ಹೋಟೆಲ್‌ನಲ್ಲಿ ಮಲಗಿದ್ದಲ್ಲೇ ಯುವಕನ ಭೀಕರ ಹತ್ಯೆ!

ಹೋಟೆಲ್‌ನಲ್ಲಿ ಮಲಗಿದ್ದಲ್ಲೇ ಯುವಕನ ಭೀಕರ ಹತ್ಯೆ!
Photo credit: TV09 (ಫೋಟೋ:ಮೃತ ಯುವಕ)

ರಾಮನಗರ: ಇಲ್ಲಿನ ಸಮೀಪದ ಕದಂಬ ಹೋಟೆಲ್‌ನಲ್ಲಿ ತಡರಾತ್ರಿ ನಡೆದ ಸೆಕ್ಯೂರಿಟಿ ಗಾರ್ಡ್ ಹತ್ಯೆ ಪ್ರಕರಣ ಸ್ಥಳೀಯರಲ್ಲಿ ಭೀತಿಯನ್ನೆಬ್ಬಿಸಿದೆ. ಮಲಗಿದ್ದಲ್ಲೇ ಯುವಕನನ್ನು ದುಷ್ಕರ್ಮಿಗಳು ಕೊಲೆಮಾಡಿರುವ ಘಟನೆ ನಡೆದಿದ್ದು, ಪೊಲೀಸರು ಹಲವು ಆಯಾಮಗಳಿಂದ ತನಿಖೆ ಪ್ರಾರಂಭಿಸಿದ್ದಾರೆ.

ಮೃತನನ್ನು ಚನ್ನಪಟ್ಟಣ ತಾಲ್ಲೂಕಿನ ಕೊಂಡಾಪುರ ಮೂಲದ ನಿಶಾಂತ್‌ (25) ಎಂದು ಗುರುತಿಸಲಾಗಿದೆ. ಕಳೆದ ಎರಡುವರೆ ತಿಂಗಳಿಂದ ಹೋಟೆಲ್‌ನಲ್ಲಿ ಗಾರ್ಡ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಆತ, ಗುರುವಾರ ರಾತ್ರಿ ಎಂದಿನಂತೆ ಕೆಲಸಕ್ಕೆ ಬಂದಿದ್ದ. ರಾತ್ರಿ 12 ಗಂಟೆ ಹೊತ್ತಿಗೆ ಹಾಲು ಇಳಿಸಿಕೊಂಡ ನಂತರ ಹೋಟೆಲ್‌ ಆವರಣದಲ್ಲಿ ವಿಶ್ರಾಂತಿಗೆ ಮಲಗಿದ್ದ ನಿಶಾಂತ್‌ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ.

ಅಪರಾಧಿಗಳು ನಿಶಾಂತ್‌ನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ಬಳಿಕ ಹೋಟೆಲ್‌ನ ಸಿಸಿಟಿವಿ ಡಿವಿಆರ್‌ ಕೊಂಡೊಯ್ದಿದ್ದಾರೆ. ಇದರಿಂದ ಅಪರಾಧ ಯೋಜಿತವಾಗಿರಬಹುದೆಂಬ ಅನುಮಾನಗಳು ಗಟ್ಟಿಯಾಗಿವೆ. ಸ್ಥಳದಲ್ಲಿ ಬಿದ್ದ ರಕ್ತದ ಗುರುತುಗಳು, ಸುಳಿವುಗಳು ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ಮಾಡಿವೆ.

ನಿಶಾಂತ್ ಕೆಲವು ದಿನಗಳ ಹಿಂದೆ ಒಬ್ಬ ಮಹಿಳೆಗೆ ವಾಟ್ಸಪ್ ಮೂಲಕ ಮೆಸೇಜ್ ಕಳುಹಿಸಿದ್ದ ವಿಚಾರ ಸ್ಥಳೀಯ ಪೊಲೀಸ್ ಠಾಣೆಗೆ ತಲುಪಿತ್ತು. ಈ ಸಂಬಂಧ ಅವನನ್ನು ಕರೆಸಿ ಪೊಲೀಸರು ಎಚ್ಚರಿಕೆ ನೀಡಿ ಬಿಟ್ಟಿದ್ದರು. ಗ್ರಾಮದಲ್ಲಿ ಯಾರೊಂದಿಗೂ ಯುವಕನಿಗೆ ಯಾವುದೇ ವೈಷಮ್ಯ ಇರಲಿಲ್ಲ ಎಂದು ತಿಳಿದು ಬಂದಿದೆ.

ಘಟನೆಯ ನಂತರ ರಾಮನಗರ ಎಸ್‌ಪಿ ಶ್ರೀನಿವಾಸ್ ಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶ್ವಾನಪಡೆ ಹಾಗೂ ಫಾರೆನ್ಸಿಕ್ ತಂಡದ ಸಹಕಾರದಿಂದ ಸಾಕ್ಷ್ಯ ಸಂಗ್ರಹಣೆ ನಡೆಯುತ್ತಿದ್ದು, ಹೋಟೆಲ್‌ ಸುತ್ತಮುತ್ತ ಹೆಚ್ಚಿನ ಗಸ್ತು ಹೆಚ್ಚಳ ಮಾಡಲಾಗಿದೆ.

ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ವೈಯಕ್ತಿಕ ದ್ವೇಷ, ಮಹಿಳೆಯೊಂದಿಗಿನ ಸಂಬಂಧ, ಹಣಕಾಸು ವಿಷಯ ಸೇರಿ ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರೆಸಿದ್ದು, ಅಪರಾಧಿಗಳ ಬಂಧನಕ್ಕಾಗಿ ಪೊಲೀಸರು ಬಲೆಬೀಸಿದ್ದಾರೆ.