ಮಧುರೈಗೆ ಕರೆದುಕೊಂಡು ಹೋಗಿ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ಯತ್ನ? ಮಂಗಳಮುಖಿಯರಿಂದ ಯುವಕನ ಅಪಹರಣ

ಮಧುರೈಗೆ ಕರೆದುಕೊಂಡು ಹೋಗಿ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ಯತ್ನ?   ಮಂಗಳಮುಖಿಯರಿಂದ ಯುವಕನ ಅಪಹರಣ
Photo credit:Asiant news

ಬೆಂಗಳೂರು: ಡಿಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುವಕನ ಅಪಹರಣ ಹಾಗೂ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ.

 ಮಂಗಳಮುಖಿಯರ ತಂಡ 25 ವರ್ಷದ ಯುವಕನನ್ನು ಅಪಹರಿಸಿ ತಮಿಳುನಾಡಿನ ಮಧುರೈಗೆ ಕರೆದುಕೊಂಡು ಹೋಗಿದ್ದರೆಂಬ ಆರೋಪ ಕುಟುಂಬಸ್ಥರು ಹಾಗೂ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಹೊರಬಿದ್ದಿದೆ.

ಶುಕ್ರವಾರ ಯುವಕ ಕಾಣೆಯಾಗುತ್ತಿದ್ದಂತೆ, ಕುಟುಂಬವು ಡಿಜೆ ಹಳ್ಳಿ ಠಾಣೆಗೆ ದೂರು ನೀಡಿತ್ತು. ತನಿಖೆಯಲ್ಲಿ ಯುವಕ ಮಧುರೈ ಪ್ರದೇಶದಲ್ಲಿ ಇರಬಹುದೆಂಬ ಸುಳಿವಿನ ಆಧಾರದ ಮೇಲೆ ಪೊಲೀಸರ ವಿಶೇಷ ತಂಡ ಕಾರ್ಯಾಚರಣೆ ನಡೆಸಿ, ಸ್ಥಳೀಯ ಪೊಲೀಸರ ಸಹಕಾರದಿಂದ ಯುವಕನನ್ನು ರಕ್ಷಿಸಿ ಬೆಂಗಳೂರಿಗೆ ಕರೆತರಲಾಗಿದೆ.

ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಯ ಅನುಮಾನ

ಪತ್ತೆಯಾದಾಗ ಯುವಕ ಮಹಿಳೆಯರ ವೇಷದಲ್ಲಿದ್ದುದರಿಂದ ಶಸ್ತ್ರಚಿಕಿತ್ಸೆ ನಡೆದಿದೆಯೇ ಎಂಬ ಅನುಮಾನ ವ್ಯಕ್ತವಾಗಿದ್ದು, ಯುವಕನನ್ನು ಅಂಬೇಡ್ಕರ್ ಆಸ್ಪತ್ರೆಗೆ ದಾಖಲಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.

ಆರೋಪಿಗಳು ಎಸ್ಕೇಪ್

ಈ ನಡುವೆ, ಅಪಹರಣ ಹಾಗೂ ಶಸ್ತ್ರಚಿಕಿತ್ಸೆಗೆ ಯತ್ನಿಸಿದ ಮಂಗಳಮುಖಿಯರ ತಂಡ ಸ್ಥಳದಿಂದ ಪರಾರಿಯಾಗಿದ್ದು, ಅವರ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ. ಯುವಕನಿಂದ ವಿವರವಾದ ಹೇಳಿಕೆ ಪಡೆಯಲು ಪೊಲೀಸರು ಮುಂದಾಗಿದ್ದಾರೆ. 

ಅಪಹರಣಕ್ಕೊಳಗಾದ ಯುವಕ ನಗರದ ಮಸೀದಿಯೊಂದರ ಮೌಲಾನ ಅವರ ಪುತ್ರ. ಪ್ರಕರಣ ಸಂಬಂಧ ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.