10ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ: ದಿನನಿತ್ಯ ಆಯುರ್ವೇದ ಆಚರಣೆ ಮಾಡುವುದು ನಮ್ಮೆಲ್ಲರ ಆಶಯ: ಜಿಲ್ಲಾ ನೀಮಾ ಅಧ್ಯಕ್ಷ ಡಾ.ರಾಜಾರಾಮ್

ಮಡಿಕೇರಿ:-ದಿನನಿತ್ಯ ಆಯುರ್ವೇದ ಆಚರಣೆ ಮಾಡುವುದು ನಮ್ಮೆಲ್ಲರ ಆಶಯ ಎಂದು ಕೊಡಗು ಜಿಲ್ಲಾ ನೀಮಾ ಅಧ್ಯಕ್ಷರಾದ ಡಾ.ರಾಜಾರಾಮ್ ಅವರು ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಆಯುಷ್ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಸರ್ಕಾರಿ ಆಯುರ್ವೇದ ಆಸ್ಪತ್ರೆಯ ಆವರಣದಲ್ಲಿ ‘ಜನರಿಗಾಗಿ ಮತ್ತು ಜಗತ್ತಿಗಾಗಿ ಆಯುರ್ವೇದ ಎಂಬ ಘೋಷವಾಕ್ಯದೊಂದಿಗೆ ಸೋಮವಾರ ನಡೆದ 10ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಆಯುರ್ವೇದವನ್ನು ದಿನನಿತ್ಯ ಪಾಲಿಸುವಂತಾಗಬೇಕು ಮತ್ತು ಸಮಯಕ್ಕೆ ಸರಿಯಾಗಿ ಆಹಾರವನ್ನು ಸೇವಿಸಿದರೆ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ. ಆ ನಿಟ್ಟಿನಲ್ಲಿ ಯೋಗ ಮತ್ತು ಪ್ರಾಣಾಯಾಮ ಮಾಡುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳ ಬಹುದಾಗಿದೆ ಎಂದರು. ಜಿಲ್ಲಾ ಆಯುಷ್ ಅಧಿಕಾರಿ ಡಾ. ಶೈಲಜಾ ಜಿ. ಅವರು ಮಾತನಾಡಿ ಇತ್ತೀಚಿನ ದಿನಗಳಲ್ಲಿ ಆಯುರ್ವೇದಕ್ಕೆ ಮಾನ್ಯತೆ ದೊರೆತಿರುವುದು ವಿಶೇಷವಾಗಿದೆ. ನಮ್ಮ ಶರೀರ ಮತ್ತು ಮನಸ್ಸು ಒಂದೇ ಸಮತೋಲನವಾಗಿದ್ದರೆ ಆರೋಗ್ಯಕರವಾಗಿರಲು ಸಾಧ್ಯ ಎಂದು ಹೇಳಿದರು.
ಜನರಿಗಾಗಿ ಮತ್ತು ಜಗತ್ತಿಗಾಗಿ ಆಯುರ್ವೇದ ಎಂದರು. ತಾಲೂಕು ಆಸ್ಪತ್ರೆಗಳಲ್ಲಿ 8 ಸರ್ಕಾರಿ ಆಯುರ್ವೇದ ಆಯುಷ್ ಮಂದಿರಗಳಿಗೆ ಭೇಟಿ ನೀಡಿ ಸಾರ್ವಜನಿಕರಿಗೆ ಹಾಗೂ ಅಂಗನವಾಡಿ, ಕಾಲೇಜುಗಳಿಗೆ ಆಯುರ್ವೇದ ಬಗ್ಗೆ ಅರಿವು ಮೂಡಿಸಲಾಗಿತ್ತು. ಸಾಮಾನ್ಯರಲ್ಲಿ ಆಯುರ್ವೇದ ಮತ್ತು ಆಯುಷ್ ಪದ್ಧತಿಯ ಮಹತ್ವವನ್ನು ತಿಳಿಸಿ ಅರಿವು ಮೂಡಿಸುವ ಉದ್ದೇಶದಿಂದ ಆಯುರ್ವೇದ ದಿನವನ್ನು ಎಲ್ಲೆಡೆ ಆಚರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ನಗರಸಭೆ ಸದಸ್ಯರಾದ ಸಬಿತಾ ಅವರು ಮಾತನಾಡಿ ಆಯುರ್ವೇದ ಎಂಬುವುದು ಸಾಧಾರಣವಾಗಿ ಇದ್ದರೂ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂದು ಹೇಳಿದರು. ಜಿಲ್ಲಾ ಆಯುಷ್ ಅಧೀಕ್ಷಕರಾದ ಕಾವೇರಪ್ಪ, ಆಶಾ ಕಾರ್ಯಕರ್ತರು, ಸಿಬ್ಬಂದಿ ವರ್ಗದವರು ಇತರರು ಇದ್ದರು. ದೀಪ ಬೆಳಗುವುದರ ಮೂಲಕ ಕಾರ್ಯಕ್ರಮ ಪ್ರಾರಂಭಿಸಿದರು. ಉಪಮುಖ್ಯ ವೈದ್ಯಾಧಿಕಾರಿ ಡಾ|| ಶುಭಾ.ಕೆ.ಜಿ. ಪ್ರಾರ್ಥಿಸಿದರು. ಸರಸ್ವತಿ ಸ್ವಾಗತಿಸಿದರು. ಡಾ.ಅರುಣ್ ನಿರೂಪಿಸಿ, ವಂದಿಸಿದರು.