ಅಮ್ಮತ್ತಿ:60 ಲಕ್ಷ ವೆಚ್ಚದಲ್ಲಿ ವಿವಿಧ ರಸ್ತೆ ಕಾಮಗಾರಿಗೆ ಚಾಲನೆ : 2 ಕೋಟಿ ವೆಚ್ಚದ ನೂತನ ವಿದ್ಯುತ್ ಪರಿವರ್ತಕಗಳ ಲೋಕಾರ್ಪಣೆ ಮಾಡಿದ ಶಾಸಕ ಎಎಸ್ ಪೊನ್ನಣ್ಣ
ವಿರಾಜಪೇಟೆ: ವಿಧಾನಸಭಾ ಕ್ಷೇತ್ರದ ವಿರಾಜಪೇಟೆ ತಾಲೂಕು, ಅಮ್ಮತಿ ಗ್ರಾಮಕ್ಕೆ, ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭೇಟಿ ನೀಡಿದರು. ಶಾಸಕರ ಅನುದಾನದ ₹ 70 ಲಕ್ಷಗಳ ರಸ್ತೆ ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿದ್ದು, ಇನ್ನೂ ಹೆಚ್ಚಿನ ಅನುದಾನದ ₹ 60 ಲಕ್ಷಗಳಲ್ಲಿ ಅಮ್ಮತ್ತಿ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ರಸ್ತೆಗಳಿಗೆ ಭೂಮಿ ಪೂಜೆ ಯನ್ನು ಈ ಸಂದರ್ಭದಲ್ಲಿ ನೆರವೇರಿಸಿದರು.
ಸ್ಥಳೀಯರ ಬೇಡಿಕೆಗೆ ಅನುಸಾರವಾಗಿ ಮಾನ್ಯ ಶಾಸಕರು ಅನುದಾನವನ್ನು ಒದಗಿಸಿದ್ದರು. ಬಳಿಕ ಈ ಭಾಗದಲ್ಲಿ ಶಾಸಕರ ಪ್ರಯತ್ನದಿಂದಾಗಿ ರಾಜ್ಯ ಸರ್ಕಾರ ಒದಗಿಸಿದ ₹2ಕೋಟಿ 7ಲಕ್ಷದ ವಿಶೇಷ ಅನುದಾನದಲ್ಲಿ ನಿರ್ಮಿಸಿದ ವಿದ್ಯುತ್ ಪರಿವರ್ತಕಗಳನ್ನು ಲೋಕಾರ್ಪಣೆ ಗೊಳಿಸಿದರು. ಇದರಲ್ಲಿ ನೂತನ ವಿದ್ಯುತ್ ಪರಿವರ್ತಕಗಳ ಅಳವಡಿಕೆ, ಉತ್ತಮ ಗುಣಮಟ್ಟದ ವಿದ್ಯುತ್ ಸರಬರಾಜು ತಂತಿಗಳ ಬದಲಾವಣೆ, ನೂತನ ವಿದ್ಯುತ್ ಮಾರ್ಗಗಳ ನಿರ್ಮಾಣ ಹಾಗೂ ವಿವಿಧ ವಿದ್ಯುತ್ ಸಂಬಂಧಿತ ಅಭಿವೃದ್ಧಿ ಕೆಲಸಗಳು ಒಳಗೊಂಡಿವೆ.
ಬಳಿಕ ಮಾತನಾಡಿದ ಮಾನ್ಯ ಶಾಸಕರು, ರೈತರು, ವಾಣಿಜ್ಯೋದ್ಯಮಿಗಳು ಹಾಗೂ ವಿದ್ಯುತ್ ಗ್ರಾಹಕರ ಅನುಕೂಲಕ್ಕಾಗಿ ನಿರಂತರ ಹಾಗೂ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡಲೆಂದು ಹೊಸ ವಿದ್ಯುತ್ ಪರಿವರ್ತಕಗಳನ್ನು ಅಳವಡಿಸಿರುವುದಾಗಿ ಹೇಳಿದರು. ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳುವುದರೊಂದಿಗೆ ವಿದ್ಯುತ್ ಪೋಲಾಗುವುದನ್ನು ತಡೆಗಟ್ಟುವ ಜವಾಬ್ದಾರಿಯನ್ನು ವಹಿಸಿಕೊಂಡು, ಈ ರೀತಿಯಾಗಿ ನಾಡಿನ ಏಳಿಗೆಗೆ ತಮ್ಮ ಕೊಡುಗೆಯನ್ನು ನೀಡಬೇಕೆಂದು ಕರೆ ನೀಡಿದರು.
ಮಾನ್ಯ ಶಾಸಕರ ಅನುದಾನದಲ್ಲಿ ಈಗಾಗಲೇ ಪೂರ್ಣಗೊಂಡ ತಡೆಗೋಡೆಯ ಉದ್ಘಾಟನೆಯನ್ನು ಸಹ ನೆರವೇರಿಸಿದರು. ಇಲ್ಲಿಯ ಬದ್ರಿಯಾ ಮಸೀದಿಯಲ್ಲಿ ನಾಳೆಯಿಂದ ಆರಂಭವಾಗಲಿರುವ ಪವಿತ್ರ ಸಲಾತ್ ಕಾರ್ಯಕ್ರಮಕ್ಕೆ ಶುಭ ಕೋರಿದರು. ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರು ತಿತೀರ ಧರ್ಮಜ ಉತ್ತಪ್ಪ, ಅಮ್ಮತಿ ವಲಯ ಅಧ್ಯಕ್ಷರು ದಿವಾಕರ್, ಪಕ್ಷದ ಮುಖಂಡರು ನೌಶಾದ್, ಚೆಕು, ಅನಿಲ್, ರಫೀಕ್, ತೆನ್ನಿರ ಮೈನಾ, ಮಂಜು ದೇವಯ್ಯ ಕುಂಡಚ್ಚಿರ, ಯುವ ಕಾಂಗ್ರೆಸ್ ಅಧ್ಯಕ್ಷರು ಪಟ್ಟಡ ರಕ್ಷಿತ್ ಚಂಗಪ್ಪ, ಶಬೀರ್ ,ಚೋಕಂಡ ಸಂಜು ಸುಬ್ಬಯ್ಯ ಹಾಗೂ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.
