೀಮ್,ರಜಾಕ್,ಹಾಲುಗುಂದ ಗ್ರಾಮ ಪಂಚಾಯಿತಿ ಸದಸ್ಯ ಅಬ್ದುರೆಹಮಾನ್(ಅಂದಾಯಿ) ಕೊಂಡಂಗೇರಿ,ಹೊದ್ದೂರು ಗ್ರಾಮ ಪಂಚಾಯಿತಿ ಸದಸ್ಯ ಅಬ್ದುಲ್ ಹಮೀದ್ ಕಬಡಕೇರಿ,ಬೇತ್ರಿ ಮುಸ್ಲಿಮ್ ಜಮಾಅತ್ ಉಪಾಧ್ಯಕ್ಷಾದ ಅಬ್ದುಲ್ ಶಮೀರ್, ಹಾಗು ಎಸ್.ಇ.ಎಸ್ ಪದಾಧಿಕಾರಿಗಳು ಇದ್ದರು.
