ಆಸ್ತಿಗಾಗಿ ಸಹೋದರರ ಕಲಹ:ಗುಂಡೇಟಿನಲ್ಲಿ ಅಂತ್ಯ
ಪೊನ್ನಂಪೇಟೆ :-ಆಸ್ತಿ ವಿಚಾರದಲ್ಲಿ ಕಲಹವಾಗಿ ಸಹೋದರ ತನ್ನ ಮತ್ತಿಬ್ಬರು ಸಹೋದರರ ಮೇಲೆ ಗುಂಡು ಹಾರಿಸಿ ಗಾಯಗೊಳಿಸಿರುವ ಘಟನೆ ಪೊನ್ನಂಪೇಟೆ ತಾಲೂಕಿನ ಹುದಿಕೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೆಳ್ಳೂರು ಗ್ರಾಮದಲ್ಲಿ ನಡೆದಿದೆ. ಬಾಳೇರ ರೋಷನ್ ಮತ್ತು ಸಚಿನ್ ಗಾಯಗೊಂಡ ಸಹೋದರರಾಗಿದ್ದಾರೆ. ಬಾಳೇರ ರೋಷನ್, ಸಚಿನ್ ಮತ್ತು ಬಾಳೇರ ಟಿಮ್ಸನ್ ಅವರುಗಳು ಸೋದರ ಸಂಬಂಧಿಗಳಾಗಿದ್ದು, ಇವರ ನಡುವೆ ಆಸ್ತಿ ಕಲಹವಿತ್ತು ಎನ್ನಲಾಗಿದೆ. ನಿನ್ನೆ ದಿನ ಸಂಜೆ ವೇಳೆ ಆಸ್ತಿ ವಿಚಾರದಲ್ಲಿ ಇವರುಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ಈ ಸಂದರ್ಭ ಟಿಮ್ಸನ್ ತನ್ನ ಬಳಿಯಿದ್ದ ಪಿಸ್ತೂಲ್‌ನಿಂದ ಗುಂಡು ಹಾರಿಸಿದ್ದಾನೆ. ಈ ಸಂದರ್ಭ ರೋಷನ್ ಮತ್ತು ಸಚಿನ್ ಗಾಯಗೊಂಡಿದ್ದಾರೆ. ಬಳಿಕ ಸ್ಥಳೀಯರು ಗಾಯಾಳುಗಳನ್ನು ಗೋಣಿಕೊಪ್ಪದ ಖಾಸಗಿ ಆಸ್ಪತ್ರೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಸಹೋದರರು ಪ್ರಾಣಪಾಯದಿಂದ ಪಾರಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಸ್ಥಳಾಂತರಿಸಲಾಗಿದೆ. ಘಟನಾ ಸ್ಥಳಕ್ಕೆ ಶ್ರೀಮಂಗಲ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗುಂಡು ಹಾರಿಸಿದ ಆರೋಪಿ ಬಾಳೇರ ಟಿಮ್ಸನ್ ಅನ್ನು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಪಿಸ್ತೂಲ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರೆಸಿದ್ದಾರೆ.
ವರದಿ: ಚೆಪ್ಪುಡಿರ ರೋಷನ್, ಪೊನ್ನಂಪೇಟೆ.