ಕೊಟ್ಟ ಮಾತಿನಂತೆ ನಡೆದುಕೊಂಡ ಡಾ ಮಂತರ್ ಗೌಡ: ಮೀನಾಳ‌ ಕುಟುಂಬಕ್ಕೆ ಮನೆ ಹಸ್ತಾಂತರ

ಕೊಟ್ಟ ಮಾತಿನಂತೆ ನಡೆದುಕೊಂಡ ಡಾ ಮಂತರ್ ಗೌಡ:  ಮೀನಾಳ‌ ಕುಟುಂಬಕ್ಕೆ ಮನೆ ಹಸ್ತಾಂತರ

ಸೋಮವಾರಪೇಟೆ:ಕಳೆದ ವರ್ಷ ಮೇ 9ರಂದು ತನ್ನ ಬರ್ಬರವಾಗಿ ಹತ್ಯೆಯಾಗಿದ್ದ ಸೋಮವಾರಪೇಟೆ ತಾಲ್ಲೂಕಿನ ಸೂರ್ಲಬ್ಬಿ-ಕುಂಬಾರಗಡಿಗೆ ಗ್ರಾಮದ ಹತ್ತನೆ ತರಗತಿ ವಿದ್ಯಾರ್ಥಿನಿ ಮೀನಾಳ ಕುಟುಂಬದವರಿಗೆ ಶಾಸಕ ಡಾ.ಮಂತರ್‌ಗೌಡ ಹಾಗು ಅವರು ಹಿತೈಸಿಗಳು ನಿರ್ಮಿಸಿಕೊಟ್ಟಿರುವ ಮನೆಯನ್ನು ಕುಟುಂಬಸ್ಥರಿಗೆ ಸೋಮವಾರ ಮಂತರ್‌ಗೌಡ ಹಸ್ತಾಂತರಿಸಿದರು.

 ಕಳೆದ ವರ್ಷದ ಮೇ 10ರಂದು ಸಾಂತ್ವನಾ ಹೇಳಲು ಕುಂಬಾರಗಡಿಗೆ ಗ್ರಾಮಕ್ಕೆ ತೆರಳಿದ ಸಂದರ್ಭ ಮುರುಕಲು ಮನೆಯಲ್ಲಿ ವಾಸ ಮಾಡುತ್ತಿರುವುದನ್ನು ಇರುವುದನ್ನು ಕಣ್ಣಾರೆ ಕಂಡ ಶಾಸಕ ಡಾ.ಮಂತರ್‌ಗೌಡ ಹಾಗು ಅವರ ಹಿತೈಷಿಗಳು ಸೇರಿಕೊಂಡು ಒಂದು ವರ್ಷದ ಅವದಿಯಲ್ಲಿ ಸ್ವಂತ ಖರ್ಚಿನಲ್ಲಿ ಮನೆ ನಿರ್ಮಿಸಿಕೊಟ್ಟಿದ್ದಾರೆ.

ಹೊಸ ಮನೆಯನ್ನು ಹಸ್ತಾಂತರಿಸಿದ ಶಾಸಕ ಮಂತರ್‌ಗೌಡ ಮಾತನಾಡಿ, ಮಾನವೀಯ ನೆಲಗಟ್ಟಿನಲ್ಲಿ ನಾವು ಮಾಡಲೇಬೇಕಾದ ಕೆಲಸ ಇದಾಗಿದೆ. ಯಾವುದೇ ರಾಜಕೀಯ ಉದ್ದೇಶವಿಲ್ಲದೆ ಸ್ನೇಹಿತರೊಂದಿಗೆ ಸೇರಿ ಈ ಕೆಲಸವನ್ನು ಮಾಡಿದ್ದೇವೆ. ಮಗಳನ್ನು ಕಳೆದುಕೊಂಡ ಕುಟುಂಬ ಕಣ್ಣೀರು ಒರೆಸುವ ಪ್ರಯತ್ನವನ್ನು ಮಾಡಿದ್ದೇವೆ. ಈ ಮನೆಯಲ್ಲಿ ನೆಮ್ಮದಿಯಿಂದ ವಾಸಿಸುತ್ತ ನೋವನ್ನು ಮರೆಯುವ ಪ್ರಯತ್ನ ಮಾಡಬೇಕು ಎಂದು ಹೇಳಿದರು. ನೊಂದ ಕುಟುಂಬದ ಕಷ್ಟ ಸುಖಗಳಿಗೆ ಮುಂದೆಯೂ ಸಹಕಾರ ನೀಡುವ ಭರವಸೆ ನೀಡಿದರು. 

ಮಾಜಿ ಎಂಎಲ್‌ಸಿ ವೀಣಾ ಅಚ್ಚಯ್ಯ ಅವರು ಮಾತನಾಡಿ, ಮಗಳ ಕೊಲೆಯಾದ ದಿನದಿಂದ ಇಂದಿನ ವರೆಗೂ ಇಡೀ ಕುಟಂಬ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದೆ. ಶಾಸಕರೊಬ್ಬರು ಬಡ ಕುಟುಂಬಕ್ಕೆ ಮನೆ ನಿರ್ಮಿಸಿಕೊಟ್ಟಿದ್ದಾರೆ. ಈ ಜನಪ್ರತಿನಿಧಿಗಳಿಗೆ ಇದೊಂದು ಮಾದರಿಯಾಗಬೇಕು ಎಂದು ಅಶಿಸಿದರು. ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಮಳೆ ಬೀಳುತ್ತಿದೆ. ಅತೀ ಹೆಚ್ಚಿನ ಸಂಖ್ಯೆಯಲ್ಲಿ ಬಡ ಕೃಷಿಕರಿದ್ದಾರೆ. ಸರ್ಕಾರದ ಎಲ್ಲಾ ಯೋಜನೆಗಳು ಇಂತಹ ಗ್ರಾಮಗಳಿಗೆ ಮೊದಲು ಸಿಗಬೇಕು ಎಂದು ಹೇಳಿದರು.

ತನ್ನದಲ್ಲದೆ ತಪ್ಪಿನಿಂದ ಮಗಳು ಪ್ರಾಣ ಕಳೆದುಕೊಂಡಳು ಎಂದು ತಾಯಿ ಜಾನಕಿ ನೊಂದುಕೊಂಡರು. ನಾವು ಬಡವರು, ಹಣಕಾಸಿನ ಸಮಸ್ಯೆಯಿಂದ ಮನೆಯನ್ನು ನಿರ್ಮಿಸಿಕೊಳ್ಳಲು ಸಾಧ್ಯವಾಗಿಲ್ಲ. ಆಸ್ತಿಗೆ ಹಕ್ಕುಪತ್ರಗಳಿಲ್ಲ. ಸರ್ಕಾರದಿಂದ ಮನೆಯೂ ಸಿಕ್ಕಿಲ್ಲ. ಇಂತಹ ಸಂಕಷ್ಟದ ಸಮಯದಲ್ಲಿ ಶಾಸಕರಾದ ಮಂತರ್‌ಗೌಡ ಅವರು ಮನೆ ಕಟ್ಟಿಸಿಕೊಟ್ಟಿದ್ದಾರೆ. ಅವರ ಸಹಾಯವನ್ನು ನಮ್ಮ ಕುಟುಂಬ ಸದಾಕಾಲ ಸ್ಮರಿಸುತ್ತೇವೆ ಎಂದು ಹೇಳಿದರು.

 ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ.ಸತೀಶ್, ಡಿಸಿಸಿ ಉಪಾಧ್ಯಕ್ಷ ಕೆ.ಎಂ.ಲೋಕೇಶ್. ಪ್ರಮುಖರಾದ ಸುಜು ತಿಮ್ಮಯ್ಯ, ಸೋಮಯ್ಯ, ದೇವಯ್ಯ, ಓಂಕಾರಪ್ಪ, ತೆನ್ನಿರ ಮೈನಾ, ಹಂಸ, ಸುರೇಶ್ ಇದ್ದರು.