ಸೋಮವಾರಪೇಟೆ: ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಸನ್ಮಾನ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ಸೋಮವಾರಪೇಟೆ: ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಸನ್ಮಾನ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರ
ಸೋಮವಾರಪೇಟೆ: ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಸನ್ಮಾನ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ಸೋಮವಾರಪೇಟೆ: ಜೇಸೀ ಪುಷ್ಪಗಿರಿ ನೇತೃತ್ವದಲ್ಲಿ, ಡಾಲ್ಫೀನ್ಸ್ ಸ್ಪೋರ್ಟ್ಸ್ ಕ್ಲಬ್ ಹಾಗೂ ಒಕ್ಕಲಿಗರ ಯುವ ವೇದಿಕೆಯ ಆಶ್ರಯದಲ್ಲಿ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ನಡೆಸಿ, ಪ್ರಮುಖ ರಕ್ತದಾನಿಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ರಕ್ತನಿಧಿ ಘಟಕದ ವೈದ್ಯಾಧಿಕಾರಿ ಡಾ. ಕರುಂಬಯ್ಯ ಮಾತನಾಡಿ, “2004ರಿಂದ ಜೂನ್ 14 ಅನ್ನು ವಿಶ್ವದಾದ್ಯಂತ ರಕ್ತದಾನಿಗಳ ದಿನವಾಗಿ ಆಚರಿಸಲಾಗುತ್ತಿದೆ. ಈ ದಿನ ರಕ್ತದ ಗುಂಪುಗಳನ್ನು ಕಂಡುಹಿಡಿದ ವಿಜ್ಞಾನಿ ಕಾರ್ಲ್ ಲ್ಯಾಂಡ್ಸ್‌ಟೈನರ್ ಅವರ ಜನ್ಮದಿನ” ಎಂದು ಹೇಳಿದರು. ಈ ವರ್ಷದ ಘೋಷವಾಕ್ಯ “ರಕ್ತ ನೀಡಿ - ಭರವಸೆ ನೀಡಿ - ಒಟ್ಟಾಗಿ ಜೀವಗಳನ್ನು ಉಳಿಸೋಣ” ಎಂಬುದಾಗಿದ್ದು, ಸಮಾಜದಲ್ಲಿ ರಕ್ತ

ದಾನದ ಬಗ್ಗೆ ಹೆಚ್ಚು ಅರಿವು ಮೂಡಬೇಕೆಂದು ಅವರು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷೆ ಜೇಸೀ ಸಂಸ್ಥೆಯ ಜಗದಾಂಬ ಗುರುಪ್ರಸಾದ್ ಮಾತನಾಡಿ, ಗರ್ಭಿಣಿಯರು, ಅಪಘಾತ ಪೀಡಿತರು, ಶಸ್ತ್ರಚಿಕಿತ್ಸೆಗೆ ಒಳಗಾಗುವವರು ಮತ್ತು ರಕ್ತಹೀನತೆಯಿಂದ ಬಳಲುವವರಿಗೆ ಹೆಚ್ಚು ರಕ್ತದ ಅಗತ್ಯವಿರುತ್ತದೆ ಎಂದು ನೆನೆಸಿದರು.

ಕಾರ್ಯಕ್ರಮದಲ್ಲಿ 15 ಬಾರಿ ರಕ್ತದಾನ ಮಾಡಿದ ಆಸ್ಪತ್ರೆಯ ತಂತ್ರಜ್ಞ ಚಂದ್ರಾವತಿ ಹಾಗೂ 32 ಬಾರಿ ರಕ್ತದಾನ ಮಾಡಿದ ಪತ್ರಕರ್ತ ವಿಜಯ ಹಾನಗಲ್ ಅವರಿಗೆ ಜೇಸೀ ಸಾಮಾಜಿಕ ಸೇವಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ವಿಜಯ ಹಾನಗಲ್ ಮಾತನಾಡಿ, “ರಕ್ತಕ್ಕೆ ಪರ್ಯಾಯ ಇಲ್ಲ. ವಿಜ್ಞಾನ ಎಷ್ಟೇ ಮುಂದುವರಿದರೂ ಮನುಷ್ಯನ ರಕ್ತಕ್ಕೆ ಸಮಾನವಾದದ್ದನ್ನು ನಿರ್ಮಾಣ ಮಾಡಲಾಗಿಲ್ಲ. ಆರೋಗ್ಯವಂತರಾದ ಪ್ರತಿ ವ್ಯಕ್ತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬೇಕು” ಎಂದು ಅಭಿಪ್ರಾಯಸಿದರು .

ವೇದಿಕೆಯಲ್ಲಿ ಡಾ. ಮಂಜುಳಾ, ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಚಕ್ರವರ್ತಿ ಸುರೇಶ್, ಡಾಲ್ಫೀನ್ಸ್ ಕ್ಲಬ್ ಅಧ್ಯಕ್ಷ ಮಹೇಶ್, ಕಾರ್ಯದರ್ಶಿ ವಿನುತ ಸುದೀಪ್, ಮಹಿಳಾ ಘಟಕದ ಜ್ಯೋತಿ ರಾಜೇಶ್ ಉಪಸ್ಥಿತರಿದ್ದರು. ದಿಶಾ ಗಿರೀಶ್ ಜೇಸಿಐ ಧ್ಯೇಯ ವಾಚನ ನಿರ್ವಹಿಸಿದರು.ಶಿಬಿರದಲ್ಲಿ 50ಕ್ಕೂ ಹೆಚ್ಚು ಮಂದಿ ಯುವಕರು ಹಾಗೂ ಮಹಿಳೆಯರು ಉತ್ಸಾಹದಿಂದ ಭಾಗವಹಿಸಿ ರಕ್ತದಾನ ಮಾಡಿ ಸಮಾಜಕ್ಕೆ ಮಾದರಿ ಪ್ರದರ್ಶಿಸಿದರು.