ಕರಡಿಕಲ್ಲು,ಅತ್ತೂರುಕೊಲ್ಲಿ ಹಾಡಿಯಲ್ಲಿ ಪ್ರತಿಭಟನೆ: ಗುಡಿಸಲು ತೆರವುಗೊಳಿಸಿದ ಅರಣ್ಯ ಇಲಾಖೆ! ಆದಿವಾಸಿಗಳ ಆಕ್ರೋಶ
ವರದಿ: ಚೆಪ್ಪುಡಿರ ರೋಷನ್, ಪೊನ್ನಂಪೇಟೆ
ಪೊನ್ನಂಪೇಟೆ : ತಾಲ್ಲೂಕಿನ ಕೆ.ಬಾಡಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡಿಕಲ್ಲು, ಅತ್ತೂರುಕೊಲ್ಲಿ ಹಾಡಿಯಲ್ಲಿ ಅರಣ್ಯ ಹಕ್ಕು ಕಾಯ್ದೆ ಪ್ರಕಾರ ವೈಯುಕ್ತಿಕ ಹಕ್ಕು ಹಾಗೂ ಸಮುದಾಯ ಹಕ್ಕುಗಳಿಗಾಗಿ ಒತ್ತಾಯಿಸಿ ನಿರಂತರವಾಗಿ ನಾಲ್ಕು ದಿನಗಳಿಂದ ನಡೆಸುತ್ತಿರುವ ಆದಿವಾಸಿ ಸಮುದಾಯದ 52 ಕುಟುಂಬಗಳ ಮಹಿಳೆಯರು, ಮಕ್ಕಳು ಹಾಗೂ ಪುರುಷರುಉಳಿದುಕೊಳ್ಳಲು, ಅಡಿಗೆ ಮಾಡಲು ಹಾಗೂ ಇನ್ನಿತರ ದಿನಚರಿಯ ಉಪಯೋಗಕ್ಕೆ ತಾತ್ಕಾಲಿಕವಾಗಿ ನಿರ್ಮಿಸಿಕೊಂಡಿದ್ದ ಪ್ಲಾಸ್ಟಿಕ್ ಹೊದಿಕೆಯ ಗುಡಿಸಲುಗಳನ್ನು ಬುಧವಾರ ರಾತ್ರಿ ವೇಳೆ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಏಕಾಏಕಿ ಧ್ವಂಸಗೊಳಿಸಿರುವುದು ಹಾಡಿ ಮಂದಿಯ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ ಗುರುವಾರ ನಾಣಚಿಗದ್ದೆ ಹಾಡಿಯ ನಾಗರಹೊಳೆ ಮುಖ್ಯ ದ್ವಾರದ ಬಳಿ ಹಕ್ಕು ಸ್ಥಾಪನ ಹೋರಾಟಕ್ಕೆ ಬೆಂಬಲ ಸೂಚಿಸಲು ವಿವಿಧ ಹಾಡಿಗಳಿಂದ ಆಗಮಿಸುತ್ತಿದ್ದ ಜನರನ್ನು ತಡೆಯಲು ಸಾರ್ವಜನಿಕ ರಸ್ತೆಯಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ. ಹಕ್ಕುಸ್ಥಾಪನ ಹೋರಾಟಕ್ಕೆ ಬೆಂಬಲ ಸೂಚಿಸಿದಂತೆ ತಡೆ ಹಿಡಿಯಲಾಗುತ್ತಿದೆ. ನಾಗರಹೊಳೆ ಆರ್.ಎಫ್.ಓ ಅನನ್ಯ ಕುಮಾರ್ ಅವರು ಮಾತನಾಡಿ, ನಾಗರಹೊಳೆ ಹುಲಿ ಸಂರಕ್ಷಿತಾ ಪ್ರದೇಶದ ನಾಗರಹೊಳೆ ವನ್ಯಜೀವಿ ಅರಣ್ಯ ಪ್ರದೇಶದ ಅತ್ತೂರು ಕೊಲ್ಲಿ ಎಂಬ ಅರಣ್ಯ ವಾಪ್ತಿಯಲ್ಲಿ ಅದಿವಾಸಿ ಜನರು ಕಳೆದ ಮೂರು ದಿನಗಳಿಂದ ಮೊಕ್ಕಾಂ ಹೂಡಿದ್ದು, ನಮಗೆ ವೈಯಕ್ತಿಕ ಹಕ್ಕುಗಳನ್ನು ನೀಡುವವರೆಗೂ ಸ್ಥಳ ಬಿಟ್ಟು ತೆರಳುವುದಿಲ್ಲ ಎಂದಿದ್ದಾರೆ. 2011ರಿಂದಲೂ ಈ ಸಮಸ್ಯೆ ಇದ್ದು, ಆ ಸಂದರ್ಭದಲ್ಲಿ ಹಾಕಿದ ಅರ್ಜಿಗಳನ್ನು ವಜಾ ಮಾಡಲಾಗಿದೆ. 2019 ರಲ್ಲಿ ಸುಪ್ರೀಂ ಕೋರ್ಟ್ ವಜಾ ಗೊಳಿಸಿದ ಅರ್ಜಿಗಳನ್ನು ಮತ್ತೆ ಮರುಪರಿಶೀಲನೆ ಮಾಡಬೇಕೆಂಬ ಆದೇಶವನ್ನು ನೀಡುತ್ತದೆ. ಈ ಪ್ರಕ್ರಿಯೆ ನಡೆಯುತಿದ್ದು, ಇದಕ್ಕೂ ಮೊದಲೇ ಆದಿವಾಸಿ ಜನರು ಸ್ಥಳಕ್ಕೆ ತೆರಲಿ ಮೊಕ್ಕಾಂ ಹೂಡಿದ್ದಾರೆ. ಇದರ ಮದ್ಯೆ ಸುಪ್ರೀಂ ಕೋರ್ಟ್ ನಲ್ಲಿ ಕರ್ನಾಟಕ ಸರಕಾರ ಹಾಗೂ ಕರ್ನಾಟಕ ಅರಣ್ಯ ಇಲಾಖೆ ಜಂಟಿಯಾಗಿ ಎರಡು ಅರ್ಜಿಗಳನ್ನು ದಾಖಲಿಸಿದ್ದಾರೆ. ಅದರಲ್ಲಿ ಕೆಲವು ಪ್ರದೇಶಗಳನ್ನು ಸರ್ವೇ ಮಾಡಿ ಅರಣ್ಯ ಹಕ್ಕುಗಳನ್ನು ನೀಡುತಿದ್ದು, ಅದನ್ನು ನಿಲ್ಲಿಸಬೇಕು. ಹಾಗೆ ಜುಲೈ 21 ನೇ ತಾರೀಕಿನವರೆಗೂ ಮೀಸಲು ಅರಣ್ಯವ್ಯಾಪ್ತಿಯಲ್ಲಿ ಯಾವುದೇ ಚಟುವಟಿಕೆ ನಡೆಸಬಾರದು, ನಿವೇಶನ ನೀಡುವ ಯಾವುದೇ ಸರ್ವೇ ಹಾಗೂ ಸಭೆಗಳನ್ನು ನಡೆಸಬಾರದು ಎಂಬ ಆದೇಶ ಹೊರಡಿಸಿದ್ದಾರೆ. ಎಲ್ಲಾ ವಿಚಾರಗಳನ್ನು ಒಳಗೊಂಡ ಕರಡು ಪ್ರತಿಯನ್ನು ಆದಿವಾಸಿ ಜನಾಂಗಕ್ಕೆ ಮನವರಿಕೆ ಮಾಡಿ, ಪ್ರತಿಯನ್ನು ತಲುಪಿಸುವ ಕೆಲಸ ಮಾಡಿದ್ದೇವೆ. ಈ ಸಂದರ್ಭದಲ್ಲಿ ಆದಿವಾಸಿ ಜನಾಂಗದವರು ಅವರ ಮುಖಂಡರೊಂದಿಗೆ ಹಾಗೂ ವಕೀಲರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆಂದರು.
ನಾಗರಹೊಳೆ ಜಮ್ಮ ಹಕ್ಕು ಸ್ಥಾಪನ ಸಮಿತಿ ಅಧ್ಯಕ್ಷ ಜೆ ಕೆ ತಿಮ್ಮ ಅವರು ಮಾತನಾಡಿ, ಕರಡಿ ಕಲ್ಲು ಅತ್ತೂರು ಕೊಲ್ಲಿ ಹಾಡಿಯ ಹಕ್ಕು ಸ್ಥಾಪನೆ ಮಾಡಲು ಆದಿ ದೇವತೆ ಸೂಚನೆ ನೀಡಿದ್ದರಿಂದ 52 ಕುಟುಂಬಗಳು ಮೂಲ ಸ್ಥಾನಕ್ಕೆ ಬಂದು ದೇವತೆಗಳಿಗೆ ಮೂರು ಸ್ಥಾನಗಳನ್ನು ನಿರ್ಮಿಸಿ ಆ ಗುಡಿಸಲಿನಲ್ಲಿ ದೀಪ ಬೆಳಗಿಸಿ ಅತ್ತೂರು ಕೊಲ್ಲಿ ಹಾಡಿಯ ನಿವಾಸಿಗಳು ಆದಿ ಸ್ಥಳದಲ್ಲಿಯೇ 4 ದಿನಗಳಿಂದ ತಳವೂರಿದ್ದೇವೆ. ರಾತ್ರಿ ವೇಳೆಯಲ್ಲಿ ಅರಣ್ಯಾಧಿಕಾರಿಗಳು ಮಕ್ಕಳಿಗಾಗಿ ನಿರ್ಮಿಸಿದ್ದ ಗುಡಿಸಲುಗಳನ್ನು ಕಡಿದು ದ್ವಂಸ ಮಾಡಿದ್ದಾರೆ. ಈ ರೀತಿಯಾಗಿದ್ದರು ಪಂಚಾಯತಿ ವ್ಯಾಪ್ತಿಯ ಹಾಗೂ ತಾಲ್ಲೂಕು ಮಟ್ಟದ ಯಾವುದೇ ಅಧಿಕಾರಿಗಳು ಹಕ್ಕು ಸ್ಥಾಪನೆ ಬಗ್ಗೆ ಗಮನವಹಿಸದೆ ನಿರ್ಲಕ್ಷ್ಯ ತೋರಿದ್ದಾರೆ. ನಮ್ಮ ಹಕ್ಕುಗಳ ಬಗ್ಗೆ ಪಂಚಾಯಿತಿ ಮಟ್ಟದಲ್ಲಿ ಪಿ ಡಿ ಓ ಉಪವಿಭಾಗ ಸಮಿತಿ ಹಾಗೂ ಜಿಲ್ಲಾ ಮಟ್ಟದ ಸುಮಿತಿಗಳು ಗಮನಹರಿಸಿ ಶೀಘ್ರ ಪರಿಹಾರ ನೀಡದಿದ್ದಲ್ಲಿ ನಮ್ಮ ಹಕ್ಕುಗಳನ್ನು ಸ್ಥಾಪಿಸಲು ನಿರಂತರವಾಗಿ ಹೋರಾಟ ಮಾಡುವುದಾಗಿ ಹೇಳಿದರು.
ನಾಗರಹೊಳೆ ಆದಿವಾಸಿ ಜಮ್ಮಾಪಾಳೆ ಹಕ್ಕು ಸ್ಥಾಪನಾ ಸಮಿತಿಯ ಕಾರ್ಯದರ್ಶಿ ಶಿವು ಅವರು ಮಾತನಾಡಿ, ನಾಗರಹೊಳೆ ಹಕ್ಕು ಸ್ಥಾಪನ ಸಮಿತಿ ವತಿಯಿಂದ ಕರಡಿ ಕಲ್ಲು ಅತ್ತೂರು ಕೊಲ್ಲಿ ಹಾಡಿಯ ಗ್ರಾಮ ಸಭೆಯ ಸಮ್ಮುಖದಲ್ಲಿ ನಡೆಯುತ್ತಿರುವ ನಾಲ್ಕನೇ ದಿನದ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಲು ನಾನಾ ಹಾಡಿಗಳಿಂದ ಬಂದ ಸಮುದಾಯ ಬಾಂಧವರನ್ನು ಬ್ಯಾರಿಕೇಡ್ ಅಳವಡಿಸಿ ತಡೆದಿದ್ದಾರೆ. ಬಳಿಕ ಅರಣ್ಯ ಹಾಗೂ ಪೊಲೀಸ್ ಅಧಿಕಾರಿಗಳು ಆಗಮಿಸಿದ್ದರು ಇದಲ್ಲದೆ ಯಾವುದೇ ಉನ್ನತ ಅಧಿಕಾರಿಗಳು, ಐ ಟಿ ಡಿ ಪಿ ಅಧಿಕಾರಿಗಳು ಭೇಟಿ ನೀಡಿಲ್ಲ. ಜಾಗವನ್ನು ಕೇವಲ 2006ರ ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಅಲ್ಲದೆ ನಮ್ಮ ಪೂರ್ವಿಕರ ಜಮ್ಮ ಜಾಗ ಎಂದು ತಿಳಿದು ಕೇಳುತ್ತಿದ್ದೇವೆ. ನಮ್ಮ ಈ ಹಕ್ಕುಗಳ ವಿಚಾರದಲ್ಲಿ ಮೂಲ ನೆಲೆಯನ್ನು ಬಿಟ್ಟು ಯಾವುದೇ ಕಾರಣಕ್ಕೂ ಕದಲುವುದಿಲ್ಲ. ಅಧಿಕಾರಿಗಳು ಹಾಗೂ ಸರಕಾರ ಸುಮುದಾಯದವರ ಬೆಂಬಲವಾಗಿ ನಿಲ್ಲಬೇಕು ಎಂದರು.ಈ ಸಂದರ್ಭ ತಟ್ಟೆಕೆರೆ ಹಾಡಿಯ ಅಧ್ಯಕ್ಷ ಜೆ. ಕೆ ದಾಸಪ್ಪ, ಹಾಗೂ ಅತ್ತೂರು ಹಾಡಿಯ ಹಿರಿಯರಾದ ಶಿವಣ್ಣ ಇದ್ದರು.
