ನಾಪೋಕ್ಲು ಭಾಗದಲ್ಲಿ ಚುರುಕುಗೊಂಡ ಆರಿದ್ರಾ ಮಳೆ: ನದಿ ನೀರಿನ ಮಟ್ಟದಲ್ಲಿ ಏರಿಕೆ: ಹಲವೆಡೆ ಮನೆಗಳಿಗೆ ಹಾನಿ
ವರದಿ:ಝಕರಿಯ ನಾಪೋಕ್ಲು
ನಾಪೋಕ್ಲು: ಕಳೆದ ಎರಡು ದಿನಗಳಿಂದ ನಾಪೋಕ್ಲು ವಿಭಾಗದಲ್ಲಿ ಮಳೆ ಚುರುಕು ಪಡೆದಿದ್ದು ಗ್ರಾಮ ವ್ಯಾಪ್ತಿಯಲ್ಲಿ ಸುರಿದ ಧಾರಾಕಾರ ಮಳೆಗೆ ನದಿ ನೀರಿನ ಮಟ್ಟದಲ್ಲಿ ಮತ್ತೆ ಏರಿಕೆಯಾಗಿದ್ದು ವಿಭಾಗದ ಹಲವು ಗ್ರಾಮಗಳಲ್ಲಿ ಮನೆಗಳಿಗೆ ಹಾನಿ ಸಂಭವಿಸಿ ನಷ್ಟ ಉಂಟಾಗಿರುವ ಬಗ್ಗೆ ವರದಿಯಾಗಿದೆ.
ನಾಪೋಕ್ಲು ಹೋಬಳಿಯ ವ್ಯಾಪ್ತಿಯ ಕೊಳಕೇರಿ ಗ್ರಾಮದ ತಟ್ಟಂಡ ವಿಮಲಾ ಎಂಬುವವರ ವಾಸದ ಮನೆಯ ಮೇಲ್ಛಾವಣಿಯು ಸೋಮವಾರ ಸುರಿದ ಭಾರಿ ಗಾಳಿ ಮಳೆಗೆ ಹಾನಿಯಾಗಿ ನಷ್ಟ ಸಂಭವಿಸಿದೆ.ಚೆಯ್ಯಂಡಾಣೆ ನರಿಯಂದಡ ಗ್ರಾಮ ಪಂಚಾಯಿತಿಗೆ ಒಳಪಟ್ಟ ನಾಪೋಕ್ಲು ಹೋಬಳಿಯ ಕರಡ ಗ್ರಾಮದ ಟಿ.ಡಿ.ಚಿಣ್ಣಪ್ಪ ಎಂಬುವವರ ವಾಸದ ಮನೆಯ ಪಕ್ಕದಲ್ಲಿದ್ದ ಶೌಚಾಲಯಕ್ಕೆ ಸೋಮವಾರ ಸುರಿದ ಬಾರಿ ಗಾಳಿ ಮಳೆಗೆ ಬೃಹತ್ ಗಾತ್ರದ ಮರ ಬಿದ್ದು ಶೌಚಾಲಯಕ್ಕೆ ಹಾನಿಯಾಗಿದೆ ನಷ್ಟ ಉಂಟಾಗಿದೆ. ಅದರಂತೆ ನಾಪೋಕ್ಲು ಹೋಬಳಿ ವ್ಯಾಪ್ತಿಯ
ಕೋಣಂಜಗೇರಿ ಪಾರಾಣೆ ಗ್ರಾಮ ಪಂಚಾಯಿತಿಗೆ ಒಳಪಟ್ಟ ಬಾವಲಿ ಗ್ರಾಮದ ಪಾಂಡಂಡ ಕುಟುಂಬಸ್ಥರ ಐನ್ ಮನೆಯು ಸೋಮವಾರ ಸುರಿದ ಬಾರಿ ಗಾಳಿ ಮಳೆಗೆ ಸಂಪೂರ್ಣ ಕುಸಿದು ಬಿದ್ದು ಹಾನಿಯಾಗಿದೆ. ಐನ್ ಮನೆಯಲ್ಲಿ ಯಾರು ವಾಸ ಇಲ್ಲದಿರುದರಿಂದ ಬಾರಿ ಅನಾಹುತ ತಪ್ಪಿದಂತ್ತಾಗಿದೆ.
ಸ್ಥಳಕ್ಕೆ ನಾಪೋಕ್ಲು ಕಂದಾಯ ಪರಿವಿಕ್ಷಕ ರವಿಕುಮಾರ್ ಹಾಗೂ ಗ್ರಾಮ ಲೆಕ್ಕಿಗೆ ಅಮೃತ, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.ನಾಪೋಕ್ಲುವ್ಯಾಪ್ತಿಯಲ್ಲಿ ಕಳೆದ ಕೆಲವು ದಿನಗಳ ಹಿಂದೆ ಸುರಿದ ಬಾರಿ ಗಾಳಿ ಮಳೆಗೆ ಕಾವೇರಿ ನದಿ ನೀರಿನ ಮಟ್ಟದಲ್ಲಿ ಏರಿಕೆಯಾಗಿ ಚೆರಿಯಪರಂಬು, ನಾಪೋಕ್ಲು ಮೂರ್ನಾಡು ಸಂಪರ್ಕ ರಸ್ತೆಯಲ್ಲಿ ಪ್ರವಾಹ ಬಂದು ಸಂಚಾರ ಸ್ಥಗಿತಗೊಂಡಿತ್ತು. ಬಳಿಕ ಮಳೆ ಬಿಡುವು ನೀಡಿದ್ದರಿಂದ ನದಿ ನೀರಿನ ಮಟ್ಟದಲ್ಲಿ ಇಳಿಕೆಯಾಗಿತ್ತು. ಇದೀಗ ಮತ್ತೆ ಮಳೆ ಚುರುಕು ಪಡೆದಿದ್ದು ಇದರಿಂದ ವಿಭಾಗದಲ್ಲಿರುವ ನದಿ ತೊರೆಗಳಲ್ಲಿ ನೀರಿನ ಪ್ರಮಾಣದಲ್ಲಿ ಮತ್ತೆ ಏರಿಕೆಯಾಗಿದೆ. ಮಳೆ ಇದೇ ರೀತಿ ಮುಂದುವರೆದರೆ ನದಿ ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗಿ ಪ್ರವಾಹ ಆವರಿಸುವ ಸಾಧ್ಯತೆ ಕಂಡುಬಂದಿದೆ.
