ಆಲೂರು ಸಿದ್ದಾಪುರ ರೋಟರಿ ಕ್ಲಬ್ ಪದಾಧಿಕಾರಿಗಳ ಪದಗ್ರಹಣ

ಶನಿವಾರಸಂತೆ:ರೋಟರಿ ಸಂಸ್ಥೆಯ ಸದಸ್ಯರು ಹೃದಯವಂತರಾಗಿದ್ದು ಈ ಮೂಲಕ ನಿಸ್ವಾರ್ಥವಾಗಿ ಸಮಾಜ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ ಎಂದು ರೋಟರಿ ಸಂಸ್ಥೆಯ ಮೇಜರ್ ಡೋನರ್ ಮತ್ತು ರೋಟರಿ ಪದಗ್ರಹಣ ಅಧಿಕಾರಿ ಪ್ರಕಾಶ್ ಕಾರಂತ್ ಅಭಿಪ್ರಾಯಪಟ್ಟರು. ಆಲೂರುಸಿದ್ದಾಪುರದ ವೈಭವ್ ಕನ್ವೇಶನ್ ಸಭಾಂಗಣದಲ್ಲಿ ಆಲೂರು ಸಿದ್ದಾಪುರ ರೋಟರಿ ಮಲ್ಲೇಶ್ವರ ಸಂಸ್ಥೆಯ 2025-26ನೇ ಸಾಲಿನ ನೂತನ ಪದಾಧಿಕಾರಿ ಪದಗ್ರಹಣ ಸಮಾರಂಭದಲ್ಲಿ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿ ಮಾತನಾಡಿದರು.
ಸಮಾಜಕ್ಕೆ ರೋಟರಿ ಸಂಸ್ಥೆಯ ಕೊಡುಗೆ ಅಪಾರವಾಗಿದ್ದು ಈ ಮೂಲಕ ರೋಟರಿ ಸದಸ್ಯರು ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರೋಟರಿ ಸಂಸ್ಥೆಗೆ ಸಮಾಜದಲ್ಲಿ ಜಾತಿ-,ಜನಾಂಗ ಮೇಲುಕೀಳುಗಳೆಂಬ ಬೇದಭಾವಗಳಿಲ್ಲದೆ ಸಮಾಜದಲ್ಲಿ ಎಲ್ಲಾರೂ ಸಮಾನರು ಎಂಬ ದೇಯ್ಯೋದ್ದೇಶದಿಂದ ಅಭಿವೃದ್ದಿಗೊಳಿಸುತ್ತಿರುವ ಜೊತೆಯಲ್ಲಿ ಜನ ಜಾಗೃತಿಯನ್ನು ಮೂಡಿಸುತ್ತಿದೆ.ಸಮಾಜ ಬದಲಾದಂತೆ ರೋಟರಿ ಸಂಸ್ಥೆಯು ಸಮಾಜದಲ್ಲಿ ಬದಲಾವಣೆ ತರುವ ಕಾರ್ಯವನ್ನು ಮಾಡುತ್ತಿದೆ. ರೋಟರಿ ಸಂಸ್ಥೆಯು ಮಹಿಳೆಯರು ಸಮಾಜ ಸೇವೆಯಲ್ಲಿ ತೋಡಗಿಸಿಕೊಳ್ಳಲು ಅವಕಾಶ ನೀಡುತ್ತಿದ್ದು ಈ ಮೂಲಕ ಮಹಿಳಾ ರೋಟರಿ ಸದಸ್ಯರು ಸಮಾಜದಲ್ಲಿ ಗೌರವಕ್ಕೆ ಪಾತ್ರರಾಗಿದ್ದಾರೆ ಎಂದರು.
ರೋಟರಿ ಕ್ಲಬ್ ಜಿಲ್ಲಾ ರಾಜ್ಯಪಾಲ ಉಲ್ಲಾಸ್ ಕೃಷ್ಣ ಮಾತನಾಡಿ,ರೋಟರಿ ಸಂಸ್ಥೆಯು ಸಮಾಜಮುಖಿ ಕಾರ್ಯವನ್ನು ಮಾಡುತ್ತಿರುವ ವಿಶ್ವದ ಏಕೈಕ ಸಮಾಜ ಸೇವಾ ಸಂಸ್ಥೆಯಾಗಿದೆ. ರೋಟರಿ ಸಂಸ್ಥೆಯಡಿಯಲ್ಲಿ ಹಲವು ಯೋಜನೆಗಳಿದ್ದು ಈ ಮೂಲಕ ಸಮಾಜ ಸೇವೆ ಮಾಡುತ್ತಿದೆ ಸಂಧ್ಯಸುರಕ್ಷೆ ಯೋಜನೆ, ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಸಂಬಂಧ ಪಟ್ಟ ವಿವಿಧ ಹತ್ತು ಯೋಜನೆಗಳು ರೋಟರಿ ಸಂಸ್ಥೆಯಡಿಯಲ್ಲಿ ನಡೆಯುವ ಕಾರ್ಯಕ್ರಮಗಳ ಮೂಲಕ ಅಭಿವೃದ್ದಿ ಕಾರ್ಯದಲ್ಲಿ ನರೆವಾಗುತ್ತಿದೆ ಎಂದರು.
ರೋಟರಿ ಸಂಸ್ಥೆಯ ವಲಯ ಸೇನಾನಿ ಎ.ಎಸ್.ರಾಮಣ್ಣ ಮಾತನಾಡಿ,ರೋಟರಿ ಸಂಸ್ಥೆಯ ಸದಸ್ಯರು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಿರುವ ನಿಟ್ಟಿನಲ್ಲಿ ಸದಸ್ಯರಿಗೆ ಮಾರ್ಗದರ್ಶನ ಸಲಹೆ ಸಹಕಾರ ನೀಡುವ ಮೂಲಕ ರೋಟರಿ ಸಂಸ್ಥೆಯನ್ನು ಅಭಿವೃದ್ದಿ ಪಡಿಸಲು ಸಹಕಾರ ನೀಡುವುದಾಗಿ ಭರವಸೆ ವ್ಯಕ್ತ ಪಡಿಸಿದರು.
ರೋಟರಿ ಸಂಸ್ಥೆಯ 2025-26ನೇ ಸಾಲಿನ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಎಚ್.ನಾರಾಯಣಸ್ವಾಮಿ,ನಮ್ಮ ರೋಟರಿ ಸಂಸ್ಥೆ ಈಗಾಗಲೇ ಉದ್ದೇಶಿಸಿರುವ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ರೋಟರಿ ವ್ಯಾಪ್ತಿಯಲ್ಲಿ ಸಮಾಜ ಸೇವೆ ಮಾಡುತ್ತೇವೆ ಈ ನಿಟ್ಟಿನಲ್ಲಿ ರೋಟರಿ ಸಂಸ್ಥೆಯ ಸದಸ್ಯರು ಸಹಕಾರ ಮಾರ್ಗದರ್ಶನ ನೀಡುವಂತೆ ಮನವಿ ಮಾಡಿದರು. ಸಮಾರಂಭದಲ್ಲಿ ರೋಟರಿ ಸಂಸ್ಥೆಯ ನಿರ್ಗಮಿತ ಅಧ್ಯಕ್ಷ ಟಿ.ವಿ.ದಯಾನಂದ್ ಅಧ್ಯಕ್ಷತೆವಹಿಸಿ ಮಾತನಾಡಿದರು ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾದ ಎಚ್.ಕೆ.ಕಿರಣ್ ಮಾತನಾಡಿದರು. ಈ ಸಂದರ್ಭದಲ್ಲಿ ಹತ್ತನೇ ತರಗತಿ ಪರೀಕ್ಷೆಯಲ್ಲಿ ಉತ್ತಮ ಅಂಕಪಡೆದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲಾಯಿತು. ಕಾರ್ಯಕ್ರಮದಲ್ಲಿ ರೋಟರಿ ಮಲ್ಲೇಶ್ವರ ಸಂಸ್ಥೆಯ ಸದಸ್ಯರು, ಜಿಲ್ಲೆ ಹೊರ ಜಿಲ್ಲೆಗಳ ರೋಟರಿ ಪ್ರಮುಖರು, ಮಹಿಳಾ ರೋಟರಿ ಸದಸ್ಯರು ಮತ್ತು ರೋಟರಿ ಕುಟುಂಬ ಸದಸ್ಯರು ಪಾಲ್ಗೊಂಡಿದ್ದರು.