14ನೇ ವರ್ಷದ ರೋಮನ್ ಕ್ಯಾಥೋಲಿಕ್ ಕ್ರಿಕೆಟ್ ಪಂದ್ಯಾಟ: ಸಮುದಾಯದ ಯುವಕರನ್ನು ಒಂದುಗೂಡಿಸಲು ಕ್ರೀಡೆಯಿಂದ ಸಾಧ್ಯ: ಎ.ಎಸ್ ಪೊನ್ನಣ್ಣ

ಸುಂಟಿಕೊಪ್ಪ; ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಆಟದ ಮೈದಾನದಲ್ಲಿ ಆಯೋಜನೆಗೊಂಡಿದ್ದ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ರವರ ಆಶ್ರಯದಲ್ಲಿ ನಡೆಯುತ್ತಿರುವ, 14ನೇ ವರ್ಷದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟದ ಮುಖ್ಯ ಅತಿಥಿಯಾಗಿ, ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಭಾಗವಹಿಸಿದರು. ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ರವರ ವಿಶೇಷ ಆಹ್ವಾನದ ಮೇರೆಗೆ, ಇಂದು ಮಡಿಕೇರಿ ಕ್ಷೇತ್ರದ ಸುಂಟಿಕೊಪ್ಪದಲ್ಲಿ ನಡೆಯುತ್ತಿರುವ ಈ ಪಂದ್ಯಾಟದ ಮೈದಾನಕ್ಕೆ ಆಗಮಿಸಿದ ಮಾನ್ಯ ಶಾಸಕರು ಪಂದ್ಯಾಟವನ್ನು ವೀಕ್ಷಿಸಿದರು.
ಬಳಿಕ ಮಾತನಾಡಿದ ಮಾನ್ಯ ಶಾಸಕರು, ವಿಶ್ವಾದ್ಯಂತ ಪ್ರಖ್ಯಾತವಾಗಿರುವ ಕ್ರಿಕೆಟ್ ಆಟದಲ್ಲಿ ಕೊಡಗಿನ ಹಲವರು ತಮ್ಮ ಛಾಪು ಮೂಡಿಸಿದ್ದು, ಇಂತಹ ಕ್ರೀಡಾಕೂಟಗಳು ಯುವಕರ ಪ್ರತಿಭೆಯನ್ನು ಗುರುತಿಸಲು ಸಹಕಾರಿಯಾಗಲಿದೆ. ಇತ್ತೀಚಿನ ದಿನಗಳಲ್ಲಿ ಸಮುದಾಯಗಳ ವತಿಯಿಂದ ಆಯೋಜನೆಗೊಳ್ಳುತ್ತಿರುವ ಕ್ರಿಕೆಟ್ ಪಂದ್ಯಾಟಗಳು ಅದ್ಭುತ ಯಶಸ್ಸು ಕಾಣುವುದು ಮಾತ್ರವಲ್ಲದೆ, ಸಮುದಾಯದ ಯುವಕರನ್ನು ಒಟ್ಟುಗೂಡಿಸಿ ಒಗ್ಗಟ್ಟು ಪ್ರದರ್ಶಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಬಣ್ಣಿಸಿದರು. ಕ್ರೀಡೆಯು ಸದಾ ಮನೋಲ್ಲಾಸಕ್ಕೆ ಕಾರಣವಾಗಿದ್ದು, ಕ್ರೀಡೆಯಲ್ಲಿ ಯುವಕರು ತಮ್ಮನ್ನು ತಾವು ತೊಡಗಿಸಿಕೊಳ್ಳುವುದರಿಂದ ಇತರ ದುಶ್ಚಟಗಳಿಂದ ದೂರ ಉಳಿಯಲು ಸಹಕಾರಿಯಾಗಲಿದೆ ಮಾತ್ರವಲ್ಲ ತಮ್ಮ ಮಾನಸಿಕ ಸಮತೋಲನವನ್ನು ಕಾಯ್ದುಕೊಳ್ಳಲು ಕ್ರೀಡೆಯು ಸಹಕಾರಿಯಾಗಲಿದೆ ಎಂದು ಹೇಳಿದರು. ಪಂದ್ಯಾಟದಲ್ಲಿ ಭಾಗವಹಿಸಿದ ಎಲ್ಲರಿಗೂ ಶುಭ ಕೋರಿದ ಮಾನ್ಯ ಶಾಸಕರು ಆಯೋಜಕರ ಈ ಪ್ರಯತ್ನವನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಜಾನ್ಸನ್ ಪಿಂಟೋ,ಎಲ್ಲಾ ಗಣ್ಯರು, ಕಾರ್ಯಕ್ರಮ ಆಯೋಜಕರು ಹಾಗೂ ಕ್ರೀಡಾ ಪ್ರೇಮಿಗಳು ಉಪಸ್ಥಿತರಿದ್ದರು.
What's Your Reaction?






