ಪಂಚ ಗ್ಯಾರಂಟಿ ಯೋಜನೆ ಬಗ್ಗೆ ಜಾಗೃತಿ ‘ಕಲಾಜಾಥಾ ಪ್ರಚಾರ ಆಂದೋಲನ’ಕ್ಕೆ ಗಣ್ಯರಿಂದ ಚಾಲನೆ
ಮಡಿಕೇರಿ :-ಸರ್ಕಾರದ ಪಂಚ ಗ್ಯಾರಂಟಿ ಯೋಜನೆ ಸೇರಿದಂತೆ ಸರ್ಕಾರ ಜಾರಿಗೆ ತಂದಿರುವ ವಿವಿಧ ಯೋಜನೆಗಳ ಕುರಿತಂತೆ ‘ಕಲಾಜಾಥಾ ಪ್ರಚಾರ ಆಂದೋಲನ’ ವಾಹನಕ್ಕೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಹಾಗೂ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ ಮತ್ತು ಜಿ.ಪಂ.ಸಿಇಒ ಅವರು ಪ್ರತ್ಯೇಕವಾಗಿ ಚಾಲನೆ ನೀಡಿದರು.
ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಹಾಗೂ ಜಿಲ್ಲಾ ಪಂಚಾಯಿತಿ ಭವನದ ಆವರಣದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷರಾದ ಧರ್ಮಜ ಉತ್ತಪ್ಪ ಹಾಗೂ ಜಿ.ಪಂ.ಸಿಇಒ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆ ಜಿಲ್ಲಾ ಘಟಕದ ಉಪಾಧ್ಯಕ್ಷರಾದ ಕೆ.ಸಿ.ಭೀಮಯ್ಯ, ನಾಸೀರ್, ಪಿ.ಆರ್.ಪಂಕಜ, ಸದಸ್ಯರಾದ ಬಿ.ಒ.ಅಣ್ಣಯ್ಯ, ಸುಂದರ, ಕೆ.ಎಂ.ಬಶೀರ್, ಧನ್ಯ, ಕೆ.ಜಿ.ಫೀಟರ್, ಮಂದ್ರಿರ ಮೋಹನ್ ದಾಸ್, ಸೆಸ್ಕ್ ಕಾರ್ಯಪಾಲಕ ಎಂಜಿನಿಯರ್ ರಾಮಚಂದ್ರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ಪ್ರಸನ್ನ ಕುಮಾರ್, ಜಿಲ್ಲಾ ಉದ್ಯೋಗ ವಿನಿಮಯಾಧಿಕಾರಿ ಮಂಜುನಾಥ್, ಕೆಎಸ್‍ಆರ್‍ಟಿಸಿ ಮಡಿಕೇರಿ ಘಟಕದ ವ್ಯವಸ್ಥಾಪಕರಾದ ಈರಸಪ್ಪ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಶಶಿಧರ, ವಾರ್ತಾಧಿಕಾರಿ ಚಿನ್ನಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ ಇತರರು ಇದ್ದರು.
ಈ ಸಂದರ್ಭದಲ್ಲಿ ಪಂಚ ಗ್ಯಾರಂಟಿ ಯೋಜನೆ ಸಂಬಂಧಿಸಿದಂತೆ ಕಲಾವಿದರಾದ ಈ.ರಾಜು ಮತ್ತು ತಂಡದವರು ಹಾಡು ಹಾಡಿ ಗಮನ ಸೆಳೆದರು. ಕಲಾಜಾಥ ವಾಹನದಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆ ಸಂಬಂಧ ವೀಡಿಯೋ ಪ್ರದರ್ಶನ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ ಅವರು ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಾದ ಗ್ಯಾರಂಟಿ ಬಗ್ಗೆ ಮತ್ತಷ್ಟು ಜಾಗೃತಿ ಮೂಡಿಸಬೇಕು ಎಂದರು.
ಇಡೀ ದೇಶದಲ್ಲಿಯೇ ರಾಜ್ಯದ ಗ್ಯಾರಂಟಿ ಯೋಜನೆಗಳು ಮಾದರಿಯಾಗಿದೆ. ಈ ಯೋಜನೆಗಳನ್ನು ರಾಷ್ಟ್ರದ ಇತರ ರಾಜ್ಯಗಳು ಅನುಸರಿಸುತ್ತಿರುವುದು ವಿಶೇಷವಾಗಿದೆ. ಆದ್ದರಿಂದ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
