ಪೊನ್ನಂಪೇಟೆ: ಕೆಪಿಎಸ್ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವದ ಸಂಭ್ರಮ
ಪೊನ್ನಂಪೇಟೆ :ಪೊನ್ನಂಪೇಟೆಯ ಕೆ.ಪಿ.ಎಸ್. ಕಿರಿಯ ಪ್ರಾಥಮಿಕ ಶಾಲೆಯಲ್ಲಿ 2025-26 ನೇ ಸಾಲಿನ ಶಾಲಾ ಆರಂಭೋತ್ಸವದ ಪ್ರಯುಕ್ತ ಶಾಲೆಯನ್ನು ತಳಿರು ತೋರಣಗಳಿಂದ ಸಿಂಗರಸಲಾಗಿತ್ತು. ಬೇಸಿಗೆ ರಜೆಯ ಮಜಾ ಅನುಭವಿಸಿ, ಶಾಲೆ ಕಡೆಗೆ ಮುಖಮಾಡಿದ ಮಕ್ಕಳನ್ನು ಶಾಲಾ ಶಿಕ್ಷಕ ವೃಂದ ಹಾಗೂ ಶಾಲಾಭಿವೃದ್ಧಿ ಸಮಿತಿ ವತಿಯಿಂದ ಸಿಹಿ ಹಂಚಿ, ಸಂಭ್ರಮದಿಂದ ಬರಮಾಡಿಕೊಳ್ಳಲಾಯಿತು.
ಈ ಸಂದರ್ಭ ಶಾಲಾ ಮುಖ್ಯೋಪಾಧ್ಯಾಯ ಕೆ. ಎಂ. ವಿಜಯ ಅವರು ಮಾತನಾಡಿ, ಶೈಕ್ಷಣಿಕ ವರ್ಷದ ಶಾಲಾ ದಿನಗಳು ಆರಂಭವಾಗಿದ್ದು, ಆರಂಭಿಕ ದಿನದಿಂದಲೇ ಪಾಠ ಪ್ರವಚನಗಳು ನಡೆಯುವುದರಿಂದ ಎಲ್ಲಾ ಪೋಷಕರು ಕಡ್ಡಾಯವಾಗಿ ತಪ್ಪದೇ ಮಕ್ಕಳನ್ನು ಶಾಲೆಗೆ ಕಳುಹಿಸಬೇಕೆಂದು ಸಲಹೆ ನೀಡಿದರು.
ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಜುನೈದ್ ಅವರು ಮಾತನಾಡಿ, ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದ ಸದಾ ಮಕ್ಕಳ ಏಳಿಗೆಗೆ ಶ್ರಮಿಸುತ್ತಿದ್ದು, ಪೋಷಕರು ಇವರೊಂದಿಗೆ ಕೈಜೋಡಿಸಬೇಕು ಶಾಲೆಯಲ್ಲಿ ಶಿಕ್ಷಕರು ಕಲಿಸಿದ ಪಾಠ ಪ್ರವಚನಗಳನ್ನು ವಿದ್ಯಾರ್ಥಿಗಳು ಉತ್ತಮವಾಗಿ ಅಭ್ಯಸಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದರು.
ಪಟ್ಟಣ ಪಂಚಾಯಿತಿ ಸದಸ್ಯ ರಾಮಕೃಷ್ಣ ಅವರು ಮಾತನಾಡಿ, ಎಲ್ಲಾ ಮಕ್ಕಳು ಸಂತೋಷದಿಂದ ಶಾಲೆಗೆ ಬರಬೇಕು ಹಾಗೆಯೇ ಮನೆಯಲ್ಲಿಯೇ ಉಳಿದಿರುವ ಮಕ್ಕಳನ್ನು ಶಾಲೆಗೆ ಕರೆತರಬೇಕು. ಮಕ್ಕಳ ಮುಂದಿನ ಭವಿಷ್ಯ ಉಜ್ವಲಗೊಳ್ಳಲು ವಿದ್ಯೆ ಮುಖ್ಯ ಎಂದರು.
ಈ ಸಂದರ್ಭ ಶಾಲಾ ಎಸ್.ಡಿ.ಎಂ.ಸಿ ಸದಸ್ಯರಾದ ಎಂ. ಸಿ. ಕನ್ಯಾಕುಮಾರಿ , ಎ.ಎಸ್. ಶಿಲ್ಪ , ಎಮ್.ಎನ್. ಪ್ರಮೀಳಾ , ಟಿ ಆರ್ ಮಂಜುಳಾ , ಎಂ ಡಿ. ಮಂಜುನಾಥ್, ಶಿಕ್ಷಕಿಯರಾದ ವಿ.ಜೆ. ಫಿಲೋಮಿನಾ , ಎಂ.ಇ. ಝಾನ್ಸಿ , ಐ. ಎಂ. ರೋಸಿ , ಎಂ. ಎನ್. ಶಕೀಲಾ ಬಾನು , ಹೆಚ್. ಸಿ. ಮಂಗಳಾoಗಿ , ಸಿ.ಪಿ. ಗಂಗಮಣಿ , ಕೆ.ಆರ್.ವಿನಿತ , ಶಿಕ್ಷಕ ನಿಂಗರಾಜು , ದೈಹಿಕ ಶಿಕ್ಷಕ ಮಹೇಶ್ , ರೇಖಾ , ಅತಿಥಿ ಶಿಕ್ಷಕರು ಮತ್ತು ಪೋಷಕರು ಹಾಜರಿದ್ದರು.
ವರದಿ :- ಚಂಪಾ ಗಗನ, ಪೊನ್ನಂಪೇಟೆ.
