ತನಗಿಂತ ಚಿಕ್ಕವನ ಪ್ರೇಮದ ಬಲೆಗೆ ಸಿಲುಕಿದ ಯುವತಿ ದುರಂತ ಸಾವು! : ಪ್ರಿಯಕರನ ಅನುಮಾನದ ಕಿರುಕುಳ ತಾಳಲಾರದೆ ನೇಣು ಬಿಗಿದು ಆತ್ಮಹತ್ಯೆ

ತನಗಿಂತ ಚಿಕ್ಕವನ ಪ್ರೇಮದ ಬಲೆಗೆ ಸಿಲುಕಿದ ಯುವತಿ ದುರಂತ ಸಾವು! : ಪ್ರಿಯಕರನ ಅನುಮಾನದ ಕಿರುಕುಳ ತಾಳಲಾರದೆ ನೇಣು ಬಿಗಿದು ಆತ್ಮಹತ್ಯೆ
Photo credit: TV09 (ಫೋಟೋ: ಪ್ರಿಯಾಂಕ)

ಬೆಂಗಳೂರು, ನ. 8: ತನಗಿಂತ ಎರಡು ವರ್ಷ ಚಿಕ್ಕವನ ಪ್ರೇಮದ ಬಲೆಗೆ ಸಿಲುಕಿದ್ದ ಯುವತಿಯೊಬ್ಬಳು ಪ್ರಿಯಕರನ ನಿರಂತರ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಪೀಣ್ಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮೃತರನ್ನು ಹಾಸನ ತಾಲ್ಲೂಕಿನ ಜಾಗರವಳ್ಳಿಯ ಮೂಲದ ಪ್ರಿಯಾಂಕಾ (21) ಎಂದು ಗುರುತಿಸಲಾಗಿದೆ. ಪೋಷಕರಾದ ಶೋಭಾ ಮತ್ತು ಜಯರಾಮ ನಾಯಕ್ ಅವರೊಂದಿಗೆ ನಗರದ ನೆಲಗದ್ದರಹಳ್ಳಿಯಲ್ಲಿ ಅವರು ವಾಸಿಸುತ್ತಿದ್ದರು. ಬಡತನದಲ್ಲೂ ಕೂಲಿ ಕೆಲಸ ಮಾಡಿ ಮಗಳನ್ನು ಈ ದಂಪತಿ ಓದಿಸಿದ್ದರು. ಇತ್ತೀಚೆಗಷ್ಟೇ ಡಿಪ್ಲೋಮಾ ಮುಗಿಸಿ ಖಾಸಗಿ ಕಂಪೆನಿಯ ಅಕೌಂಟೆಂಟ್ ಹುದ್ದೆಗೆ ಪ್ರಿಯಾಂಕ ಕೆಲಸಕ್ಕೆ ಸೇರಿದ್ದರು.

ಆದರೆ, ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಸುಮಂತ್ (19) ಎಂಬ ಯುವಕನೊಡನೆ ಬೆಳೆದ ಪ್ರೇಮವೇ ಆಕೆಯ ಬದುಕಿಗೆ ಮುಕ್ತಾಯ ತಂದಿದೆ. ವಯಸ್ಸಿನಲ್ಲಿ ಚಿಕ್ಕವನಾಗಿದ್ದರಿಂದ ಮಗಳ ಪ್ರೇಮ ವಿಚಾರ ತಿಳಿದ ತಾಯಿ “ಇನ್ನೂ ಎರಡು ವರ್ಷಗಳಾದ ಮೇಲೆ ನೋಡೋಣ” ಎಂದು ಹೇಳಿದ್ದರೂ, ಸುಮಂತ್ ನೀಡುತ್ತಿದ್ದ ಎನ್ನಲಾಗಿದೆ. ಕಿರುಕುಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರಿಂದ ಪ್ರಿಯಾಂಕ ಮನನೊಂದಿದ್ದರು ಎಂದು ತಿಳಿದು ಬಂದಿದೆ.

ಪ್ರಿಯಾಂಕಾ ಫೋನ್ ಬ್ಯುಸಿ ಬಂದರೂ ಅನುಮಾನ, ಮಾತನಾಡಲು ತಡವಾದರೂ ಬೈಗುಳ — ಈ ರೀತಿಯ ಹಿಂಸಾತ್ಮಕ ವರ್ತನೆ ಆಕೆಗೆ ಮಾನಸಿಕ ಆಘಾತ ತಂದಿತ್ತು. ಅಕ್ಟೋಬರ್ 30ರ ಬೆಳಿಗ್ಗೆ ಸುಮಂತ್ ಕರೆಮಾಡಿ ಗಲಾಟೆ ಮಾಡಿ ನೀನು ಆತ್ಮಹತ್ಯೆ ಮಾಡಿಕೊ ಎಂದು ಪ್ರಚೋದನೆ ನೀಡಿದ್ದಾನೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಮನನೊಂದ ಪ್ರಿಯಾಂಕಾ ಅಂದು ಮನೆಯಲ್ಲೇ ನೇಣು ಬಿಗಿದುಕೊಂಡಿದ್ದಾಳೆ. ತಾಯಿ ಕೆಲಸಕ್ಕೆ ತೆರಳಿದ್ದಾಗ ಈ ದುರ್ಘಟನೆ ನಡೆದಿದೆ. ಫೋನ್ ಕರೆಗಳಿಗೆ ಸ್ಪಂದನೆ ಸಿಗದೆ ಪಕ್ಕದ ಮನೆಯವರ ಸಹಾಯದಿಂದ ಬಾಗಿಲು ಮುರಿದು ನೋಡಿದಾಗ ಪ್ರಿಯಾಂಕಾ ನೇಣು ಹಾಕಿಕೊಂಡಿರುವುದು ಪತ್ತೆಯಾಗಿದೆ.

ಆತ್ಮಹತ್ಯೆಗೆ ಮುನ್ನ ಪ್ರಿಯಾಂಕಾ, ಪ್ರಿಯಕರನೊಡನೆ ನಡೆದ ದೂರವಾಣಿ ಮಾತುಕತೆಗಳನ್ನೆಲ್ಲಾ ರೆಕಾರ್ಡ್ ಮಾಡಿಟ್ಟಿದ್ದಾಳೆ ಎಂದು ಕುಟುಂಬದವರು ತಿಳಿಸಿದ್ದಾರೆ. ಈ ಆಡಿಯೋದಲ್ಲಿ ಸುಮಂತನ ಕಿರುಕುಳದ ಸಾಕ್ಷ್ಯಗಳಿವೆ ಎಂದು ಹೇಳಲಾಗಿದೆ.

ಪ್ರಕರಣದ ಕುರಿತು ಪೀಣ್ಯಾ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ಮತ್ತು ಕಿರುಕುಳದ ಆರೋಪದಡಿ ಸುಮಂತ್ ವಿರುದ್ಧ ದೂರು ದಾಖಲಾಗಿದೆ. ಆದರೆ ಘಟನೆಯಿಂದ ವಾರ ಕಳೆದರೂ ಆರೋಪಿಯನ್ನು ಬಂಧಿಸದಿರುವುದರಿಂದ ಪೋಷಕರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.