ಪೊನ್ನಂಪೇಟೆಯಲ್ಲಿ ವಿಜೃಂಭಣೆಯ ಗೌರಿ-ಗಣೇಶೋತ್ಸವ

ಪೊನ್ನಂಪೇಟೆ ;ಪಟ್ಟಣದಲ್ಲಿ ವಿಜೃಂಭಣೆಯಿಂದ ನಡೆದ ಗೌರಿ - ಗಣೇಶೋತ್ಸವದಲ್ಲಿ ಪೊನ್ನಂಪೇಟೆ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳ ಸಾವಿರಾರು ಜನರು ಪಾಲ್ಗೊಂಡು ಡಿ ಜೆ, ವಾಲಗ, ಬ್ಯಾಂಡ್ ಸೆಟ್ ತಾಳಕ್ಕೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಪೊನ್ನಂಪೇಟೆ ವ್ಯಾಪ್ತಿಯ ವಿವಿಧ 9 ಗೌರಿ ಗಣೇಶೋತ್ಸವ ಸಮಿತಿಗಳು ವಿದ್ಯುತ್ ದೀಪಾಲಂಕೃತ ಮಂಟಪಗಳಲ್ಲಿ, ಮುಖ್ಯ ರಸ್ತೆಗಳಲ್ಲಿ ಕಿಕ್ಕಿರಿದು ನಿಂತಿದ್ದ ಜನ ಸಾಗರದ ನಡುವೆ ಮೆರವಣಿಗೆ ನಡೆಸಿ ಬೆಳಗಿನ ಜಾವ ಗೌರಿ ಕೆರೆಯಲ್ಲಿ ವಿಸರ್ಜನೆ ಮಾಡುವ ಮೂಲಕ ಗಣೇಶೋತ್ಸವಕ್ಕೆ ತೆರೆ ಎಳೆಲಾಯಿತು.
ಸಂಜೆ 6 ಗಂಟೆಯಿಂದಲೇ ತಮ್ಮ ತಮ್ಮ ಬಡಾವಣೆಯಿಂದ ಡಿಜೆ, ಬ್ಯಾಂಡ್ ಸೆಟ್, ವಾಲಗ ನಾದಕ್ಕೆ ಹೆಜ್ಜೆ ಹಾಕುತ್ತ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಹೊರಟು ಬಸವೇಶ್ವರ ದೇವಸ್ಥಾನದ ಸುತ್ತು ಪ್ರದಕ್ಷಿಣೆ ಹಾಕಿದ ನಂತರ ಗೌರಿ ಕೆರೆಗೆ ತೆರಳಿ ಗೌರಿ ಗಣೇಶ ಮೂರ್ತಿಗಳ ವಿಸರ್ಜನೆ ಮಾಡಲಾಯಿತು. ಕೃಷ್ಣನಗರದ ಕೃಷ್ಣಯುವಕರ ಸಂಘದ ವತಿಯಿಂದ 33 ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ಶೋಭಾಯಾತ್ರೆಯನ್ನು ನಡೆಸಲಾಯಿತು. ಶೋಭಾಯಾತ್ರೆಯಲ್ಲಿ ಪ್ರದರ್ಶನಗೊಂಡ ಧಾರ್ಮಿಕ ಹಿನ್ನೆಲೆಯ ಕಥಾನಕ ಪ್ರೇಕ್ಷಕರ ಗಮನ ಸೆಳೆಯಿತು. ಬಸವೇಶ್ವರ ದೇವಸ್ಥಾನ ಸೇರಿದಂತೆ ಕೃಷ್ಣ ನಗರದ ಶ್ರೀ ಕೃಷ್ಣ ಯುವಕರ ಸಂಘ, ಶಿವ ಕಾಲೋನಿಯ ಶಿವ ಯುವಕ ಸಂಘ, ಎಂ.ಜಿ.ನಗರದ ಯುವ ಶಕ್ತಿ ಯುವಕ ಸಂಘ, ಕಾಟ್ರಕೊಲ್ಲಿ ಗಜಮುಖ ಗೆಳೆಯರ ಬಳಗ, ಜೋಡುಬೀಟಿ ಶ್ರೀ ವಿನಾಯಕ ಯುವಕರ ಸಂಘ ಹಾಗೂ ಕಾವೇರಿ ನಗರದ ಗಜಾನನ ಸ್ನೇಹಿತರ ಬಳಗ, ಪೊನ್ನಂಪೇಟೆ ಶ್ರೀ ವಿಘ್ನೇಶ್ವರ ವಾಹನ ಚಾಲಕ ಮತ್ತು ಮಾಲೀಕರ ಸಂಘ, ಜನತಾ ಕಾಲೋನಿಯ ವಿನಾಯಕ ಬಳಗ ವಿದ್ಯುತ್ ದೀಪಾಲಂಕೃತ ರಥಗಳಲ್ಲಿ ಗೌರಿ ಗಣೇಶ ಮೂರ್ತಿಯನ್ನು ತಮ್ಮ ತಮ್ಮ ಬಡಾವಣೆಗಳಲ್ಲಿ ಮೆರವಣಿಗೆ ನಡೆಸಿದ ನಂತರ ಮುಖ್ಯ ರಸ್ತೆಯ ಮೂಲಕ ತೆರಳಿ ಗೌರಿಕೆರೆಯಲ್ಲಿ ವಿಸರ್ಜನೆ ನಡೆಸಿದವು. ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ಪೊನ್ನಂಪೇಟೆ ಶ್ರೀ ಬಸವೇಶ್ವರ ದೇವಸ್ಥಾನ ವತಿಯಿಂದ ಏರ್ಪಡಿಸಿದ್ದ ಮ್ಯಾಜಿಕ್ ಶೋ ನೋಡುಗರನ್ನು ಮಂತ್ರ ಮುಗ್ಧರನ್ನಾಗಿಸಿತು. ನೃತ್ಯ ಶಿಕ್ಷಕಿ ಲಿದಿನಾ ನೇತೃತ್ವದ ಸುವೃತ ನಾಟ್ಯಾಲಯದ ವಿದ್ಯಾರ್ಥಿಗಳು ನಡೆಸಿಕೊಟ್ಟ ಭರತ ನಾಟ್ಯ ಕಾರ್ಯಕ್ರಮ ನೆರೆದಿದ್ದವರನ್ನು ರಂಜಿಸಿತು. ತಮ್ಮ ತಮ್ಮ ಬಡಾವಣೆಗಳಿಂದ ಡಿಜೆ ಸದ್ದಿಗೆ ಹೆಜ್ಜೆ ಹಾಕುತ್ತ ಬರುತ್ತಿದ್ದ ಯುವ ಸಮೂಹಕ್ಕೆ ರಾತ್ರಿ 10 ಗಂಟೆಯ ನಂತರ ಪೊಲೀಸರು ಡಿಜೆ ಬಂದ್ ಮಾಡಿಸಿದ ಕಾರಣ ಅತ್ತ ಡಿಜೆ ಗೆ ಕೊಟ್ಟ ಹಣವೂ ವ್ಯರ್ಥವಾಯಿತು. ಇತ್ತ ಡಿಜೆ ಇಲ್ಲದೆ ಯುವಕರಿಗೆ ನಿರಾಸೆಯೂ ಆಯಿತು. ಡಿಜೆ ಅಳವಡಿಸಿದ್ದ ಸಮಿತಿಯವರು ಮತ್ತೆ ಮತ್ತೆ ಮನವಿ ಮಾಡಿದರೂ ಡಿ.ಜೆ ಮುಂದುವರೆಸಲು ಪೊಲೀಸರು ಅನುಮತಿ ನೀಡಲಿಲ್ಲ. ಡಿಜೆ ಬಂದ್ ಆಗುತ್ತಿದ್ದಂತೆ ಕಿಕ್ಕಿರಿದು ತುಂಬಿದ್ದ ಜನಸ್ತೋಮ ಸ್ವಲ್ಪ ಸ್ವಲ್ಪವೇ ಕರಗಲಾರಂಭಿಸಿತು.
ಬ್ಯಾಂಡ್ ಸೆಟ್ ಜೊತೆ ಮೆರವಣಿಗೆ ಹೊರಟ ಸಮಿತಿಯವರು ಯಾವುದೇ ತೊಂದರೆ ಇಲ್ಲದೆ ಕುಣಿದು ಕುಪ್ಪಳಿಸುತ್ತ ಕೊನೆವರೆಗೂ ಗಣೇಶೋತ್ಸವದಲ್ಲಿ ಸಂಭ್ರಮಿಸಿದರು. ಯಾವುದೇ ರೀತಿಯ ಗಲಭೆಗಳಿಗೆ ಅವಕಾಶವಾಗದ ರೀತಿಯಲ್ಲಿ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಕೈಗೊಂಡಿದ್ದರು. ವೀರಾಜಪೇಟೆ ಡಿ ವೈ ಎಸ್ ಪಿ ಮಹೇಶ್ ಕುಮಾರ್ ಮಾರ್ಗದರ್ಶನ ದಲ್ಲಿ ಗೋಣಿಕೊಪ್ಪಲು ವೃತ್ತ ನಿರೀಕ್ಷಕ ಶಿವರಾಜ್.ಆರ್ ಮುಧೋಳ್ ಹಾಗೂ ಕುಟ್ಟ ವೃತ್ತ ನಿರೀಕ್ಷಕ ಶಿವ ರುದ್ರಪ್ಪ ನೇತೃತ್ವದಲ್ಲಿ, ಪೊನ್ನಂಪೇಟೆ ಠಾಣಾಧಿಕಾರಿ ಜಿ. ನವೀನ್ , ವೀರಾಜಪೇಟೆ ಗ್ರಾಮಾಂತರ ಠಾಣಾಧಿಕಾರಿ ಲತಾ, ವೀರಾಜಪೇಟೆ ನಗರ ಠಾಣಾಧಿಕಾರಿ ಪ್ರಮೋದ್ ಕುಮಾರ್, ವೀರಾಜಪೇಟೆ ನಗರ ಅಪರಾಧ ವಿಭಾಗದ ಠಾಣಾಧಿಕಾರಿ ಕಾವೇರಪ್ಪ, ವಾಣಿಶ್ರೀ, ಗೋಣಿಕೊಪ್ಪ ಠಾಣಾಧಿಕಾರಿ ಪ್ರದೀಪ್ ಕುಮಾರ್, ಶ್ರೀಮಂಗಲ ಠಾಣಾಧಿಕಾರಿ ರವೀಂದ್ರ ಹಾಗೂ ಕುಟ್ಟ ಠಾಣಾಧಿಕಾರಿ ಕಾರ್ಯಪ್ಪ ಹಾಗೂ ಸಿಬ್ಬಂದಿ ಬಂದೋಬಸ್ತ್ ಕೈಗೊಂಡಿದ್ದರು.
ವರದಿ:ಚಂಪಾ ಗಗನ ಪೊನ್ನಂಪೇಟೆ