ನಾಪೋಕ್ಲು ವ್ಯಾಪ್ತಿಯಲ್ಲಿ ಭಾರಿ ಗಾಳಿ ಮಳೆ ರಸ್ತೆಗೆ ಉರುಳಿದ ಬೃಹತ್ ಗಾತ್ರದ ಮರಗಳು: ವಿದ್ಯುತ್ ಕಂಬಕ್ಕೆ ಹಾನಿ: ಸಂಚಾರಕ್ಕೆ ತೊಡಕು
ವರದಿ:ಝಕರಿಯ ನಾಪೋಕ್ಲು
ನಾಪೋಕ್ಲು : ಜಿಲ್ಲೆಯಾದ್ಯಂತ ಕಳೆದ ಎರಡು ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ನಾಪೋಕ್ಲು ಭಾಗದಲ್ಲಿ ರಸ್ತೆಗೆ ಅಡ್ಡಲಾಗಿ ಮರ ಉರುಳಿ ಬಿದ್ದು ವಾಹನ ಸಂಚಾರಕ್ಕೆ ತೊಡಕುಂಟಾದ ಘಟನೆ ವರದಿಯಾಗಿದೆ.
ನಾಪೋಕ್ಲು ಕಡೆಯಿಂದ ಎಮ್ಮೆಮಾಡು ಬಳಿಯ ಕೂರುಳಿ ಗ್ರಾಮಕ್ಕೆ ತೆರಳುವ ಮುಖ್ಯರಸ್ತೆಯ ಸುಭಾಷ್ ನಗರ ಪೈಸಾರಿ ಬಳಿಯಲ್ಲಿ ಸೋಮವಾರ ಮುಂಜಾನೆ ಸುರಿದ ಬಾರಿ ಗಾಳಿ ಮಳೆಗೆ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಅಡ್ಡಲಾಗಿ ಉರುಳಿ ಬಿದ್ದ ಪರಿಣಾಮ ವಿದ್ಯುತ್ ಕಂಬಕ್ಕೆ ಹಾನಿಯಾಗಿದ್ದು ಕೆಲಕಾಲ ವಾಹನಗಳ ಸಂಚಾರಕ್ಕೆ ತೊಡಕುಂಟಾಯಿತು. ರಸ್ತೆಗೆ ಅಡ್ಡಲಾಗಿ ಮರ ಬಿದ್ದ ಪರಿಣಾಮ ಕೂರುಳಿ ಗ್ರಾಮದಿಂದ ನಾಪೋಕ್ಲು ಕಡೆಗೆ ತೆರಳ ಬೇಕಾದ ವಾಹನಗಳು ಎಮ್ಮೆಮಾಡು,ಚೋನಾಕೆರೆ ಮಾರ್ಗದ ರಸ್ತೆಯ ಮೂಲಕ ನಾಪೋಕ್ಲುವಿಗೆ ಸಂಚರಿಸಬೇಕಾಯಿತು.ನಾಪೋಕ್ಲು ಮಾರುಕಟ್ಟೆ ಬಳಿಯಿಂದ ಚೆರಿಯಪರಂಬು ಗ್ರಾಮಕ್ಕೆ ತೆರಳುವ ರಸ್ತೆಗೆ ಅಡ್ಡಲಾಗಿ ಮರ ಬಿದ್ದು ಸಂಚಾರಕ್ಕೆ ತೊಡಕುಂಟಾಗಿತ್ತು. ರಸ್ತೆಗೆ ಅಡ್ಡಲಾಗಿ ಬಿದ್ದ ಮರ ಮತ್ತು ವಿದ್ಯುತ್ ಕಂಬವನ್ನು ಸ್ಥಳೀಯರು ಹಾಗೂ ಸೆಸ್ಕ್ ಇಲಾಖೆಯ ಸಿಬ್ಬಂದಿಗಳು ತೆರವುಗೊಳಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದರು.
ಅದರಂತೆ ನಾಪೋಕ್ಲುವಿನಿಂದ ಕೈಕಾಡು,ಪಾರಾಣೆ ಮಾರ್ಗವಾಗಿ ವಿರಾಜಪೇಟೆ ತೆರಳುವ ಮುಖ್ಯ ರಸ್ತೆಯ ಬೆಳ್ಳುಮಾಡು ಬಳಿಯ ವಲ್ಲಂಡ ಕೊಟ್ಟ್ ಎಂಬಲ್ಲಿ ಸೋಮವಾರ ಮುಂಜಾನೆ ರಸ್ತೆಗೆ ಅಡ್ಡಲಾಗಿ ಬೃಹತ್ ಗಾತ್ರದ ಮರ ಬಿದ್ದ ಪರಿಣಾಮ ಕೆಲಕಾಲ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಬಳಿಕ ಸ್ಥಳೀಯರು ಹಾಗೂ ಸಾರ್ವಜನಿಕರು ರಸ್ತೆಯಿಂದ ಮರವನ್ನು ಯಂತ್ರೋಪಕರಣಗಳನ್ನು ಬಳಸಿ ತೆರವುಗೊಳಿಸುವ ಮೂಲಕ ಸಾರ್ವಜನಿಕರ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದರು.
ನಾಪೋಕ್ಲು ವಿಭಾಗದ ಹಲವು ಗ್ರಾಮಗಳಲ್ಲಿ ಮರದ ಕೊಂಬೆಗಳು ವಿದ್ಯುತ್ ತಂತಿಯ ಮೇಲೆ ಮುರಿದು ಬಿದ್ದು ವಿದ್ಯುತ್ ಕಂಬಗಳಿಗೆ ಹಾನಿ ಉಂಟಾಗಿದೆ. ನಾಪೋಕ್ಲು ಪಟ್ಟಣಕ್ಕೆ ವಿದ್ಯುತ್ ಒದಗಿಸುವಲ್ಲಿ ಸೆಸ್ಕ್ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಯಶಸ್ವಿಯಾಗಿದ್ದು. ನಾಪೋಕ್ಲು ವಿಭಾಗದ ಹಲವು ಗ್ರಾಮಗಳಲ್ಲಿ ವಿದ್ಯುತ್ ಸಮಸ್ಯೆ ಉಂಟಾಗಿದ್ದು ನಾಪೋಕ್ಲು ಸೆಸ್ಕ್ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಗಲಿರುಳು ಶ್ರಮಪಟ್ಟು ವಿದ್ಯುತ್ ಒದಗಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
